Site icon Vistara News

Kundapra Kannada Habba: ರಾಜಧಾನಿಯಲ್ಲಿ ಕುಂದಾಪ್ರ ಕನ್ನಡ ಡಿಂಡಿಮ; ಶಾಸಕ ಗುರುರಾಜ್ ಗಂಟಿಹೊಳೆ ಫಿದಾ!

Vishva Kundapura Kannada Dina

ಬೆಂಗಳೂರು: ಬೆಂಗಳೂರಿನಲ್ಲಿ ಭಾನುವಾರ (ಜು.23) ಐದನೇ ವಿಶ್ವ ಕುಂದಾಪ್ರ ಕನ್ನಡ ಹಬ್ಬಕ್ಕೆ (Kundapra Kannada Habba) ಅತ್ತಿಗುಪ್ಪೆ ಬಳಿ ಇರುವ ಬಂಟರ ಸಂಘದಲ್ಲಿ ಅದ್ಧೂರಿಯಾಗಿ ಚಾಲನೆ ದೊರೆತಿದೆ. ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಕುಂದಾಪುರ ನೆಲಮೂಲದ ಭಾಷಾ ಸಂಪತ್ತು, ಆಚಾರ-ವಿಚಾರ, ಕಲೆ, ಕ್ರೀಡೆ, ವೈವಿಧ್ಯಮಯ ಆಹಾರ ಮುಂತಾದ ಕುಂದಾಪುರ ಜನಜೀವನ, ಸಾಂಸ್ಕೃತಿಕ ಹಿರಿಮೆ ಅನಾವರಣಗೊಳ್ಳುತ್ತಿದೆ. ಕಂಬಳ ಕ್ಷೇತ್ರದ ಸಾಧಕ ಶಾಂತಾರಾಮ ಶೆಟ್ಟಿ ಬಾರ್ಕೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮತ್ತು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹಾಗೂ ಇತರ ಗಣ್ಯರು ಇದ್ದರು.

ಶಾಂತಾರಾಮ ಶೆಟ್ಟಿ ಅವರು ಕಾರ್ಯಕ್ರಮ ಉದ್ದೇಶಿಸಿ ʻʻಕುಂದಾಪ್ರ ಕನ್ನಡ ಭಾಷೆಯಲ್ಲಿ ಸಹ ಹಲವಾರು ವಿಧ ಅಥವಾ ಶೈಲಿಗಳಿವೆ. ನನಗೆ ಗೌರವ ಸಿಕ್ಕಿರುವುದು ಇದೇ ಭಾಷೆಯಿಂದ. ನಾವು ಎಲ್ಲೇ ಹೋದರೂ ನಮ್ಮ ಭಾಷೆ ತಿಳಿದು ಗುರುತು ಮಾಡುತ್ತಾರೆ. ಕುಂದಾಪ್ರ ಕನ್ನಡ ಇನ್ನೂ ಎತ್ತರಕ್ಕೆ ಬೆಳೆಯುತ್ತದೆ. ನಮ್ಮ ನಮ್ಮ ಮಕ್ಕಳಿಗೆ ಕುಂದಾಪುರ ಭಾಷೆ ಹೇಳಿಕೊಡಬೇಕುʼʼ ಎಂದರು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ʻಯಾವುದೇ ಕ್ಷೇತ್ರದಲ್ಲಿ ನೋಡಿದರೂ ಕುಂದಾಪುರದವರು ಸಿಗುತ್ತಾರೆ. ಕುಂದಾಪುರ ಕನ್ನಡ ಸಂಸ್ಕೃತಿ ಒಳಗೊಂಡ ಭಾಷೆ. ಅಲ್ಲಿಯ ಸ್ಥಳೀಯ ಸಂಸ್ಕೃತಿ ಮತ್ತು ಭಾಷೆಯನ್ನು ಆಚರಣೆ ಮಾಡುವುದು ಸಂತಸ ಸಂಗತಿ. ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದವರು ʻಭಾಷೆ ಅಲ್ಲ ಬದ್ಕ್‌ʼ ಎನ್ನುವ ಟ್ಯಾಗ್‌ಲೈನ್‌ ಇಟ್ಟುಕೊಂಡು, ಪ್ರೀತಿಯಿಂದ ಹೆಮ್ಮೆಯಿಂದ ಆ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಎಲ್ಲ ಸಂಸ್ಕೃತಿಗಳನ್ನು ಇಲ್ಲಿ ತೋರಿಸುತ್ತಿದ್ದಾರೆ. ಇಷ್ಟು ಆಲೋಚನೆ ಮಾಡಿ ಆಯೋಜನೆ ಮಾಡಿರುವುದು ಮೆಚ್ಚಬೇಕುʼʼ ಎಂದರು.

ಇದನ್ನೂ ಓದಿ: Kundapra Kannada Habba: 23ಕ್ಕೆ ʻವಿಶ್ವಕುಂದಾಪ್ರ ಕನ್ನಡ ದಿನʼ: ಸಿಎಂ, ರಿಷಬ್‌ ಶೆಟ್ಟಿ ಉಪಸ್ಥಿತಿ, ಸಾಕ್ಷಿಯಾಗಲಿದೆ ಸಾಂಸ್ಕೃತಿಕ ಸಡಗರ!

ಬರಲಿದ್ದಾರೆ ರಿಷಬ್‌ ಶೆಟ್ಟಿ

ಸಂಜೆ 4.30ಕ್ಕೆ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತಿ ಇರಲಿದ್ದು , ಶಾಸಕರಾದ ಎಂ. ಕೃಷ್ಣಪ್ಪ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ ಹೆಗ್ಡೆ, ಬಂಟರ ಸಂಘ ಬೆಂಗಳೂರು ಅಧ್ಯಕ್ಷರಾದ ಎಂ. ಮುರಳೀಧರ ಹೆಗ್ಡೆಯವರ ಉಪಸ್ಥಿತಿ ಇರಲಿದೆ. ಇದೇ ಸಂದರ್ಭದಲ್ಲಿ ಕುಂದಾಪುರದ ಹಿರಿಮೆಯನ್ನು ಇನ್ನಷ್ಟು ವಿಸ್ತರಿಸಿದ ಸಾಧಕರಾದ ಪ್ರೊ. ಎ.ವಿ ನಾವಡ ಮತ್ತು ಸಂಗೀತ ನಿರ್ದೇಶಕರಾದ ರವಿ ಬಸ್ರೂರು ಇವರು ಊರ ಗೌರವಕ್ಕೆ ಭಾಜನರಾಗಲಿದ್ದಾರೆ. ಖ್ಯಾತ ಚಿತ್ರ ನಟ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ಇನ್ನಿತರರು ಕಾರ್ಯಕ್ರಮದ ಮೆರುಗು ಹೆಚ್ಚಿಸಲಿದ್ದಾರೆ

Exit mobile version