ಬೆಂಗಳೂರು: ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಗಳೂರಿಗೆ (KSR Bengaluru station) ಬಂದಿದ್ದ ಮಹಿಳೆಯೊಬ್ಬರು ಇಳಿಯುವ ಅವಸರದಲ್ಲಿ ತಮ್ಮ ಚಿನ್ನಾಭರಣವಿದ್ದ ಬ್ಯಾಗ್‌ವೊಂದನ್ನು ಮರೆತು ಹೋಗಿದ್ದರು. ಚಿನ್ನಾಭರಣ ಕಾಣದೆ ಕಂಗಾಲಾಗಿದ್ದ ಮಹಿಳೆಗೆ ಬ್ಯಾಗನ್ನು ಹಿಂದಿರುಗಿಸಿ ರೈಲ್ವೆ ಸಿಬ್ಬಂದಿ ಪ್ರಾಮಾಣಿಕತೆಯನ್ನು ಮರೆದಿದ್ದಾರೆ.
ಸಂಗೀತಾ ಎಂಬವರು ಭಾನುವಾರ (ಡಿ.11) ಬೆಳಗ್ಗೆ ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ರೈಲಿನ ಮೂಲಕ ಕೆಎಸ್ಆರ್ (ಕ್ರಾಂತಿವೀರ ಸಂಗೊಳ್ಳಿರಾಯಣ್ಣ) ನಿಲ್ದಾಣದ ಪ್ಲಾಟ್‌ಫಾರ್ಮ್ ನಂ.10ಕ್ಕೆ ಬಂದಿಳಿದಿದ್ದರು. ತಮ್ಮ ಕುಟುಂಬ ಸದಸ್ಯರೊಂದಿಗೆ ಅವಸರದಲ್ಲಿ ಇಳಿದು ಬಂಗಾರಪೇಟೆಗೆ ಹೋಗಲು ಮತ್ತೊಂದು ರೈಲು ಸಂಪರ್ಕಿಸಲು ಮುಂದಾಗಿದ್ದಾರೆ. ಈ ವೇಳೆ ತಮ್ಮಲ್ಲಿದ್ದ ಬ್ಯಾಗ್‌ನಿಂದ ಸುಮಾರು 100 ಗ್ರಾಂ ಚಿನ್ನಾಭರಣ (ಅಂದಾಜು ರೂ. 4,80,000/-) ಇದ್ದ ಪೆಟ್ಟಿಗೆ ಕಾಣೆಯಾಗಿದ್ದುದನ್ನು ಗಮನಿಸಿದ್ದಾರೆ.
ಕೂಡಲೇ ರೈಲ್ವೆ ಪೊಲೀಸರನ್ನು ಸಂಪರ್ಕಿಸಿ, ಮಾಹಿತಿ ನೀಡಿದ್ದಾರೆ. ಆದರೆ ಆದಾಗಲೇ ರೈಲ್ವೆ ಸಹಾಯಕ ಮೊಹಮ್ಮದ್ ಐಜಾಜ್ ಎಂಬುವವರು ಪೆಟ್ಟಿಗೆ ಇರುವುದನ್ನು ಕಂಡು ಪರಿಶೀಲಿಸಿದಾಗ ಚಿನ್ನಾಭರಣ ಇರುವುದು ತಿಳಿದುಬಂದಿದೆ. ಕೂಡಲೇ ಪೆಟ್ಟಿಗೆಯನ್ನು ರೈಲ್ವೆ ಪೊಲೀಸರ ಸಮ್ಮುಖದಲ್ಲಿ ಕರ್ತವ್ಯದಲ್ಲಿದ್ದ ನಿಲ್ದಾಣದ ಉಪ ವ್ಯವಸ್ಥಾಪಕ ಶ್ರೀಧರ್ ಅವರಿಗೆ ಹಸ್ತಾಂತರಿಸಿದ್ದರು.
ಸಂಗೀತ ಅವರ ದೂರಿನ ಮೇರೆಗೆ ಪರಿಶೀಲಿಸಿ ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿ, ರೈಲ್ವೆ ಪೊಲೀಸರ ಸಮ್ಮುಖದಲ್ಲಿ ವಸ್ತುಗಳನ್ನು ಗುರುತಿಸಿ ನಿಜವಾದ ಮಾಲೀಕರಿಗೆ ಚಿನ್ನದ ಪೆಟ್ಟಿಗೆಯನ್ನು ಹಸ್ತಾಂತರಿಸಲಾಗಿದೆ. ಇಡೀ ರೈಲ್ವೆ ತಂಡದ ಪ್ರಾಮಾಣಿಕತೆಯನ್ನು, ವಿಶೇಷವಾಗಿ ರೈಲ್ವೇ ಸಹಾಯಕರ ಪ್ರಾಮಾಣಿಕತೆಯನ್ನು ಶ್ಲಾಘಿಸಿದ ಪ್ರಯಾಣಿಕರು ರೈಲ್ವೇ ಮತ್ತು ರೈಲ್ ಸಹಾಯಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್, ರೈಲ್ವೆ ಸಹಾಯಕರ ಪ್ರಾಮಾಣಿಕತೆಯನ್ನು ಶ್ಲಾಘಿಸಿ ಅವರಿಗೆ ಸೂಕ್ತ ಪ್ರಶಸ್ತಿ ನೀಡಲಾಗುವುದು ಎಂದಿದ್ದಾರೆ.
ಇದನ್ನೂ ಓದಿ | Weather Report | ರಾಜ್ಯದಲ್ಲಿ ಇನ್ನೂ 2 ದಿನ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ; ಮಲೆನಾಡು, ಕರಾವಳಿಯಲ್ಲಿ ಇರಲಿದೆ ಅಬ್ಬರ