Site icon Vistara News

ಸಮುದಾಯದ ಸಹಕಾರದಿಂದ ಸ್ಮಾರ್ಟ್ ಆದ ಕುನ್ನಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ!

kunnal Government School became smart with the cooperation of the community

kunnal Government School became smart with the cooperation of the community

ರಾಜ್ಯದ ಸರ್ಕಾರಿ ಶಾಲೆಗಳು ಸಮಗ್ರವಾಗಿ ಅಭಿವೃದ್ಧಿಯಾಗಬೇಕೆಂಬ ಉದ್ದೇಶದಿಂದ ನಿಮ್ಮ ನೆಚ್ಚಿನ ʻವಿಸ್ತಾರ ನ್ಯೂಸ್‌ʼ ʻನಮ್ಮೂರ ಶಾಲೆ ನಮ್ಮೆಲ್ಲರ ಶಾಲೆʼ ಎಂಬ ವಿಶೇಷ ಅಭಿಯಾನ ಆರಂಭಿಸಿದ್ದು, ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಈ ಆಶಯದಂತೆ ಉತ್ತರ ಕರ್ನಾಟಕದ ಸರ್ಕಾರಿ ಶಾಲೆಯೊಂದನ್ನು ಗ್ರಾಮದ ಶಿಕ್ಷಣ ಪ್ರೇಮಿಗಳು, ಶಾಲೆಯ ಹಳೆಯ ವಿದ್ಯಾರ್ಥಿಗಳು, ಪಾಲಕರು ಹಾಗೂ ಗ್ರಾಮಸ್ಥರು ಅಭಿವೃದ್ಧಿ ಪಡಿಸುತ್ತಿದ್ದಾರೆ. ಈ ಶಾಲೆಯ ಹೆಸರು ʻಕುನ್ನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆʼ.

ಹೌದು, ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕುನ್ನಾಳ ಗ್ರಾಮದಲ್ಲಿರುವ ಈ ಶಾಲೆಯನ್ನು ಗ್ರಾಮಸ್ಥರು ʻನಮ್ಮೂರ ಹೆಮ್ಮೆಯ ಶಾಲೆʼಯಾಗಿ ಅಭಿವೃದ್ಧಿ ಪಡಿಸಿದ್ದಾರೆ. ಈ ಮೂಲಕ ಈ ಭಾಗದ ಸರ್ಕಾರಿ‌ ಶಾಲೆಯ ಮಕ್ಕಳು ಉತ್ಕೃಷ್ಟ ಮಟ್ಟದ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ಪಡೆಯುವಂತೆ ಮಾಡಿದ್ದಾರೆ. ಇಡೀ ಜಿಲ್ಲೆಯೇ ಈಗ ಈ ಶಾಲೆಯತ್ತ ನೋಡುವಂತಾಗಿದೆ.

ಹತ್ತು ಹಲವು ಸಾಧನೆ

ಕುನ್ನಾಳ ಗ್ರಾಮವು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕೊನೆಯ ಹಳ್ಳಿಯಾಗಿದ್ದು, 2022-23 ನೇ ಸಾಲಿನಲ್ಲಿ ಒಟ್ಟು 253 ವಿದ್ಯಾರ್ಥಿಗಳು 1 ರಿಂದ 8 ನೇ ತರಗತಿಗಳಲ್ಲಿ ಓದಿದ್ದಾರೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳ ಸಾಧನೆ ಗಮನಾರ್ಹವಾಗಿದೆ. ದೈಹಿಕ ಶಿಕ್ಷಕ ಬಿ ಬಿ ಹಾಲೊಳ್ಳಿ ಮಾರ್ಗದರ್ಶನದಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಬಾಲಕಿಯರ ವಿಭಾಗದಲ್ಲಿ ಮೂರು ಬಾರಿ ರಾಷ್ಟಮಟ್ಟದ ಖೋ ಖೋ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಜರುಗಿದ ರಾಜ್ಯ ಮಟ್ಟದ 2ನೇ ಮಿನಿ ಓಲಿಂಪಿಕ್ಸ್‌ನಲ್ಲಿ ಈ ಶಾಲೆಯ ಬಾಲಕಿಯರ ಖೋ ಖೋ ತಂಡ ಮಿನಿ ಓಲಿಂಪಿಕ್ಸ್‌ ಟ್ರೋಪಿಯನ್ನು ಮುಡಿಗೇರಿಸಿಕೊಂಡಿದೆ.

ಖೇಲೋ ಇಂಡಿಯಾದಲ್ಲಿಯೂ ಕೂಡ ಈ ಶಾಲೆಯ ವಿದ್ಯಾರ್ಥಿಗಳ ಸಾಧನೆ ಮಾಡಿದ್ದು, ಗ್ರಾಮ, ಶಾಲೆ ಹಾಗೂ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಶಾಲೆಯ ಶಿಕ್ಷಕರಾದ ಬಿ ಬಿ ಹಾಲೊಳ್ಳಿ, ವಾಯ್ ಟಿ. ಬಾರ್ಕಿ, ಎಸ್ ಎ ಕಳ್ಳಿ, ಎಫ್‌. ಎನ್. ಕುರಬೇಟ, ವಿ. ಆರ್. ಅಣ್ಣಿಗೇರಿ, ಕೆ. ಬಿ‌. ಮಾಳಪ್ಪ ಹಾಗೂ ಅಶ್ವಿನಿ ಟಿ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.

ಶಾಲೆಯ ವಿದ್ಯಾರ್ಥಿಗಳಾದ ಮೇಘಾ ಹಕ್ಕಿ, ಸವಿತಾ ನಾಡಗೌಡ್ರ ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರೆ, 2020-21 ನೇ ಸಾಲಿನ ಖೇಲೋ ಇಂಡಿಯಾ ಸ್ಪರ್ಧೆಯ ಖೋ ಖೋ ಪಂದ್ಯಾವಳಿಯಲ್ಲಿ ವಿದ್ಯಾರ್ಥಿಗಳಾದ ಲಕ್ಷ್ಮೀ ಹಿರೇಮಠ ಹಾಗೂ ಅಪೂರ್ವ ಹಿರೇಮಠ ಪ್ರಶಸ್ತಿ ಪಡೆದಿದ್ದಾರೆ. 2021-22 ನೇ ಸಾಲಿನ NMMS ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಾದ ಸವಿತಾ ನಾಡಗೌಡ್ರ, ಚನ್ನಮ್ಮ ಸಿದ್ನಾಳ, ತಂಗೆವ್ವ ಕಳ್ಳಿ ರಾಜಲಕ್ಷ್ಮೀ ಉತ್ತೀರ್ಣರಾಗಿದ್ದಾರೆ.

ಶಾಲೆಯಲ್ಲಿ ಪ್ರತಿ ವರ್ಷವೂ ಶಾಲಾ ಮಟ್ಟದ ಇಂಗ್ಲಿಷ್ ಫೆಸ್ಟ್‌ ಆಯೋಜಿಸಿ, ಶಾಲೆಯಲ್ಲಿ ಇಂಗ್ಲಿಷ್‌ ವಾತಾವರಣ ನಿರ್ಮಿಸಲಾಗುತ್ತಿದೆ. ಇಂಗ್ಲಿಷ್ ಗ್ರಾಮರ್, ಸ್ಪೋಕನ್ ಇಂಗ್ಲಿಷ್, ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕಾರ್ಯಾಗಾರಗಳನ್ನು ಕೂಡ ನಡೆಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲಾಗುತ್ತಿದೆ. 2019-20 ನೇ ಸಾಲಿನ ಜಿಲ್ಲಾ ಮಕ್ಕಳ ಪ್ರಶಸ್ತಿಗೆ ಈ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿನಿ ಸವಿತಾ ನಾಡಗೌಡ್ರ ಭಾಜನರಾಗಿದ್ದಾರೆ.

ಡಿಜಿಟಲ್‌ ತಂತ್ರಜ್ಞಾನ ಬಳಕೆ

ಈ ಶಾಲೆಯಲ್ಲಿ ತಂತ್ರಜ್ಞಾನ ಆದಾರಿತ ಕಲಿಕೋಪಕರಣಗಳನ್ನು ಬಳಸಿ ತರಗತಿಗಳನ್ನು ನಡೆಸುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಡಿಜಿಟಲ್ ತಂತ್ರಜ್ಞಾನದ ಲಾಭವೂ ದೊರೆಯುತ್ತಿದೆ. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ TeachMint ಮೂಲಕ ಎಲ್ಲ ತರಗತಿಗಳಿಗೆ ಆನಲೈನ್ ಬೋಧನೆ, Pschool App, Live Worksheet ಗಳನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ಕೋವಿಡ್ ನಡುವೆಯೂ ಮಕ್ಕಳಿಗೆ ಕಲಿಕಾ ಕೊರತೆಯಾಗದಂತೆ ಶಿಕ್ಷಕರು ನೋಡಿಕೊಂಡಿದ್ದಾರೆ.

ವಿದ್ಯಾರ್ಥಿ ವೇತನದ ಆನಲೈನ್ ಅರ್ಜಿಗಳನ್ನು ಈ ಶಾಲೆಯ 6 ರಿಂದ 8 ನೇ ತರಗತಿ ವಿದ್ಯಾರ್ಥಿಗಳೇ ಸಲ್ಲಿಸುವಷ್ಟು ತಂತ್ರಜ್ಞಾನದಲ್ಲಿ ಪಳಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ದೇಣಿಗೆಯ ಸಹಕಾರದಿಂದ ನಿರ್ಮಿಸಿದ ಸುಸಜ್ಜಿತ “ಗೂಗಲ್ ಡಿಜಿಲ್ಯಾಬ್” (ಕಂಪ್ಯೂಟರ್ ಲ್ಯಾಬ್). ಸುಮಾರು 2.5 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡ “ಗೂಗಲ್ ಡಿಜಿಲ್ಯಾಬ್” ಮೂಲಕ 6 ರಿಂದ 8 ನೇ ತರಗತಿಯ ಬಹುತೇಕ‌ ಮಕ್ಕಳು ಕಂಪ್ಯೂಟರ್‌ ಬಳಕೆಯ ಕುರಿತು ಬೇಸಿಕ್‌ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೆ, Microsoft Word, Microsoft Excel ಹಾಗೂ Power Point Presentation ಗಳನ್ನು ಬಳಸುತ್ತಿದ್ದಾರೆ.

ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರೆಲ್ಲ ಕೂಡಿ ನಮ್ಮೂರ ಸರಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸಬೇಕೆಂಬ ಇಚ್ಛಾಶಕ್ತಿಯ ಫಲವಾಗಿ ಕೆಲವೇ ತಿಂಗಳುಗಳಲ್ಲಿ ಶಾಲೆಯಲ್ಲಿ ಸಮಾಜ ವಿಜ್ಞಾನ, ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ “ಯುನಿವರ್ಸ್‌ ನ್ಯಾನೋ ಇನ್ನೋವೇಟಿವ್ ಲ್ಯಾಬ್” ಆರಂಭವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಐಚ್ಛಿಕ ವಿಷಯಗಳನ್ನು ಪ್ರಯೋಗ ಹಾಗೂ Hands on Material ಗಳ ಮೂಲಕ ಕಲಿಯುವ ಅವಕಾಶ ಲಭ್ಯವಾಗಿದೆ. ಇದಲ್ಲದೆ, 1.50 ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತ “ಜ್ಞಾನ ದೀವಿಗೆ ಗ್ರಂಥಾಲಯ” ವನ್ನು ನಿರ್ಮಿಸಲಾಗಿದೆ. ಈ ಗ್ರಂಥಾಲಯವನ್ನು ಶಾಲಾ ಅವಧಿಯ ನಂತರ ಶಾಲೆಯ ಹಳೆಯ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನಕ್ಕಾಗಿ ಬಳಸುತ್ತಿರುವುದು ಭರವಸೆಯ ಆಶಾಕಿರಣವಾಗಿದೆ.

“ಸಮುದಾಯವೇ ಶಾಲೆಯ ರಾಯಭಾರಿಗಳು” ಎಂಬ ವಾಕ್ಯದಲ್ಲಿ ಅಪಾರ ಭರವಸೆಯನ್ನು ಇಟ್ಟು ಮುಂದಡಿ ಇಟ್ಟಿರುವ ಶಾಲಾ ಶಿಕ್ಷಕ ಬಳಗ, ಸ್ಥಳೀಯ ಯುವಕ ಸಂಘಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದೆ. ʻಭಗತ್ ಸಿಂಗ್‌ ಯೂತ್‌ ಕ್ಲಬ್‌ʼ ಕುನ್ನಾಳ ಇವರು ಪ್ರತೀ ವರ್ಷ ಭಗತ್ ಸಿಂಗ್‌ ಜಯಂತಿಯಂದು ವಿನೂತನ‌ ರೀತಿಯಲ್ಲಿ ಈ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇವರ ಸಹಕಾರದಿಂದಲೇ ಶಾಲೆಯ ಹೊರಗೋಡೆಯ ಕಪ್ಪು ಹಲಗೆಗಳ ಮೇಲೆ ಸ್ವಾತಂತ್ರ್ಯ ಹೋರಾಟಗಾರರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ, ರಾಷ್ಟ್ರೀಯ ಚಿಹ್ನೆಗಳ ಹಾಗೂ ಮಕ್ಕಳ ಕಲಿಕೆಗೆ ಉಪಯುಕ್ತವಾದ ಚಿತ್ರಗಳನ್ನು ಬರೆಯಿಸಲಾಗಿದೆ. ಸಾಲುಮರದ ತಿಮ್ಮಕ್ಕ ಹೆಸರಿನ ಇಕೋ ಕ್ಲಬ್ ಅಡಿಯಲ್ಲಿ ವನ‌ಮಹೋತ್ಸವಗಳ ಮೂಲಕ ಹಸಿರು ಶಾಲೆಯನ್ನಾಗಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿದೆ ಶಾಲೆ

ಶಾಲೆಯ ಎಲ್ಲ ಚಟುವಟಿಕೆಗಳ ಮಾಹಿತಿಗಾಗಿ “ನಮ್ಮೂರ ಸರಕಾರಿ ಶಾಲೆ ಕುನ್ನಾಳ” ಎಂಬ ಹೆಸರಿನ ಫೇಸ್‌ಬುಕ್ ಪುಟವನ್ನು ಈ ಶಾಲೆಯು ಹೊಂದಿದ್ದು, ಫೇಸ್ ಬುಕ್ ಬಳಕೆದಾರರು ಶಾಲಾ ಚಟುವಟಿಕೆಗಳನ್ನು ನಿರಂತರವಾಗಿ ನೋಡಬಹುದಾಗಿದೆ. ಈ ಮೂಲಕ ಶಾಲೆಯ ಕುರಿತು ಮಾಹಿತಿ ಪಡೆದ ಬೆಳಗಾವಿಯ ಪ್ರತಿಷ್ಠಿತ ಲೇಕವ್ಯೂವ್ ಆಸ್ಪತ್ರೆಯ ವೈದ್ಯ ಶಶಿಕಾಂತ ಕುಲಗೊಡ ಶಾಲೆಗೆ ಭೇಟಿ ನೀಡಿ, ತಮ್ಮ ನೇತೃತ್ವದ ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಷನ್ ಧನ ಸಹಾಯದಿಂದ 75 ಇಂಚಿನ Interactive Smart Board ಒಳಗೊಂಡ ಸ್ಮಾರ್ಟ್ ಕ್ಲಾಸ್ ಕಂ English Language Lab ನಿರ್ಮಿಸಿದ್ದಾರೆ.

FIT India ನೋಂದಾಯಿತ ಶಾಲೆಯಾಗಿದ್ದು ಇದರಡಿಯಲ್ಲಿ ಸಮುದಾಯ, ಪಾಲಕರು ಹಾಗೂ ಯುವಕರಿಗಾಗಿ ಯೋಗಾಥಾನ್, ʻಏಕ್‌ ಭಾರತ ಶ್ರೇಷ್ಠ ಭಾರತ್‌ʼ ಉಪಕ್ರಮಗಳ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶಾಲೆಯಲ್ಲಿ ಜರುಗುವ ಎಲ್ಲ ಕಾರ್ಯಕ್ರಮಗಳ ಸಂಘಟನೆ ಹಾಗೂ ನಿರೂಪಣೆಯ ಜವಾಬ್ದಾರಿಯನ್ನು ಸಹ ಶಿಕ್ಷಕರ ಸಹಕಾರದಿಂದ ಮಕ್ಕಳೇ ನಿರ್ವಹಿಸುವುದು ಮಕ್ಕಳ ಕ್ರಿಯಾಶೀಲತೆಯನ್ನು ಎತ್ತಿ ತೋರಿಸುತ್ತಿದೆ.

ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಶ್ರೀಕಾಂತ ಮಕ್ಕಳಗೇರಿ ಹಾಗೂ ಉಪಾಧ್ಯಕ್ಷ ಹಣಮಂತ ಗಾಣಿಗೇರ ಉತ್ತಮ ಗುಣಮಟ್ಟದ ಪ್ರಿಂಟರ್ ಕಂ ಝೆರಾಕ್ಸ್‌ ಮೆಷಿನ್‌ ನೀಡಿದ್ದಾರೆ. ಗ್ರಾಮದ ಎಂಜಿನಿಯರ್ ಸುನೀಲ ಮಳಲಿ ಲ್ಯಾಪ್‌ಟಾಪ್ ಒಂದನ್ನು ಶಾಲೆಗೆ ದೇಣಿಗೆಯಾಗಿ ನೀಡಿದ್ದಾರೆ. ಸಂತೋಷ ಜಕಾತಿ ಕಂಪ್ಯೂಟರ್ ಲ್ಯಾಬ್‌ನ ಯು.ಪಿ.ಎಸ್ ವ್ಯವಸ್ಥೆಯನ್ನು ಮಾಡಿಸಿದ್ದಾರೆ. ಸಮುದಾಯದ ಶಕ್ತಿಯಿಂದಲೇ ಮಾದರಿ ಶಾಲೆಯಾಗಿ ಬದಲಾಗಿರುವ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟ್ಟಕಡೆಯ ಹಳ್ಳಿ ಕುನ್ನಾಳ ಶಾಲೆಯ ಮಕ್ಕಳ ಮುಖದ ಮೇಲೆ ಮಂದಹಾಸ ಮೂಡಿದೆ.

ಈ ಶಾಲೆಯ ಯಶೋಗಾಥೆ ತಾಲೂಕು ಹಾಗೂ ಜಿಲ್ಲೆಯ ಹಲವಾರು ಶಾಲೆಗಳಿಗೆ ಪ್ರೇರಣೆಯಾಗಿ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ಎಸ್.ಡಿ.ಎಮ್.ಸಿ ಪದಾಧಿಕಾರಿಗಳು ಹಾಗೂ ಶಿಕ್ಷಣ ಪ್ರೇಮಿಗಳು ಶಾಲೆಗೆ ಭೇಟಿ ನೀಡುತ್ತಿದ್ದಾರೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಶಾಲೆಯ ಶಿಕ್ಷಕ ಉಮೇಶ್ವರ ಸೋಮಪ್ಪ ಮರಗಾಲ ತಿಳಿಸಿದ್ದಾರೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ : ‘ನಮ್ಮೂರ ಶಾಲೆ-ನಮ್ಮೆಲ್ಲರ ಶಾಲೆ’ ಅಭಿಯಾನಕ್ಕೆ ಜನ ಬೆಂಬಲ ಆಶಾದಾಯಕ

Exit mobile version