ಬೆಂಗಳೂರು: ಸಾಮಾಜಿಕ ಮತ್ತು ರಾಜಕೀಯ ಸಂಘಟನೆ ಬಲಪಡಿಸಲು ಕರ್ನಾಟಕ ಕ್ಷತ್ರಿಯ ಒಕ್ಕೂಟದಿಂದ ಬೆಂಗಳೂರಿನಲ್ಲಿ ಜ.29ರಂದು ಬೆಳಗ್ಗೆ 10 ಗಂಟೆಯಿಂದ ಬೃಹತ್ ಸಮಾವೇಶ (Kshatriya Samavesha) ನಡೆಯಲಿದೆ. ಸುಮಾರು 5 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ.
ಈ ಸಮಾವೇಶಕ್ಕೆ ರಾಮ ಕ್ಷತ್ರಿಯ ಇತ್ಯಾದಿ 38ಕ್ಕೂ ಹೆಚ್ಚು ಒಳ ಪಂಗಡಗಳ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಈ ಸಮಾವೇಶವನ್ನು ಬೆಂಬಲಿಸಿ ರಾಮ ಕ್ಷತ್ರಿಯ ಸಮುದಾಯದವರಿಂದ ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಿಂದ ಬೃಹತ್ ಬೈಕ್ ರ‍್ಯಾಲಿ ನಡೆದಿತ್ತು. ಸಾವಿರಾರು ಮಂದಿ ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.
ರಾಜ್ಯದಲ್ಲಿರುವ ಎಲ್ಲ ಕ್ಷತ್ರಿಯ ಪಂಗಡಗಳನ್ನು ಒಟ್ಟಾಗಿ ಸೇರಿಸಿ ಉದಯ್ ಸಿಂಗ್ ಅವರ ನೇತೃತ್ವದಲ್ಲಿ ಕರ್ನಾಟಕ ಕ್ಷತ್ರಿಯ ಒಕ್ಕೂಟ ರಚಿಸಲಾಗಿದೆ. ರಾಜ್ಯದಲ್ಲಿ ಒಟ್ಟು 38 ಕ್ಷತ್ರಿಯ ಪಂಗಡಗಳಿದ್ದು, 1.5 ಕೋಟಿಗಿಂತ ಹೆಚ್ಚು ಕ್ಷತ್ರಿಯ ಸಮುದಾಯದವರಿದ್ದಾರೆ. ರಾಜ್ಯದ ಹಲವು ವಿಧಾನಸಭೆ ಕ್ಷೇತ್ರಗಳಲ್ಲಿ ಈ ಕ್ಷತ್ರಿಯ ಪಂಗಡಗಳ ಮತಗಳು ನಿರ್ಣಾಯಕವಾಗಿವೆ. ಈ ಎಲ್ಲ ಪಂಗಡಗಳನ್ನು ಈಗ ಒಟ್ಟಾಗಿ ಸೇರಿಸಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಸಂಘಟಿಸುವ ಉದ್ದೇಶದಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜ.29ರಂದು ಬೃಹತ್ ಸಮಾವೇಶ ಆಯೋಜಿಸಲಾಗಿದೆ.
ಕ್ಷತ್ರಿಯ ಸಮಾಜದ ಒಗ್ಗಟ್ಟನ್ನು ಸಮಾವೇಶದಲ್ಲಿ ತೋರಿಸಬೇಕಾಗಿದೆ. ಹಾಗಾಗಿ ರಾಮ ಕ್ಷತ್ರಿಯ ಸಮುದಾಯದ ಸಂಘಟನೆಗಳು ಈ ಸಮಾವೇಶವನ್ನು ಬೆಂಬಲಿಸಲು ನಿರ್ಧರಿಸಿವೆ. ಈ ಸಮಾವೇಶದಲ್ಲಿ ರಾಮ ಕ್ಷತ್ರಿಯ ಸಮಾಜದದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ರಾಮ ಕ್ಷತ್ರಿಯ ಮಹಾ ಸಂಘದ ಅಧ್ಯಕ್ಷ ಎಸ್.ಕೆ. ನಾಯ್ಕ್ ಅವರು ಮನವಿ ಮಾಡಿದ್ದಾರೆ.
ರಾಜ್ಯದ ಬೇರೆ ಬೇರೆ ಭಾಗಗಳಿಂದ ಸಮಾವೇಶಕ್ಕಾಗಿ ಆಗಮಿಸುವವರಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿರುವ ರಾಮ ಕ್ಷತ್ರಿಯ ಸಮುದಾಯದವರು ನೆರವು ನೀಡಬೇಕು ಎಂದು ಎಸ್.ಕೆ. ನಾಯ್ಕ್ ಅವರು ಕೋರಿದ್ದಾರೆ.
ಬೆಂಗಳೂರಿನಲ್ಲಿ ನಡೆಯಲಿರುವ ಸಮಾವೇಶಕ್ಕೆ ಬೆಂಬಲ ನೀಡಬೇಕಾದ ಅಗತ್ಯವಿದೆ. ಎಲ್ಲ ಕ್ಷತ್ರಿಯ ಪಂಗಡಗಳು ಒಂದುಗೂಡಬೇಕು. ಹೀಗೆ ಒಂದಾಗಿ ಹೋರಾಡಿದರೆ ಮಾತ್ರ ರಾಜಕೀಯ ಮತ್ತು ಸಾಮಾಜಿಕ ಸ್ಥಾನಮಾನ ಸಿಗಲು ಸಾಧ್ಯ ಎಂದು ಎಸ್. ಕೆ. ನಾಯ್ಕ್ ವಿವರಿಸಿದ್ದಾರೆ.
ಅರಮನೆ ಮೈದಾನದಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಮರಾಠ ಕ್ಷತ್ರಿಯ, ರಾಮ ಕ್ಷತ್ರಿಯ, ಅರಸು, ಅಗ್ನಿಕುಲ, ವಹ್ನಿಕುಲ, ಭಾವಸಾರ, ಸೋಮವಂಶ ಸಹಸ್ರಾರ್ಜುನ, ರಜಪೂತ ಮುಂತಾದ 38 ಕ್ಷತ್ರಿಯ ಸಮುದಾಯದವರು ಭಾಗವಹಿಸಲಿದ್ದಾರೆ.