ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯವು (Kuvempu University) ಮೊದಲಿನಿಂದಲೂ ಶೈಕ್ಷಣಿಕ ಗುಣಮಟ್ಟದಲ್ಲಿ ಮುಂದಿದ್ದು, ಕಳೆದ ಐದು ವರ್ಷಗಳಲ್ಲಿ ಸಂಶೋಧನೆ (Research) ಮತ್ತು ಬೋಧನಾ ಕಾರ್ಯದಲ್ಲಿ ಅಗ್ರಪಂಕ್ತಿಯಲ್ಲಿ ಗುರುತಿಸಿಕೊಂಡ ಪರಿಣಾಮ ರಾಷ್ಟ್ರಮಟ್ಟದ ಹಲವು ರ‍್ಯಾಂಕಿಂಗ್‌ಗಳಲ್ಲಿ (National rankings) ಉತ್ತಮ ಸಾಧನೆ ತೋರಿದೆ ಎಂದು ವಿವಿಯ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಸಂತಸ ವ್ಯಕ್ತಪಡಿಸಿದರು.
ಕುವೆಂಪು ವಿವಿಯ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಅವರು ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ವಿವಿಯು ಪ್ರೊ. ಎಸ್. ಪಿ. ಹಿರೇಮಠ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ತಮ್ಮ ಬೀಳ್ಕೊಡುಗೆ ಅಭಿನಂದನಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ, ಅವರು ಮಾತನಾಡಿದರು.
ಇದನ್ನೂ ಓದಿ: Security checks : ಶೀಘ್ರ ಬೆಂಗಳೂರು ಸೇರಿ ಪ್ರಮುಖ ಏರ್‌ಪೋರ್ಟ್‌ಗಳಲ್ಲಿ ಫಟಾಫಟ್ ಸೆಕ್ಯುರಿಟಿ ಚೆಕ್
ವಿಶ್ವವಿದ್ಯಾಲಯದಲ್ಲಿ ಉತ್ತಮ ಸಂಶೋಧನೆ ಕೈಗೊಳ್ಳಬಲ್ಲ ಆಸಕ್ತಿ, ಸಾಮರ್ಥ್ಯವಿರುವ ಅಧ್ಯಾಪಕ ವೃಂದವಿದ್ದು, ಹೆ-ಇಂಡೆಕ್ಸ್, ಕೆಎಸ್‌ಯುಆರ್‌ಎಫ್, ಎನ್‌ಐಆರ್‌ಎಫ್ ರ‍್ಯಾಂಕಿಂಗ್‌ಗಳಲ್ಲಿ ಉತ್ತಮ ಅಂಕಗಳೊಂದಿಗೆ ವಿವಿಧ ಸೂಚ್ಯಂಕಗಳಲ್ಲಿ ಸದಾ ಅಗ್ರಸ್ಥಾನ ಪಡೆಯುತ್ತಾ ಬಂದಿದೆ. ನ್ಯಾಕ್ ಮೌಲ್ಯಮಾಪನದಲ್ಲಿ ‘ಎ’ ಗ್ರೇಡ್ ಪಡೆದದ್ದು ಇದಕ್ಕೆ ಮುಕುಟಪ್ರಾಯ ಎಂದು ತಿಳಿಸಿದರು.
ವಿವಿಯ ನೂತನ ಕುಲಸಚಿವ ಪ್ರೊ. ಪಿ. ಕಣ್ಣನ್ ಮಾತನಾಡಿ, ಕುವೆಂಪು ವಿವಿಯು ಇಂದಿನವರೆಗೂ ಹಲವು ಸಾಧನೆಗಳನ್ನು ಮಾಡುತ್ತ ಬಂದಿದ್ದು, ಎಲ್ಲ ಅಧಿಕಾರಿ, ಬೋಧಕವರ್ಗ ತಮ್ಮ ಕೊಡುಗೆ ನೀಡಿದ್ದಾರೆ. ಆದರೆ ಹೊಸ ಸಂದರ್ಭದ ಸವಾಲುಗಳನ್ನು ಎದುರಿಸಲು ವಿವಿಯು ತನ್ನಲ್ಲಿರುವ ಅಪಾರ ಬೌದ್ಧಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಆಂತರಿಕ ಸಂಪನ್ಮೂಲ ಸೃಷ್ಟಿಸೋಣ. ನಿಯಮಿತವಾಗಿ ಕಾರ್ಯಾಗಾರ, ವಿಚಾರ ಸಂಕಿರಣಗಳು, ಕೌಶಲ್ಯ ಆಧರಿತ ಕೋರ್ಸ್ ಗಳ ತರಬೇತಿ ಆರಂಭಿಸಿ ವಿವಿಯನ್ನು ಸದೃಢಗೊಳಿಸೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ನವೀನ್‌ಕುಮಾರ್ ಎಸ್. ಕೆ., ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ. ಎಚ್. ಎನ್. ರಮೇಶಬಾಬು, ಬೋಧಕೇತರ ಸಿಬ್ಬಂದಿ ಒಕ್ಕೂಟದ ಅಧ್ಯಕ್ಷ ಶ್ರೀನಿವಾಸ ಮಾತನಾಡಿದರು.
ಉಪನ್ಯಾಸಕಿ ಡಾ. ಹಸೀನಾ ನಿರೂಪಿಸಿದರು. ಮಾನವ ಸಂಪನ್ಮೂಲ ವಿಭಾಗದ ಉಪಕುಲಸಚಿವ ಡಾ. ಸುರೇಶ್ ಎಂ. ವಂದಿಸಿದರು.