Site icon Vistara News

KSRTC Logo : ಕೆಎಸ್‌ಆರ್‌ಟಿಸಿ ಇನ್ಮುಂದೆ ಕರ್ನಾಟಕದ್ದೇ; ಮದ್ರಾಸ್‌ ಹೈಕೋರ್ಟ್‌ ಮಹತ್ವದ ತೀರ್ಪು

No legal prohibition for use of KSRTC by Karnataka State Road Transport Corporation

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಕೆ‌ಎಸ್ಆರ್‌ಟಿಸಿ ಹೆಸರು‌ ಬಳಕೆಗೆ ಇದ್ದ ಕಾನೂನು ತೊಡಕು (KSRTC Logo) ಅಂತ್ಯವಾಗಿದೆ. ಕರ್ನಾಟಕದಲ್ಲಿ ಕೆಎಸ್ಆರ್‌ಟಿಸಿ ಹೆಸರನ್ನು ಬಳಸಲು ಇನ್ನು ಮುಂದೆ ಯಾವುದೇ ಅಭ್ಯಂತರವಿಲ್ಲ. ಕೇರಳ RTC ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯು ಮದ್ರಾಸ್ ಹೈಕೋರ್ಟ್‌ನಲ್ಲಿ (Madras High Court) ವಜಾಗೊಂಡಿದೆ.

ಹಿಂದೊಮ್ಮೆ 2021ರಲ್ಲಿ ಕರ್ನಾಟಕದಲ್ಲಿ ಕೆಎಸ್‌ಆರ್‌ಟಿಸಿ ಹೆಸರು ಬಳಸುವಂತಿಲ್ಲ ಎಂದು ಕೇಂದ್ರದ ಟ್ರೆಂಡ್‌ ಮಾರ್ಕ್‌ ರಿಜಿಸ್ಟ್ರಾರ್‌ನಿಂದ ಆದೇಶ ಹೊರಡಿಸಿತ್ತು. ‘ಕೆಎಸ್‌ಆರ್‌ಟಿಸಿ’ ಟ್ರೇಡ್‌ ಮಾರ್ಕ್‌ ಕೇರಳ ಪಾಲಾಗಿತ್ತು. ಆದರೆ ಇದನ್ನೂ ಪ್ರಶ್ನಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕೋರ್ಟ್‌ ಮೆಟ್ಟಿಲೇರಿತ್ತು. ಇದೀಗ ಕೆಎಸ್‌ಆರ್‌ಟಿಸಿ ಟ್ರೇಡ್‌ ಮಾರ್ಕ್‌ ಕರ್ನಾಟಕದ ಪಾಲಾಗಿದೆ. ಈ ಮೂಲಕ ಕೇರಳ ವಿರುದ್ಧ ಕರ್ನಾಟಕಕ್ಕೆ ಜಯ ಸಿಕ್ಕಿದೆ.

ಕಳೆದ 27 ವರ್ಷಗಳಿಂದಲೂ ಕೇರಳ ಹಾಗೂ ಕರ್ನಾಟಕದ ನಡುವೆ ಕೆಎಸ್‌ಆರ್‌ಟಿಸಿ ಟ್ರೇಡ್‌ ಮಾರ್ಕ್‌ನ ಕಾನೂನು ಹೋರಾಟ ನಡೆಯುತ್ತಲೇ ಇತ್ತು. ಇದೀಗ ಎರಡು ರಾಜ್ಯಗಳ ಟ್ರೇಡ್‌ ಮಾರ್ಕ್‌ ಹೋರಾಟದಲ್ಲಿ ಕರ್ನಾಟಕಕ್ಕೆ ಜಯ ಸಿಕ್ಕಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ‘ಕೆ ಎಸ್ ಆರ್ ಟಿ ಸಿ’ ಎಂದು ಸಂಕ್ಷಿಪ್ತ ಬಳಕೆಗಾಗಿ ಟ್ರೇಡ್ ಮಾರ್ಕ್ ಪ್ರಮಾಣ ಪತ್ರವನ್ನು ನೀಡಲು ಅರ್ಜಿ ಸಲ್ಲಿಸಿತ್ತು. ಭಾರತ ಸರ್ಕಾರದ ಟ್ರೇಡ್ ಮಾರ್ಕ್ ರಿಜಿಸ್ಟ್ರಿಯಿಂದ 2013ರಲ್ಲಿ ಟ್ರೇಡ್ ಮಾರ್ಕ್ ಪ್ರಮಾಣಪತ್ರಗಳನ್ನು ಸಂಸ್ಥೆಯು 1.11.1973 ಯಿಂದ ಬಳಸುತ್ತಿರುವುದನ್ನು ಮಂಜೂರು ಮಾಡಲಾಗಿತ್ತು.

ಭಾರತ ಸರ್ಕಾರದ ರಿಜಿಸ್ಟ್ರಾರ್ ಆಫ್ ಕಾಪಿ ರೈಟ್ಸ್‌ನಿಂದ KSRTC ಲೋಗೋ ಮತ್ತು ‘ಗಂಡಭೇರುಂಡ ಗುರುತು’ ಬಳಕೆಗಾಗಿ ಕಾಪಿ ರೈಟ್‌ಅನ್ನು ಸಹ ಪಡೆದಿತ್ತು. ಇದಾದ ನಂತರ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಚೆನ್ನೈನಲ್ಲಿರುವ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಯ (Intellectual Property Appellate Board) ಮುಂದೆ ಇದನ್ನು ಪ್ರಶ್ನಿಸಿತ್ತು. ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ, ಸಂಸ್ಥೆಯು 42 ವರ್ಷಗಳಿಂದ KSRTC ಹೆಸರನ್ನು ಬಳಸುತ್ತಿರುವ ಬಗ್ಗೆ ತಿಳಿದಿತ್ತು. KSRTCಯು ಪಡೆದಿರುವ ಟ್ರೇಡ್ ಮಾರ್ಕ್ ನೋಂದಣಿ ಅಮಾನ್ಯವಾಗಿದೆ ಎಂದು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ ಎಂದು KSRTC ವಾದಿಸಿದೆ.

ಕೇರಳ KRTC ಕೂಡ 2019 ರಲ್ಲಿ KSRTC ಗೂ ಹಿಂದಿನಿಂದ ಸಂಕ್ಷಿಪ್ತ ಹೆಸರನ್ನು ಬಳಸುತ್ತಿರುವ ಕುರಿತು ನೋಂದಣಿಯನ್ನು ಪಡೆದುಕೊಂಡಿತ್ತು. ನಂತರ ಕೇಂದ್ರ ಸರ್ಕಾರವು ಐಪಿಎಬಿಯನ್ನು ರದ್ದುಗೊಳಿಸಿತ್ತು. ಐಪಿಎಬಿ ಮುಂದೆ ಬಾಕಿ ಉಳಿದಿದ್ದ ಪ್ರಕರಣಗಳನ್ನು ಚೆನ್ನೈನಲ್ಲಿರುವ ಮದ್ರಾಸ್ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು. ಡಿ.12ರಂದು ಈ ಅರ್ಜಿಯು ಮದ್ರಾಸ್ ಹೈಕೋರ್ಟ್ ಮುಂದೆ ಬಂದಿದ್ದು, ವಾದ-ವಿವಾದವನ್ನು ಆಲಿಸಿ ಕೇರಳ RTC ಸಲ್ಲಿಸಿದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version