ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಜನಾಂಗಕ್ಕೆ ಸೇರಿದ ಕುಣಬಿ ಸಮುದಾಯವನ್ನು (Kunabi Community) ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಎರಡು ಮೂರು ದಶಕಗಳಿಂದ ಬೇಡಿಕೆ ಕೇಳಿಬರುತ್ತಿದೆ. ಆದರೆ ಇದುವರೆಗೂ ಯಾವುದೇ ಸರ್ಕಾರಗಳೂ ಬೇಡಿಕೆಗೆ ಮನ್ನಣೆ ನೀಡಿರಲಿಲ್ಲ. ಇದೀಗ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹಾಕಲು ಮುಂದಾಗಿರುವ ಕುಣಬಿ ಸಮುದಾಯದವರು ಜೋಯಿಡಾದಿಂದ ಕಾರವಾರದವರೆಗೆ ಪಾದಯಾತ್ರೆ ಮೂಲಕ ಆಗಮಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾಲಕ್ಕಿ, ಕುಣಬಿ, ಗೌಳಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆನ್ನುವುದು ಎರಡು ಮೂರು ದಶಕಗಳಿಂದ ಕೇಳಿ ಬರುತ್ತಿರುವ ಕೂಗು. ಅದರಲ್ಲೂ ಕುಣಬಿ ಸಮಾಜ ತಮ್ಮನ್ನು 2ಎ ಪ್ರವರ್ಗದಿಂದ ತೆಗೆದು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಾಕಷ್ಟು ಸಮಯಗಳಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮುಂದೆ ತಮ್ಮ ಮನವಿಗಳನ್ನು ಸಲ್ಲಿಸಿಕೊಂಡು ಬರುತ್ತಿದ್ದಾರೆ. ಹಲವರ ಬಳಿ ಮನವಿಯನ್ನು ಮಾಡಿಕೊಂಡು ಬರುತ್ತಿದ್ದರೂ ದಶಕಗಳಿಂದಲೂ ಸಮುದಾಯಕ್ಕೆ ಆಶ್ವಾಸನೆ ದೊರೆಯುತ್ತಿದೆಯೇ ಹೊರತು ಈ ಕುರಿತು ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ. ಹೀಗಾಗಿ ಸರ್ಕಾರದ ಗಮನ ಸೆಳೆಯಲು ಕುಣಬಿ ಸಮುದಾಯದವರು ಜೋಯಿಡಾದಿಂದ ಕಾರವಾರದವರೆಗೆ ಸುಮಾರು 100 ಕಿ. ಮೀ ಪಾದಯಾತ್ರೆ ಮೂಲಕ ಆಗಮಿಸಿ ಬೃಹತ್ ಹೋರಾಟ ನಡೆಸಿದರು. ಕಾರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡು ಪ್ರತಿಭಟಿಸುವ ಮೂಲಕ ಸರ್ಕಾರಕ್ಕೆ ಕುಣಬಿ ಸಮುದಾಯವನ್ನ ಪರಿಶಿಷ್ಟ ಪಂಗಡಕ್ಕೆ ಸೇರಿಸಲೇಬೇಕು ಎಂದು ಪಟ್ಟು ಹಿಡಿದರು.
ಇದನ್ನೂ ಓದಿ |Google lay off : ಗೂಗಲ್ ಮಾತೃಸಂಸ್ಥೆ ಆಲ್ಫಬೆಟ್‌ನಲ್ಲಿ 12,000 ಉದ್ಯೋಗಿಗಳ ವಜಾ
ಗೋವಾ ವಿಧಾನ ಸಭೆಯ ಸ್ಪೀಕರ್ ಬೆಂಬಲ
ಕುಣಬಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಕಳೆದ ಮೂರು ದಶಕಗಳಿಂದ ನಿರಂತರವಾಗಿ ಹೋರಾಟ ನಡೆಸಲಾಗುತ್ತಿದೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ವರ್ಗದವರ ಹೋರಾಟವನ್ನು ಕಡೆಗಣಿಸುತ್ತಲೇ ಬಂದಿವೆ. ಹೀಗಾಗಿ ಜಿಲ್ಲೆಯ ಕುಣಬಿ ಸಮುದಾಯದವರು ಬೃಹತ್ ಪಾದಯಾತ್ರೆಯನ್ನು ಕೈಗೊಳ್ಳುವ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕುಣಬಿ ಸಮುದಾಯದವರು ಮೂಲತಃ ಗೋವಾ ರಾಜ್ಯದವರು. ಪೋರ್ಚುಗೀಸರ ಕಾಲದಲ್ಲಿ ಮತಾಂತರಕ್ಕೆ ಹೆದರಿ ಇವರ ಪೂರ್ವಜರು ಜೋಯಿಡಾ ತಾಲೂಕಿನ ಅರಣ್ಯ ಪ್ರದೇಶಕ್ಕೆ ಬಂದು ನೆಲೆಸಿದ್ದರು. ಗೋವಾದಲ್ಲಿರುವ ಕುಣಬಿ ಸಮುದಾಯಕ್ಕೆ 2007ರಲ್ಲೇ ಪರಿಶಿಷ್ಟ ಪಂಗಡದ ಮಾನ್ಯತೆ ನೀಡಲಾಗಿದೆ. ಆದರೆ, ಕರ್ನಾಟಕದಲ್ಲಿರುವ ಕುಣಬಿ ಸಮುದಾಯದ ಬೇಡಿಕೆಯನ್ನು ರಾಜ್ಯ, ಕೇಂದ್ರ ಸರ್ಕಾರಗಳು ನಿರ್ಲಕ್ಷಿಸಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಗೋವಾ ವಿಧಾನ ಸಭೆಯ ಸ್ಪೀಕರ್ ರಮೇಶ ತಾವಡಕರ್ ಸಹ ಪಾಲ್ಗೊಂಡು ಕುಣಬಿ ಸಮುದಾಯದ ಹೋರಾಟಕ್ಕೆ ಬೆಂಬಲ ನೀಡಿದರು.
ಬಹಳಷ್ಟು ಹಿಂದುಳಿದಿರುವ ಕುಣಬಿ ಸಮಾಜ ತಮ್ಮ ಸಮುದಾಯದ ಅಭಿವೃದ್ಧಿಗಾಗಿ ಪರಿಶಿಷ್ಟ ಪಂಗಡಕ್ಕೆ ಪರಿಗಣಿಸಲು ಬೇಡಿಕೆ ಇಟ್ಟು ಹೋರಾಟ ನಡೆಸುತ್ತಿದ್ದರೂ ಇಂದಿಗೂ ಪರಿಶಿಷ್ಟ ಪಂಗಡಕ್ಕೆ ಸೇರಿಸದಿರುವುದು ನಿಜಕ್ಕೂ ದುರಂತವೇ. ಕೇವಲ 70 ಸಾವಿರ ಜನ ಸಂಖ್ಯೆ ಹೊಂದಿರುವ ಪುಟ್ಟ ಅರಣ್ಯವಾಸಿ ಕುಣಬಿ ಸಮುದಾಯ ಪರಿಶಿಷ್ಟ ಪಂಗಡ ಸೇರ್ಪಡೆ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ನ್ಯಾಯ ಒದಗಿಸುವ ಕಾರ್ಯ ಮಾಡಬೇಕಾಗಿದೆ.
ಇದನ್ನೂ ಓದಿ | Yogi Adityanath Temple | ಅಯೊಧ್ಯೆಯಲ್ಲಿ ಸಿಎಂ ಯೋಗಿಗಾಗಿ ಬೃಹತ್ ದೇವಾಲಯ ನಿರ್ಮಾಣ, ಮುಸ್ಲಿಮರಿಂದಲೂ ಕೊಡುಗೆ