Site icon Vistara News

Kshatriya Samavesha: ಜ.29ರ ಕರ್ನಾಟಕ ಕ್ಷತ್ರಿಯ ಒಕ್ಕೂಟ ಸಮಾವೇಶ ಬೆಂಬಲಿಸಿ ರಾಮ ಕ್ಷತ್ರಿಯ ಸಂಘಟನೆಯ ಬೃಹತ್ ಬೈಕ್ ರ‍್ಯಾಲಿ

A massive bike rally of Rama Kshatriya Sangathan in support of Karnataka Kshatriya Okkoota convention on Jan. 29

ಬೆಂಗಳೂರು: ಸಾಮಾಜಿಕ ಮತ್ತು ರಾಜಕೀಯ ಸಂಘಟನೆ ಬಲಪಡಿಸಲು ಕರ್ನಾಟಕ ಕ್ಷತ್ರಿಯ ಒಕ್ಕೂಟದಿಂದ ಬೆಂಗಳೂರಿನಲ್ಲಿ ಜ.29ರಂದು ಬೃಹತ್‌ ಸಮಾವೇಶ ನಡೆಯಲಿದೆ. ಈ ಸಮಾವೇಶವನ್ನು (Kshatriya Samavesha) ಬೆಂಬಲಿಸಿ ರಾಮ ಕ್ಷತ್ರಿಯ ಸಮುದಾಯದವರಿಂದ ಭಾನುವಾರ ಬೃಹತ್ ಬೈಕ್ ರ‍್ಯಾಲಿ ನಡೆಯಿತು. ಸಾವಿರಾರು ಮಂದಿ ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶ್ರೀ ಲಕ್ಷ್ಮಿ ನಾರಾಯಣ ದೇವಸ್ಥಾನದಿಂದ ಬೈಕ್‌ ರ‍್ಯಾಲಿ ಆರಂಭವಾಯಿತು. ಮಂಕಿಯ ಶ್ರೀ ಕೊಕ್ಕೇಶ್ವರದ ರಾಮ ಕ್ಷತ್ರಿಯ ಸಭಾ ಭವನದವರೆಗೆ ಬೈಕ್ ರ‍್ಯಾಲಿ ಮುಂದುವರಿಯಿತು. ಬಳಿಕ ರಾಮ ಕ್ಷತ್ರಿಯ ಸಭಾಭವನದಲ್ಲಿ ನಡೆದ ಸಭೆಯಲ್ಲಿ, ಕರ್ನಾಟಕ ಕ್ಷತ್ರಿಯ ಒಕ್ಕೂಟದ ಸಮಾವೇಶಕ್ಕೆ ಬೆಂಬಲ ವ್ಯಕ್ತಪಡಿಸಲಾಯಿತು.

ಇದನ್ನೂ ಓದಿ | Vote for OPS: ಶಿವಮೊಗ್ಗದಲ್ಲಿ ಒಪಿಎಸ್‌ ಜಾರಿಗೆ ಆಗ್ರಹಿಸಿ ಬೃಹತ್‌ ಬೈಕ್ ರ‍್ಯಾಲಿ; 3 ಸಾವಿರಕ್ಕೂ ಹೆಚ್ಚು ನೌಕರರು ಭಾಗಿ

ಈ ಸಂದರ್ಭದಲ್ಲಿ ಮಾತನಾಡಿದ ರಾಮ ಕ್ಷತ್ರಿಯ ಮಹಾ ಸಂಘದ ಅಧ್ಯಕ್ಷ ಎಸ್‌ ಕೆ ನಾಯ್ಕ್‌ ಅವರು, ಬೈಕ್ ರ‍್ಯಾಲಿಯನ್ನು ಯಶಸ್ವಿಗೊಳಿಸಿದ ಯುವ ಜನರಿಗೆ ಅಭಿನಂದನೆ ಸಲ್ಲಿಸಿದರು. ಬೆಂಗಳೂರಿನಲ್ಲಿ ನಡೆಯಲಿರುವ ಸಮಾವೇಶಕ್ಕೆ ಬೆಂಬಲ ನೀಡಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದರು. ಎಲ್ಲ ಕ್ಷತ್ರಿಯ ಪಂಗಡಗಳು ಒಂದುಗೂಡಬೇಕು.‌ ಹೀಗೆ ಒಂದಾಗಿ ಹೋರಾಡಿದರೆ ಮಾತ್ರ ರಾಜಕೀಯ ಮತ್ತು ಸಾಮಾಜಿಕ ಸ್ಥಾನಮಾನ ಸಿಗಲು ಸಾಧ್ಯ ಎಂದವರು ವಿವರಿಸಿದರು.

ಬೆಂಗಳೂರಿನಲ್ಲಿ ಸಮಾವೇಶ
ರಾಜ್ಯದಲ್ಲಿರುವ ಎಲ್ಲ ಕ್ಷತ್ರಿಯ ಪಂಗಡಗಳನ್ನು ಒಟ್ಟಾಗಿ ಸೇರಿಸಿ ಉದಯ್‌ ಸಿಂಗ್‌ ಅವರ ನೇತೃತ್ವದಲ್ಲಿ ಕರ್ನಾಟಕ ಕ್ಷತ್ರಿಯ ಒಕ್ಕೂಟ ರಚಿಸಲಾಗಿದೆ. ರಾಜ್ಯದಲ್ಲಿ ಒಟ್ಟು 38 ಕ್ಷತ್ರಿಯ ಪಂಗಡಗಳಿದ್ದು, 1.5 ಕೋಟಿಗಿಂತ ಹೆಚ್ಚು ಕ್ಷತ್ರಿಯ ಸಮುದಾಯದವರಿದ್ದಾರೆ. ರಾಜ್ಯದ ಹಲವು ವಿಧಾನಸಭೆ ಕ್ಷೇತ್ರಗಳಲ್ಲಿ ಈ ಕ್ಷತ್ರಿಯ ಪಂಗಡಗಳ ಮತಗಳು ನಿರ್ಣಾಯಕವಾಗಿವೆ. ಈ ಎಲ್ಲ ಪಂಗಡಗಳನ್ನು ಈಗ ಒಟ್ಟಾಗಿ ಸೇರಿಸಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಸಂಘಟಿಸುವ ಉದ್ದೇಶದಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜ.29ರಂದು ಬೃಹತ್ ಸಮಾವೇಶ ಆಯೋಜಿಸಲಾಗಿದೆ.

ಇದನ್ನೂ ಓದಿ | Kshatriya Samavesha | ಜ.29ರ ಕರ್ನಾಟಕ ಕ್ಷತ್ರಿಯ ಒಕ್ಕೂಟ ಸಮಾವೇಶಕ್ಕೆ ರಾಮ ಕ್ಷತ್ರಿಯ ಸಂಘಟನೆಯ ಬೆಂಬಲ

ಕ್ಷತ್ರಿಯ ಸಮಾಜದ ಒಗ್ಗಟ್ಟನ್ನು ಸಮಾವೇಶದಲ್ಲಿ ತೋರಿಸಬೇಕಾಗಿದೆ. ಹಾಗಾಗಿ ರಾಮ ಕ್ಷತ್ರಿಯ ಸಮುದಾಯದ ಸಂಘಟನೆಗಳು ಈ ಸಮಾವೇಶವನ್ನು ಬೆಂಬಲಿಸಲು ನಿರ್ಧರಿಸಿವೆ. ಈ ಸಮಾವೇಶದಲ್ಲಿ ರಾಮ ಕ್ಷತ್ರಿಯ ಸಮಾಜದದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಎಸ್ ಕೆ ನಾಯ್ಕ್ ಅವರು ಮನವಿ ಮಾಡಿದ್ದಾರೆ.

Exit mobile version