Site icon Vistara News

KSRTC Staff : ಹಬ್ಬದ ದಿನ ಕೆಲಸ ಮಾಡಿದ್ರೆ ಡಬಲ್‌ ಧಮಾಕಾ; ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಗುಡ್ ನ್ಯೂಸ್

Ksrtc Driver Conductor

ಬೆಂಗಳೂರು: ಕೋವಿಡ್‌ ಸೋಂಕು, ಚಾಲಕರ ಸಾಲು ಸಾಲು ಮುಷ್ಕರದಿಂದ ನಷ್ಟವನ್ನು ಅನುಭವಿಸಿದ್ದ ಕೆಎಸ್‌ಆರ್‌ಟಿಸಿ ನಿಗಮವು (KSRTC Staff) ತನ್ನ ಸಿಬ್ಬಂದಿಗೆ ಗುಡ್‌ ನ್ಯೂಸ್‌ವೊಂದನ್ನು ನೀಡಿದೆ. ರಾಷ್ಟ್ರೀಯ ರಜಾ ದಿನ ಹಾಗೂ ಹಬ್ಬದ ರಜಾ ದಿನಗಳಂದು ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಈ ಹಿಂದಿನಂತೆ ಹೆಚ್ಚುವರಿ ವೇತನ (Double Wages) ಪಾವತಿಸಲು ಮುಂದಾಗಿದೆ.

ಪ್ರಸ್ತುತ ‘ಶಕ್ತಿ ಯೋಜನೆʼಯಿಂದಾಗಿ ಪ್ರಯಾಣಿಕರ ದಟ್ಟಣೆ ಅಧಿಕವಾಗಿದೆ. ಹೀಗಾಗಿ ವಾಹನಗಳ ಸುಗಮ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಕಳೆದ ಜುಲೈ (2023) ರಿಂದಲೇ ಜಾರಿಗೆ ಬರುವಂತೆ ಆದೇಶಿಸಲಾಗಿದೆ. ರಾಷ್ಟ್ರೀಯ ರಜಾ ದಿನ ಮತ್ತು ನೌಕರರು ಆಯ್ಕೆ ಮಾಡಿಕೊಂಡ ಹಬ್ಬದ ರಜಾ ದಿನಗಳಂದು ಕರ್ತವ್ಯ ನಿರ್ವಹಿಸಿದ ದಿನಗಳಿಗೆ ಕೋವಿಡ್ 19 ಪೂರ್ವದಲ್ಲಿದ್ದಂತೆ ಹೆಚ್ಚುವರಿ ವೇತನವನ್ನು (Double Wages) ಪಾವತಿಸುವಂತೆ ಆದೇಶ ಹೊರಡಿಸಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ನಿಗಮದ ಸಾರಿಗೆ ಆದಾಯ ಹಾಗೂ ಇತರೇ ಆದಾಯವು ಕುಂಠಿತವಾಗಿತ್ತು. ಈ ಹಿನ್ನೆಲೆಯಲ್ಲಿ ಸವೇತನ ರಜಾ ದಿನಗಳಂದು ಕರ್ತವ್ಯ ನಿರ್ವಹಿಸಿದ ನೌಕರರಿಗೆ ಹೆಚ್ಚುವರಿ ವೇತನವನ್ನು ಕಡಿತ ಮಾಡಲಾಗಿತ್ತು. ಸವೇತನದ ಬದಲಾಗಿ ಪರಿಹಾರ ರಜೆ ನೀಡಲು ನಿರ್ದೇಶನಗಳನ್ನು ನೀಡಲಾಗಿತ್ತು. ಆ ಬಳಿಕ ಜನದಟ್ಟಣೆ ಹೆಚ್ಚಿರುವ ಪೀಕ್ ಸೀಜನ್‌ಗಳಲ್ಲಿ ವಾಹನಗಳ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಡಿಸೆಂಬರ್-2022 ರಿಂದ ಜೂನ್-2023 ರ ವರೆಗೆ ಮಾತ್ರ ಸವೇತನ ರಜೆ ಸೌಲಭ್ಯವನ್ನು ವಿಸ್ತರಿಸಲಾಗಿತ್ತು.

ಸದ್ಯ ಮೊದಲಿನಂತೆ ರಜೆ ಬದಲಾಗಿ ಸವೇತನ ನೀಡಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. ಜತೆಗೆ ಆಯಾ ಡಿಪೋ ಮ್ಯಾನರೇಜರ್‌ಗಳು ಅವಶ್ಯಕತೆಗೆ ಅನುಗುಣವಾಗಿ ಮಾತ್ರ ಸಿಬ್ಬಂದಿಯನ್ನು ಕರ್ತವ್ಯದ ಮೇಲೆ ನಿಯೋಜಿಸುವಂತೆ ಸೂಚನೆ ನೀಡಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version