Site icon Vistara News

Kshatriya Samavesha | ಜ.29ರ ಕರ್ನಾಟಕ ಕ್ಷತ್ರಿಯ ಒಕ್ಕೂಟ ಸಮಾವೇಶಕ್ಕೆ ರಾಮ ಕ್ಷತ್ರಿಯ ಸಂಘಟನೆಯ ಬೆಂಬಲ

ಬೆಂಗಳೂರು: ಸಾಮಾಜಿಕ ಮತ್ತು ರಾಜಕೀಯ ಶಕ್ತಿ ಪ್ರದರ್ಶನಕ್ಕಾಗಿ ಕರ್ನಾಟಕ ಕ್ಷತ್ರಿಯ ಒಕ್ಕೂಟದಿಂದ (Kshatriya Samavesha) ಬೆಂಗಳೂರಿನಲ್ಲಿ ಜ.29ರಂದು ಬೃಹತ್‌ ಸಮಾವೇಶ ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ರಾಮ ಕ್ಷತ್ರಿಯ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ರಾಮ ಕ್ಷತ್ರಿಯ ಮಹಾ ಸಂಘದ ಅಧ್ಯಕ್ಷ ಎಸ್‌. ಕೆ. ನಾಯ್ಕ್‌ ಅವರು ಮನವಿ ಮಾಡಿದ್ದಾರೆ.

ಎಸ್‌. ಕೆ. ನಾಯ್ಕ್‌

ರಾಜ್ಯದಲ್ಲಿರುವ ಎಲ್ಲ ಕ್ಷತ್ರಿಯ ಪಂಗಡಗಳನ್ನು ಒಟ್ಟಾಗಿ ಸೇರಿಸಿ ಉದಯ್‌ ಸಿಂಗ್‌ ಅವರ ನೇತೃತ್ವದಲ್ಲಿ ಕರ್ನಾಟಕ ಕ್ಷತ್ರಿಯ ಒಕ್ಕೂಟ ರಚಿಸಲಾಗಿದೆ. ರಾಜ್ಯದಲ್ಲಿ ಒಟ್ಟು 38 ಕ್ಷತ್ರಿಯ ಪಂಗಡಗಳಿದ್ದು, 1.5 ಕೋಟಿಗಿಂತ ಹೆಚ್ಚು ಕ್ಷತ್ರಿಯ ಸಮುದಾಯದವರಿದ್ದಾರೆ. ರಾಜ್ಯದ ಹಲವು ವಿಧಾನಸಭೆ ಕ್ಷೇತ್ರಗಳಲ್ಲಿ ಈ ಕ್ಷತ್ರಿಯ ಪಂಗಡಗಳ ಮತಗಳು ನಿರ್ಣಾಯಕವಾಗಿವೆ. ಈ ಎಲ್ಲ ಪಂಗಡಗಳನ್ನು ಈಗ ಒಟ್ಟಾಗಿ ಸೇರಿಸಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಸಂಘಟಿಸಲಾಗುತ್ತಿದೆ.

ರಾಜ್ಯದಲ್ಲಿ ಕ್ಷತ್ರಿಯ ಸಮುದಾಯದವರು ಗಣನೀಯ ಸಂಖ್ಯೆಯಲ್ಲಿದ್ದರೂ, ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ. ಜತೆಗೆ, ಇತರ ಸೌಕರ್ಯಗಳೂ ಸರ್ಕಾರದಿಂದ ಲಭ್ಯವಾಗುತ್ತಿಲ್ಲ. ಈ ಸಮುದಾಯದ ಬಹಳಷ್ಟು ಪಂಗಡಗಳು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿವೆ. ಹಾಗಾಗಿ ಈ ಸಮುದಾಯದವರನ್ನು ಸಂಘಟಿಸುವ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್‌ ಸಮಾವೇಶ ಆಯೋಜಿಸಲಾಗಿದೆ ಎಂದು ಎಸ್‌. ಕೆ. ನಾಯ್ಕ್‌ ವಿವರಿಸಿದ್ದಾರೆ.

ಇದನ್ನೂ ಓದಿ | Sri Bharathi Prakashana | ಸಿದ್ದಾಪುರದ ಗೋಸ್ವರ್ಗದಲ್ಲಿ ‘ಕುಮಾರವ್ಯಾಸಭಾರತ ಕಥಾಮೃತ’ ಕೃತಿ ಲೋಕಾರ್ಪಣೆ

ಸಮಾವೇಶವನ್ನು ಬೆಂಬಲಿಸಿ ಹೊನ್ನಾವರದಿಂದ ಬೃಹತ್‌ ಬೈಕ್‌ ರ‍್ಯಾಲಿ…
ಬೆಂಗಳೂರಿನಲ್ಲಿ ನಡೆಯಲಿರುವ ಸಮಾವೇಶಕ್ಕೆ ಪೂರಕವಾಗಿ ಜ. 22ರಂದು ರಾಮ ಕ್ಷತ್ರಿಯ ಯೂತ್‌ ಬೈಕ್‌ ರ‍್ಯಾಲಿ ಆಯೋಜಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶ್ರೀ ಲಕ್ಷ್ಮಿ ನಾರಾಯಣ ದೇವಸ್ಥಾನದಿಂದ ಬೈಕ್‌ ರ‍್ಯಾಲಿ ಮಧ್ಯಾಹ್ನ 3.30ರಿಂದ ಆರಂಭವಾಗಿ ಮಂಕಿಯ ಶ್ರೀ ಕೊಕ್ಕೇಶ್ವರದ ರಾಮ ಕ್ಷತ್ರಿಯ ಸಭಾ ಭವನವನ್ನು ತಲುಪಲಿದೆ. ರಾಮ ಕ್ಷತ್ರಿಯ ಸಮಾಜದ ನೂರಾರು ಯುವಕರು ಈ ಬೃಹತ್‌ ಬೈಕ್‌ ರ‍್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ ಎಂದು ಎಸ್‌. ಕೆ. ನಾಯ್ಕ್‌ ಅವರು ಮಾಹಿತಿ ನೀಡಿದ್ದಾರೆ.

ಕ್ಷತ್ರಿಯ ಸಮಾಜದ ಒಗ್ಗಟ್ಟನ್ನು ಸಮಾವೇಶದಲ್ಲಿ ತೋರಿಸಬೇಕಾಗಿದೆ. ಹಾಗಾಗಿ ರಾಮ ಕ್ಷತ್ರಿಯ ಸಮುದಾಯದ ಸಂಘಟನೆಗಳು ಈ ಸಮಾವೇಶವನ್ನು ಬೆಂಬಲಿಸಲು ನಿರ್ಧರಿಸಿವೆ. ಈ ಸಮಾವೇಶಕ್ಕೆ ರಾಮ ಕ್ಷತ್ರಿಯ ಸಮಾಜದದವರು ಮನಪೂರ್ವಕವಾಗಿ ಸಾಥ್‌ ನೀಡಬೇಕು ಎಂದವರು ಕೋರಿದ್ದಾರೆ.

ಇದನ್ನೂ ಓದಿ | Super Speciality Hospital | ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅಡಿಗಲ್ಲು ಶೀಘ್ರ: ಸಿಎಂ ಬಸವರಾಜ ಬೊಮ್ಮಾಯಿ

Exit mobile version