ಬೆಂಗಳೂರು: ನಗರದ ಬಂಟರ ಸಂಘದಲ್ಲಿ ಕುಂದಾಪ್ರ ಕನ್ನಡ ಪ್ರತಿಷ್ಠಾನದಿಂದ ವಿಶ್ವ ಕುಂದಾಪುರ ಕನ್ನಡ ದಿನಾಚರಣೆ ಪ್ರಯುಕ್ತ ಭಾನುವಾರ ‘ಕುಂದಾಪ್ರ ಕನ್ನಡ ಹಬ್ಬ’ವನ್ನು (Kundapra Kannada Habba) ಅದ್ಧೂರಿಯಾಗಿ ಆಚರಿಸಲಾಯಿತು. ರಾಜಕಾರಣಿಗಳು, ಸಿನಿ ಪ್ರಮುಖರು ಸೇರಿ ಸಾವಿರಾರು ಜನರು ಕಾರ್ಯದಲ್ಲಿ ಭಾಗವಹಿಸಿದ್ದರು.
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ಥಾಪನೆ ಆಗಿರುವ ಕುಂದಾಪ್ರ ಕನ್ನಡ ಅಧ್ಯಯನ ಪೀಠಕ್ಕೆ ಅನುದಾನ ನೀಡುವಂತೆ ಕಾರ್ಯಕ್ರಮದಲ್ಲಿ ಒತ್ತಾಯ ವ್ಯಕ್ತವಾಯಿತು. ಈ ವೇಳೆ ಸರ್ಕಾರದಿಂದ ಅನುದಾನ ಕೊಡಿಸುವಂತೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಅವರಿಗೆ ಕುಂದಾಪ್ರ ಕನ್ನಡ ಪ್ರತಿಷ್ಠಾನದಿಂದ ಮನವಿ ಮಾಡಲಾಯಿತು.
ಮನವಿ ಸ್ವೀಕರಿಸಿದ ಜಯಪ್ರಕಾಶ್ ಹೆಗ್ಡೆ ಅವರು ಕುಂದಾಪ್ರ ಕನ್ನಡ ಅಧ್ಯಯನ ಪೀಠಕ್ಕೆ ಅನುದಾನ ಒದಗಿಸುವ ಕುರಿತ ಈ ಮನವಿ ಪತ್ರವನ್ನು ಮುಖ್ಯಮಂತ್ರಿಯವರಿಗೆ ಒಪ್ಪಿಸಿ, ಅನುದಾನವನ್ನು ಕೋರಲಾಗುತ್ತದೆ. ಕುಂದಾಪುರ ಕನ್ನಡ ಕುರಿತು ಎಲ್ಲರ ಜತೆ ಚರ್ಚೆ ಮಾಡಿ ಪರಿಣತರು, ತಜ್ಞರನ್ನು ಅಧ್ಯಯನ ಸಮಿತಿಯಲ್ಲಿ ಹಾಕಿಕೊಳ್ಳಲಾಗುವುದು ಎಂದರು.
ಇದನ್ನೂ ಓದಿ | Hostel Hudugaru Bekagiddare: ಭಾರಿ ಕಲೆಕ್ಷನ್‌ನತ್ತ ʻಹಾಸ್ಟೆಲ್ ಹುಡುಗರುʼ ಸಿನಿಮಾ!
ರವಿ ಬಸ್ರೂರು ಅವರು ಊರಿನ ಅಭಿಮಾನದಿಂದ ಅಲ್ಲೇ ಸ್ಟುಡಿಯೋ ಮಾಡಿದ್ದಾರೆ. ಇದರಿಂದ ಊರಿನ ಹುಡುಗರಿಗೆ ಕೆಲಸ ಸಿಗುತ್ತಿರುವುದಲ್ಲದೆ, ಬೇರೆ ಊರಿನವರೂ ನಮ್ಮೂರಿಗೆ ಬರುವಂತಾಗಿರುವುದು ಉತ್ತಮ ಬೆಳವಣಿಗೆ ಎಂದು ಜಯಪ್ರಕಾಶ್ ಹೆಗ್ಡೆ ಮೆಚ್ಚುಗೆ ಸೂಚಿಸಿದರು.
ಕಾಶೀನಾಥ್, ಉಪೇಂದ್ರ, ರಿಷಬ್, ಪ್ರಮೋದ್ ಶೆಟ್ಟಿ ಎಲ್ಲರೂ ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಾರೆ. ನೀವೆಲ್ಲ ಮಕ್ಕಳಿಗೆ ಬರೀ ವಿದ್ಯಾಭ್ಯಾಸದ ಬಗ್ಗೆ ಮಾತ್ರ ಒತ್ತಾಯ ಮಾಡದೆ, ಅವರ ಆಸಕ್ತಿಯ ಕ್ಷೇತ್ರಗಳಲ್ಲಿ ಮುಂದುವರಿಯಲು ಅನುಕೂಲ ಮಾಡಿಕೊಡಿ. ಈ ಸಾಧಕರೆಲ್ಲರೂ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಮುಂದೆ ಬಂದರು ಎಂದು ಹೇಳಿದರು.
ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮಾತನಾಡಿ, ಜೀವ ಕೊಟ್ಟಿದ್ದು ಕುಂದಾಪುರ, ಜೀವನ ಕೊಟ್ಟಿದ್ದು ಬೆಂಗಳೂರು. ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡರೂ ನಾವು ಕುಂದಾಪುರ ಭಾಷೆಯನ್ನು ಬಿಡಲಿಲ್ಲ. ನಮ್ಮೂರು ಕುಂದಾಪುರದ ಕೆರಾಡಿ ಸರ್ಕಾರಿ ಶಾಲೆಯಲ್ಲೇ ಶಿಕ್ಷಕರಿಲ್ಲ. ಮುಖ್ಯಮಂತ್ರಿಯವರು ಬಂದಿದ್ದರೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲದಿರುವ ಕುರಿತು ಗಮನ ತರಬೇಕಂತಿದ್ದೆ. ಅವರು ಬರಲಿಲ್ಲ, ಈ ವಿಷಯ ಅವರಿಗೆ ಮಾಧ್ಯಮದ ಮೂಲಕ ತಲುಪಿ ಪರಿಹಾರ ಒದಗುತ್ತದೆ ಎಂದು ಆಶಿಸುತ್ತೇನೆ ಎಂದು ತಿಳಿಸಿದರು.
ಕನ್ನಡ ಚಿತ್ರರಂಗಕ್ಕೆ ಕುಂದಾಪುರದ ಕೊಡುಗೆ ದೊಡ್ಡದು. ಆಗಷ್ಟೇ ಮಾತನಾಡಿದ ಉಪೇಂದ್ರ ಅವರು ನನ್ನ ಗುರು ಕಾಶಿನಾಥ್ ಎಂದರು. ಅವರಿಬ್ಬರೂ ಕುಂದಾಪುರದವರು. ಉಪೇಂದ್ರ ಅವರಿಗೆ ಕಾಶೀನಾಥ್ ಗುರುವಾದರೆ ನಮಗೆ ಉಪೇಂದ್ರ ಅವರು ಗುರುಗಳು. ಅವರಿಂದ ಸ್ಫೂರ್ತಿಗೊಂಡೇ ಚಿತ್ರರಂಗಕ್ಕೆ ಬಂದೆ. ನಮ್ಮೂರಿನಿಂದ ಇನ್ನಷ್ಟು ಮಂದಿ ಚಿತ್ರರಂಗಕ್ಕೆ ಬರುವಂತಾಗಲಿ, ನಿಮ್ಮ ಈ ಬೆಂಬಲ ಇದೇ ರೀತಿ ಇರಲಿ. ಇನ್ನಷ್ಟು ಸಿನಿಮಾ ಮಾಡುವ ಶಕ್ತಿ ಬರುತ್ತದೆ ಎಂದು ರಿಷಬ್ ಶೆಟ್ಟಿ ಹೇಳಿದರು.
ಇದನ್ನೂ ಓದಿ | Suriya Sivakumar: ಜನುಮದಿನದಂದೇ ಹುಲಿ ಉಗುರುಗಳ ಹಾರ ಧರಿಸಿ ಉಗ್ರ ರೂಪ ತಾಳಿದ ನಟ ಸೂರ್ಯ!
ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ ಮಾತನಾಡಿ, ಆರು ತಿಂಗಳು ಕುಂದಾಪುರ ಪ್ರದೇಶದಲ್ಲಿ ಕೆಲಸ ಮಾಡಿದ್ದೆ, ಅಲ್ಲಿನ ಭಾಷೆ ಸ್ವಲ್ಪ ಕಲಿತಿದ್ದೆ ಎಂದರು. ಒಂದು ಭಾಷೆಯ ಹಬ್ಬ ಮುಖ್ಯ. ಕುಂದಾಪುರದ ಭಾಷೆಯಲ್ಲಿ ಒಂದು ವೇಗ, ಒಂದು ಜೋರು ಇದೆ ಎನ್ನುತ್ತಾ ಅದಕ್ಕೆ ಕಾರಣವನ್ನು ವಿಶ್ಲೇಷಿದರು. ಕುಂದಾಪುರದವರ ಯಶಸ್ಸಿಗೆ ಅವರ ಭಾಷೆ ಕಾರಣ ಎಂದ ರಾಜ್ ಬಿ. ಶೆಟ್ಟಿ, ಅದು ಅಲ್ಲಿನ ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಹೇಗೆ ಪಾತ್ರ ವಹಿಸುತ್ತದೆ ಎಂಬುದನ್ನೂ ಹೇಳಿದರು. ಅಲ್ಲದೆ ಕುಂದಾಪುರದ ಜನರು ತಮ್ಮ ಮಕ್ಕಳಿಗೆ ಕುಂದಾಪುರ ಭಾಷೆ ಕಲಿಸಿ ಮಾತನಾಡುವಂತೆ ಮಾಡುವ ಮೂಲಕ ಅವರ ಯಶಸ್ಸಿಗೆ ಕಾರಣರಾಗಬಹುದು ಎಂದರು.
ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಮಾತನಾಡಿ, ಮೊದಲು ನಾವೆಲ್ಲ ಬೆಂಗಳೂರಿಗೆ ಬಂದಾಗ ಯಾವ ಊರು ಕೇಳಿದರೆ ಮೊದಲು ಮಂಗಳೂರು ಎನ್ನುತ್ತಿದ್ದೆವು. ಮಂಗಳೂರಲ್ಲಿ ಎಲ್ಲಿ ಕೇಳಿದರೆ ಉಡುಪಿ ಎನ್ನುತ್ತಿದ್ದೆವು, ಉಡುಪಿಯಲ್ಲಿ ಎಲ್ಲಿ ಕೇಳಿದರೆ ಆಗ ಕುಂದಾಪುರ ಅಂತ ಹೇಳುತ್ತಿದ್ದೆವು. ಆಮೇಲೆ ನಾನು ಊರು ಯಾವುದು ಕೇಳಿದರೆ ಮೊದಲು ಬಸ್ರೂರು ಅಂತ ಹೇಳುತ್ತಿದ್ದೆ. ಬಸ್ರೂರು ಎಲ್ಲಿ ಕೇಳಿದರೆ ಕುಂದಾಪುರ, ಕುಂದಾಪುರ ಎಲ್ಲಿ ಎಂದು ಕೇಳಿದರೆ ಉಡುಪಿ, ಉಡುಪಿ ಎಲ್ಲಿ ಎಂದು ಕೇಳಿದರೆ ಮಂಗಳೂರು ಎನ್ನಲಾರಂಭಿಸಿದೆ. ಹೀಗೆ ಬದಲಾವಣೆ ತಂದುಕೊಂಡೆ ಎಂದರು. ನೀವೆಲ್ಲ ಕುಂದಾಪುರ ಕನ್ನಡ ಮಾತನಾಡಲು ಹಿಂಜರಿಯಬೇಡಿ, ಮುಜುಗರವಿಲ್ಲದೆ ಮಾತನಾಡಿ ಎಂದರು.
ನಟ ಪ್ರಮೋದ್ ಶೆಟ್ಟಿ ಮಾತನಾಡಿ, ನಾನು ಬೆಂಗಳೂರಲ್ಲೇ ಹುಟ್ಟಿ ಇಲ್ಲೇ ಬೆಳೆದರೂ ಕುಂದಾಪುರ ಕನ್ನಡ ಮಾತಾಡುತ್ತಿರುವುದಕ್ಕೆ ನನ್ನ ತಂದೆ-ತಾಯಿಯೇ ಕಾರಣ. ಇಲ್ಲಿರುವ ತಾಯಂದಿರು ತಮ್ಮ ಮಕ್ಕಳಿಗೆ ಕುಂದಾಪುರ ಕನ್ನಡ ಭಾಷೆ ಕಲಿಸಿ ಅಂತ ಕೇಳುತ್ತೇನೆ. ಅರೆಹೊಟ್ಟೆ, ಅರೆಭಾಷೆ, ಅರೆಬಟ್ಟೆ ಎಂದು ಕುಂದಾಪುರವನ್ನು ಉಪೇಂದ್ರರವರು ಉತ್ತಮವಾಗಿ ವ್ಯಾಖ್ಯಾನಿಸಿದ್ದನ್ನು ನೆನಪಿಸಿಕೊಂಡರು.
ಇಡೀ ದಿನ ನಡೆದ ಈ ಕುಂದಾಪ್ರ ಕನ್ನಡ ಹಬ್ಬಕ್ಕೆ ಬೆಳಗ್ಗೆ ಕುಂದಾಪುರ ಶಾಸಕ ಕಿರಣ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕಂಬಳ ಕ್ಷೇತ್ರದ ಧುರೀಣ ಶಾಂತರಾಮ ಶೆಟ್ಟಿ ಬಾರ್ಕೂರು ಅವರು ಚಾಲನೆ ನೀಡಿದರು.
ಊರಿನ ಸಾಧಕರಾದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು, ಪ್ರೊ.ಎ.ವಿ.ನಾವಡ ಅವರನ್ನು ಸನ್ಮಾನಿಸಲಾಯಿತು. ಇಡೀ ದಿನ ವಿವಿಧ ಸಾಂಸ್ಕೃತಿಕ-ಮನೋರಂಜನಾ ಕಾರ್ಯಕ್ರಮಗಳಿದ್ದು, ಕುಂದಾಪ್ರ ಸಂಸ್ಕೃತಿ, ಭಾಷೆ-ಬದುಕಿನ ಅನಾವರಣವಾಯಿತು.
ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರಮೋದಚಂದ್ರ ಭಂಡಾರಿ, ಅಧ್ಯಕ್ಷ ಎಂ. ಮುರಳೀಧರ ಹೆಗ್ಡೆ, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ, ಜಂಟಿ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನಾನು ಹುಟ್ಟಿದ್ದು ಬೆಂಗಳೂರಲ್ಲಾದರೂ ನನ್ನ ಮೂಲ ಕುಂದಾಪುರದ ತೆಕ್ಕಟ್ಟೆ. ಅಲ್ಲಿನ ಕಡಲು, ತಿನಿಸು ಎಲ್ಲ ನೆನಪಾಗುತ್ತಿರುತ್ತದೆ. ಭಾಷೆ ಕುರಿತ ಈ ಅಭಿಮಾನ ನೋಡಿ ಖುಷಿ ಆಗುತ್ತಿದೆ.
| ಉಪೇಂದ್ರ, ನಟ-ನಿರ್ದೇಶಕ
ಗಮನ ಸೆಳೆದ ಗ್ರಾಮೀಣ ಕ್ರೀಡಾಕೂಟ, ಯಕ್ಷಗಾನ, ನಾಟಕ
ಕುಂದಾಪುರದ ರಥವನ್ನು ಶಾಸಕ ಗುರುರಾಜ್ ಗಂಟಿಹೊಳೆ, ಕಿರಣ್ ಕೊಡ್ಗಿ, ಕಂಬಳದ ಧುರೀಣರಾದ ಶಾಂತರಾಮ್ ಶೆಟ್ಟಿ ಬಾರ್ಕೂರ್ ಎಳೆದರು. ನಂತರ ಕಂಬಕ್ಕೆ ಕುಂದಾಪುರ ದಿನದ ಲೋಗೋವನ್ನು ಏರಿಸಲಾಯಿತು. ಈ ವೇಳೆ ಪ್ರತಿಷ್ಠಾನದ ಅಧ್ಯಕ್ಷರಾದ ದೀಪಕ್ ಶೆಟ್ಟಿ, ರಾಘವೇಂದ್ರ ಕಾಂಚನ್, ಅಜಿತ್ ಶೆಟ್ಟಿ ಉಳ್ತೂರು ಉಪಸ್ಥಿತಿತರಿದ್ದರು. ಉದ್ಘಾಟನೆ ಬಳಿಕ ಯಕ್ಷಗಾನ, ಹಾಡು ನಾಟಕಗಳು ಜನಸಂಭ್ರಮವನ್ನು ಹೆಚ್ಚು ಮಾಡಿದವು.
ನೃತ್ಯ, ಮಾತಿನ ಚಾವಡಿ, ಖಾದ್ಯ ವೈವಿದ್ಯ, ಟೀಮ್ ಕುಂದಾಪುರಿಯನ್ಸ್ ತಂಡದಿಂದ ಮಿಂಚುಳ- ಇದ್ ಕತ್ಲಿ-ಬೆಳಗಿನ ಕಥಿ ಎಂಬ ವಿಶೇಷ ನಾಟಕ ನೆರೆದವರಿಗೆ ಕುಂದಾಪ್ರ ಕನ್ನಡ ಭಾಷೆಯ ಸೊಬಗನ್ನು ಮತ್ತು ಕನಸ್ಸಿನ ಕುಂದಾಪುರ ಜನರಿಗೆ ಉಣ ಬಡಿಸಿದವು. ಹಾಗೆ ಕರಾವಳಿಯ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ಇದನ್ನೂ ಓದಿ | Sunday Read: ಹೊಸ ಪುಸ್ತಕ: ದಶಕಂಠ ರಾವಣನ ಪುಷ್ಪಕ ವಿಮಾನ
ಗ್ರಾಮೀಣ ಕ್ರೀಡಾಕೂಟಕ್ಕೆ ಶಾಸಕರಾದ ಗುರುರಾಜ್ ಗಂಟಿಹೊಳೆ, ಕಿರಣ್ ಕೊಡ್ಗಿ ಅವರು ಹಣೆಬೊಂಡ ಓಟ ಆಡುವ ಮೂಲಕ ಚಾಲನೆ ನೀಡಿದರು. ವಯಸ್ಕರಿಗಾಗಿ ಹಗ್ಗ ಜಗ್ಗಾಟ, ದಂಪತಿಗಳಿಗಾಗಿ ಪ್ರತ್ಯೇಕ ಕ್ರೀಡೆಗಳು, ಮಕ್ಕಳಿಗೆ ಹೂವಾಡಗಿತ್ತಿ, ಸೈಕಲ್ ಟೈರ್ ಓಟ, ಹಣೆಬೊಂಡ ಓಟ, ಗಿರ್ಗಿಟ್ಲೆ ಓಟ, ಚಿತ್ರಕಲೆ, ಮಹಿಳೆಯರಿಗೆ ಹಲಸಿನ ಕೊಟ್ಟೆ ಕಟ್ಟುವುದು ಇನ್ನಿತರ ಸ್ಪರ್ಧೆಗಳು ಹಬ್ಬದ ಬಯಲಿನ ಕಲರವವನ್ನು ಇಮ್ಮಡಿಗೊಳಿಸಿದವು.
ಕುಂದಾಪುರದ ನುರಿತ ಬಾಣಸಿಗರು ಸ್ಥಳದಲ್ಲೇ ತಯಾರಿಸಿದ ಹಾಲುಬಾಯಿ, ಕೊಟ್ಟೆ ಕಡುಬು, ಗೋಲಿಬಜೆ, ಬನ್ಸ್, ಸುಕ್ಕಿನ್ ಉಂಡೆ, ಎಳ್ ಬಾಯ್ರ್, ಹೆಸ್ರು ಬಾಯ್ರ್‌ನಂತಹ ವಿವಿಧ ಪಾನಕಗಳು ವಿಶೇಷವಾಗಿದ್ದವು. ಹಾಗೇ ಹಬ್ಬದ ವಿಶೇಷ ತರಕಾರಿ ಊಟ, ಇಡ್ಲಿ ಕುಂದಾಪ್ರ ಕೋಳಿ ಸುಕ್ಕ, ಬಿರಿಯಾನಿ, ಚಟ್ಲಿ ಸಾರು ಇನ್ನಿತರ ಅಪರೂಪದ ಖಾದ್ಯಗಳು ಕುಂದಾಪ್ರ ಕನ್ನಡ ಹಬ್ಬಕ್ಕೆ ಮತ್ತಷ್ಟು ರಂಗು ತಂದವು.