ತೀರ್ಥಹಳ್ಳಿ: ರಾಷ್ಟ್ರಕವಿ ಕುವೆಂಪು ನೆಲದಲ್ಲಿ ಅವರ ಸಾಹಿತ್ಯದಲ್ಲಿನ ರಾಷ್ಟ್ರೀಯತೆ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮವು ಬುಧವಾರ (ಡಿ.೨೮) ಯಶಸ್ವಿಯಾಗಿ ನಡೆಯಿತು. ಕುವೆಂಪು ಅವರ ವಿಶ್ವ ಮಾನವ ಚಿಂತನೆ, ಅಧ್ಯಯನ, ದೃಷ್ಟಿಕೋನಗಳ ಬಗ್ಗೆ ಚಿಂತಕ, ಕನ್ನಡಾಭಿವೃದ್ಧಿ ಪ್ರಾಧಿಕಾರದ ಸದಸ್ಯ ರೋಹಿತ್ ಚಕ್ರತೀರ್ಥ (Rohit Chakratheertha) ವಿಷಯ ಮಂಡಿಸಿದರು. ಇದೇ ವೇಳೆ ಸಭಿಕರ ಜತೆ ಸಂವಾದವು ಗಮನ ಸೆಳೆಯಿತು.
ರೋಹಿತ್ ಚಕ್ರತೀರ್ಥ ಅವರು ಕುವೆಂಪು ಅವರಿಗೆ ಅಪಮಾನ ಮಾಡಿದ್ದಾರೆಂದು ಆರೋಪಿಸಿ ಬುಧವಾರ ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಯನ್ನೂ ನಡೆಸಿದ್ದವು. ಗೋ ಬ್ಯಾಕ್ ಅಭಿಯಾನವನ್ನು ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಿದ್ದರು. ಈ ಎಲ್ಲದರ ಮಧ್ಯೆಯೂ ರೋಹಿತ್ ಚಕ್ರತೀರ್ಥ ಅವರಿಂದ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವು ಸಭಿಕರ ಗಮನವನ್ನು ಸೆಳೆಯಿತು.
ಜತೆಗೆ ಕಾರ್ಯಕ್ರಮ ಆರಂಭದ ಸಂದರ್ಭದಲ್ಲೂ ಕೆಲವರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದ್ದರು. ಆದರೆ, ಇದ್ಯಾವುದನ್ನು ಲೆಕ್ಕಿಸದೆ ರೋಹಿತ್ ಚಕ್ರತೀರ್ಥ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಜತೆಗೆ ರಂಗಮಂದಿರವು ಸಾಹಿತ್ಯಾಸಕ್ತರಿಂದ ಭರ್ತಿಯಾಗಿತ್ತು. ಕಾರ್ಯಕ್ರಮ ಮುಗಿಯುವವರೆಗೂ ಸಭಿಕರು ಆಸಕ್ತಿಯಿಂದ ಕುಳಿತು ಆಲಿಸಿದ್ದು, ವಿಶೇಷವಾಗಿತ್ತು.
ಕುವೆಂಪು ಸಾಹಿತ್ಯದಲ್ಲಿ ರಾಷ್ಟ್ರೀಯ ವಾದ
ಕುವೆಂಪು ಸಾಹಿತ್ಯದಲ್ಲಿ ರಾಷ್ಟೀಯತೆ ವಿಷಯದ ಕುರಿತು ಮಾತನಾಡಿದ ರೋಹಿತ್ ಚಕ್ರತೀರ್ಥ, ಕುವೆಂಪು ಸಾಹಿತ್ಯ ಚಿಂತನೆಯಲ್ಲಿ ರಾಷ್ಟೀಯ ವಾದ ಪ್ರಮುಖ ಅಂಶವಾಗಿತ್ತು. ಅವರು ತನ್ನ ನೆಲದಲ್ಲಿ ಆಳವಾಗಿ ಬೇರು ಬಿಟ್ಟು ಅದರ ಮೂಲಕ ವಿಶ್ವಮಾನವ ಚಿಂತನೆಯನ್ನು ಕಂಡವರು. ಕುವೆಂಪು ಕುರಿತು ಪ್ರಗತಿಪರ ಎನಿಸಿಕೊಂಡವರು ಅರ್ಧ ಸತ್ಯ ಹೇಳುತ್ತಿದ್ದಾರೆ. ಅವರಿಗೆ ವೇದ, ಉಪನಿಷತ್, ರಾಮಾಯಣ, ಮಹಾಭಾರತ ಗ್ರಂಥಗಳ ಮಾತ್ರವಲ್ಲದೆ ಸಂಸ್ಕೃತ ಕುರಿತು ಆಳವಾದ ಅಧ್ಯಯನವಿತ್ತು. ರಾಮನ ವ್ಯಕ್ತಿತ್ವದ ಕುರಿತು ಅಭಿಮಾನವಿತ್ತು. ಹಾಗಿಲ್ಲದೆ ಹೋದರೆ ಅವರು ಶ್ರೀ ರಾಮಾಯಣ ದರ್ಶನಮ್ ಅಂತ ಮೇರು ಕೃತಿ ರಚಿಸಲು ಸಾಧ್ಯವಿರಲಿಲ್ಲ ಎಂದರು.
ಕುವೆಂಪು ರಾಮಕೃಷ್ಣ ಪರಮಹಂಸ, ವಿವೇಕಾನಂದ, ಅರವಿಂದಘೋಷ್ ಅವರ ಚಿಂತನೆಗಳಿಂದ ಪ್ರಭಾವಿತರಾಗಿದ್ದರು. ಅವರ ದೃಷ್ಟಿಕೋನ ಇಡೀ ಸಮಾಜದ ಒಳಿತಿಗಾಗಿ ಮಿಡಿಯುತ್ತಿತ್ತು. ಅವರ ಸಾಹಿತ್ಯದ ಓದುವಿಕೆ ನಮ್ಮ ಯುವ ಜನರಲ್ಲಿ ಇನ್ನಷ್ಟು ಹೆಚ್ಚಬೇಕು ಎಂದು ಹೇಳಿದರು. ಕೊನೆಯಲ್ಲಿ ಸಂವಾದ ನಡೆದಿದ್ದು, ಸಭಿಕರ ಪ್ರಶ್ನೆಗಳಿಗೆ ಚಕ್ರತೀರ್ಥ ಉತ್ತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂಜ್ಯಪಾದ ಚಿಕಿತ್ಸಾಲಯದ ಡಾ. ಜೀವಂಧರ್ ಜೈನ್ ವಹಿಸಿದ್ದರು. ನಂಬಳ ಮುರಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಇದನ್ನೂ ಓದಿ | ನಟಿ ತುನಿಶಾರದ್ದು ಕೊಲೆ ಎಂದ ಕಂಗನಾ ರಣಾವತ್; ತನ್ನ ಪ್ರೇಮಕಥೆಯಲ್ಲಿ ‘ಪ್ರೀತಿ’ಯೇ ಇಲ್ಲ ಎಂಬ ನೋವನ್ನು ಹೆಣ್ಣು ಸಹಿಸೋದಿಲ್ಲ ಎಂದು ಪೋಸ್ಟ್