ಬೆಂಗಳೂರು: “ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ (ಫೆ.೧೭) ಮಂಡಿಸಿದ 2023-24ನೇ ಸಾಲಿನ ಆಯವ್ಯಯದಲ್ಲಿ ಶ್ರಮಿಕರ ಅಭ್ಯುದಯಕ್ಕೆ ಮಹತ್ವದ ಹೆಜ್ಜೆಗಳನ್ನು ಇರಿಸಲಾಗಿದ್ದು, ಇದು ಯಾವುದೇ ತೆರಿಗೆ ಹೊರೆ ಇಲ್ಲದ ಕೃಷಿಕ, ಕಾರ್ಮಿಕ, ಮಹಿಳೆಯರು ಸೇರಿದಂಗೆ “ಸರ್ವೇ ಜನಾಃ ಸುಖಿನೋ ಭವಂತು” ಎಂಬುದನ್ನು ಸಾಕ್ಷಾತ್ ಜಾರಿಗೊಳಿಸುವ ಮಹತ್ವಾಕಾಂಕ್ಷಿ ಬಜೆಟ್ (Karnataka Budget 2023) ಆಗಿದೆ” ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ರಾಜ್ಯ ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಮುಂಗಡ ಪತ್ರದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕಾರ್ಮಿಕರ ಸಂಕ್ಷೇಮದಿಂದ ಅಭಿವೃದ್ಧಿ ಸಾಧ್ಯ ಎಂಬುದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ನಂಬಿಕೆ ಇರಿಸಿರುವುದು ಬಜೆಟ್‍ನಿಂದ ಸಾಬೀತಾಗಿದೆ ಎಂದಿದ್ದಾರೆ.”
ಇದನ್ನೂ ಓದಿ: Smriti Mandhana: ಆರ್ಸಿಬಿ ತಂಡಕ್ಕೆ ಸ್ಮೃತಿ ಮಂಧಾನಾ ನಾಯಕಿ
“ರಾಜ್ಯಕ್ಕೆ ವಲಸೆ ಬಂದಿರುವ ಕಾರ್ಮಿಕರ ಯೋಗಕ್ಷೇಮದ ಹಿನ್ನೆಲೆಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೆರವು ನೀಡುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಕಾರ್ಮಿಕರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಗಳನ್ನು ನೀಡುವ ಸಲುವಾಗಿ ರಾಜ್ಯಾದ್ಯಂತ 19 ಕಾರ್ಮಿಕ ರಾಜ್ಯ ವಿಮಾ ಚಿಕಿತ್ಸಾಲಯ (ಇಎಸ್‍ಐ)ಗಳನ್ನು ಸ್ಥಾಪಿಸುವುದು ಮತ್ತು ಹುಬ್ಬಳ್ಳಿ- ದಾವಣಗೆರೆ ಇಎಸ್‍ಐ ಆಸ್ಪತ್ರೆಗಳ ಹಾಸಿಗೆ ಸಾಮರ್ಥ್ಯವನ್ನು 50 ರಿಂದ 100ಕ್ಕೆ ಏರಿಸಿರುವ ಮುಖ್ಯಮಂತ್ರಿಗಳ ಕ್ರಮ ಅಭಿನಂದನೀಯ” ಎಂದು ಹೆಬ್ಬಾರ್ ಹೇಳಿದ್ದಾರೆ.
ರಾಜ್ಯದ ಇಎಸ್‍ಐ ಆಸ್ಪತ್ರೆಗಳನ್ನು ಬಲಪಡಿಸಲು ಏಳು ಆಸ್ಪತ್ರೆಗಳಲ್ಲಿ ಐಸಿಯು ಸ್ಥಾಪಿಸಲು ಆರು ಆಸ್ಪತ್ರೆಗಳಲ್ಲಿ ಆಯುಷ್ ಘಟಕ ಆರಂಭ, ಜಿಲ್ಲೆಗೆ ಒಂದರಂತೆ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಾಗಿ ಉನ್ನತೀಕರಿಸಲು ಪ್ರಸ್ತಾವನೆ ಸಲ್ಲಿಕೆ, ಹೊಸದಾಗಿ ಆರಂಭಿಸಿರುವ 19 ಇಎಸ್‍ಐ ಚಿಕಿತ್ಸಾಲಯಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಮತ್ತು ಆರು ಹೊಸ ಚಿಕಿತ್ಸಾಲಯಗಳನ್ನು ಆರಂಭಕ್ಕೆ ಮುಂದಡಿ ಇರಿಸಿರುವ ಮುಂಗಡ ಪತ್ರದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಅಸಂಘಟಿತ ಕಾರ್ಮಿಕರ ಕಲ್ಯಾಣ ನಿಧಿ
ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಕಾರ್ಖಾನೆ, ಬಾಯ್ಲರುಗಳು ಮತ್ತು ಕೈಗಾರಿಕೆ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಗಳ ಸೇವೆಗಳನ್ನು ಸಕಾಲದಲ್ಲಿ ಸುಲಭವಾಗಿ ಒದಗಿಸುವ ಸಲುವಾಗಿ ಹೊಸ ಆನ್‍ಲೈನ್ ತಂತ್ರಾಂಶ ಅಭಿವೃದ್ಧಿಪಡಿಸಲು ಮುಂಗಡ ಪತ್ರದಲ್ಲಿ ಅನುವು ಮಾಡಿಕೊಡಲಾಗಿದೆ. ಅಸಂಘಟಿತ ಕಾರ್ಮಿಕರ ವಲಯವನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಅಸಂಘಟಿತ ಕಾರ್ಮಿಕರ ಬದುಕಿಗೆ ಭದ್ರತೆ ಒದಗಿಸುವ ಸಲುವಾಗಿ “ಕರ್ನಾಟಕ ಅಸಂಘಟಿತ ಕಾರ್ಮಿಕರ ಕಲ್ಯಾಣ ನಿಧಿ” ಸ್ಥಾಪಿಸುವ ಪ್ರಕಟಣೆಯ ದೂರದೃಷ್ಟಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Viral Video: ಕರಾಚಿ ಪೊಲೀಸ್ ಮುಖ್ಯಸ್ಥರ ಕಚೇರಿಯನ್ನು ಅತಿಕ್ರಮಿಸಿದ್ದ ಐವರು ಟಿಟಿಪಿ ಉಗ್ರರ ಹತ್ಯೆಗೈದ ಪಾಕ್ ಭದ್ರತಾ ಪಡೆ
ಅಸಂಘಟಿತ ವಲಯ ಭದ್ರತೆ ಯೋಜನೆಯಡಿಯಲ್ಲಿ ಆಸ್ತಿ ತೆರಿಗೆ ಮೇಲೆ ಹೆಚ್ಚಿನ ಸೆಸ್ ವಿಧಿಸದೆ ಆಂತರಿಕ ಸೆಸ್‍ಗಳಲ್ಲಿನ ಮಾರ್ಪಾಡು ಮೂಲಕ ರಾಜ್ಯದ 75 ಲಕ್ಷಕ್ಕೂ ಅಧಿಕ ಅಸಂಘಟಿತ ಕಾರ್ಮಿಕರಿಗೆ ಭದ್ರತೆ ಪ್ರಕಟಣೆ ಮೂಲಕ ಭರ್ಜರಿ ಕೊಡುಗೆ ನೀಡಲಾಗಿದೆ ಎಂದಿದ್ದಾರೆ.
“ಎರಡು ಕಾರ್ಮಿಕ ಅದಾಲತ್‍ಗಳ ಮೂಲಕ ಕಾರ್ಮಿಕರ ಬಾಕಿ ಅರ್ಜಿಗಳ ವಿಲೇವಾರಿ, ಕಾರ್ಮಿಕ ಶಿಶುಪಾಲನಾ ಕೇಂದ್ರಗಳ ಸ್ಥಾಪನೆ, ಕಾರ್ಮಿಕ ಮಕ್ಕಳ ಶ್ರೇಯೋಭಿವೃದ್ಧಿಗೆ ಜಾರಿ ಮಾಡಿರುವ ವಿದ್ಯಾ ನಿಧಿ, ಉಚಿತ ಬಸ್ ಪಾಸ್, ಕಲಿಕಾ ಉಪಕರಣಗಳ ವಿತರಣೆ ಸೇರಿದಂತೆ ವಿವಿಧ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗಾಗಿ 23 ಲಕ್ಷ ಫಲಾನುಭವಿ ಮತ್ತು ಅವರ ಕುಟುಂಬಗಳಿಗೆ 1,785 ಕೋಟಿ ರೂ. ನೆರವು ನೀಡಿರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹರ್ಷಿಸಿದ್ದು, ಡಬಲ್ ಇಂಜಿನ್ ಸರ್ಕಾರ ಶ್ರಮಿಕರ ಏಳ್ಗೆಗೆ ಕಟಿಬದ್ಧವಾಗಿದ್ದು, ಕಾರ್ಮಿಕರ ಪರ ಸರ್ಕಾರದ ಬದ್ಧತೆಗೆ ಇದು ಸಾಕ್ಷಿಯಾಗಿದೆ”ಎಂದು ಸಚಿವ ಹೆಬ್ಬಾರ್ ಅಭಿಪ್ರಾಯಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಗೂ ಬಜೆಟ್‍ನಲ್ಲಿ ಆದ್ಯತೆ
“2023-24 ಮುಂಗಡ ಪತ್ರದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಹೆಚ್ಚಿನ ಕೊಡುಗೆ ನೀಡಲಾಗಿದೆ ಎಂದು ಹರ್ಷಿಸಿರುವ ಸಚಿವ ಹೆಬ್ಬಾರ್, ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್, ಪ್ರಧಾನ ಮಂತ್ರಿ ಮತ್ಸ್ಯ ಬಂಡೆ ಯೋಜನೆಯಡಿ ಕೃತಕ ಬಂಡೆ ಸಾಲುಗಳ ನಿರ್ಮಾಣ, ಬಿತ್ತನೆ ಮೀನು ಮರಿ ದಾಸ್ತಾನಿಗೆ 20 ಕೋಟಿ ರೂ. ಪರಿಸರ ಸ್ನೇಹಿ ತ್ರಿಚಕ್ರ ಮೀನು ಮಾರಾಟ ವಾಹನ ವಿತರಣೆ, ದೋಣಿಗಳ ಸಂರಕ್ಷಣೆಗೆ ಅನುದಾನ, ಇಸ್ರೋದ ಜಿಪಿಎಸ್ ಅಳವಡಿಕೆಗೆ ಆದ್ಯತೆ 10 ಸಾವಿರ ಮೀನುಗಾರರಿಗೆ ವಸತಿ ಸೌಕರ್ಯ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಗೆ ಬಜೆಟ್‍ನಲ್ಲಿ ಕೊಡುಗೆ ನೀಡಲಾಗಿದೆ” ಎಂದು ಸಚಿವ ಶಿವರಾಂ ಹೆಬ್ಬಾರ್ ಹೇಳಿದ್ದಾರೆ.
ಇದನ್ನೂ ಓದಿ: Amitabh Bachchan: ಅಮಿತಾಭ್ ಬೆಲ್ ಬಾಟಮ್ ಪ್ಯಾಂಟ್‌ನಲ್ಲಿ ಹರಿದಾಡಿತ್ತಂತೆ ಇಲಿ!
“ಸೀಮೆ ಎಣ್ಣೆ ದೋಣಿಗಳಿಗೆ ಪೆಟ್ರೋಲ್/ ಡೀಸೆಲ್ ಇಂಜಿನ್ ಅಳವಡಿಕೆಗೆ ಸಹಾಯ ಧನ, ಡೀಸೆಲ್ ಮಿತಿ 2 ಲಕ್ಷ ಕಿ.ಮೀಗೆ ಏರಿಕೆ, ಡಿಬಿಟಿ ಮೂಲಕ ಸೀಮೆ ಎಣ್ಣೆ ಸಹಾಯ ಧನ ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆ, “ಮತ್ಸ್ಯ ಸಿರಿ” ಯೋಜನೆಯಡಿ ದೋಣಿಗಳ ನಿರ್ಮಾಣ, ಐಐಟಿ ಮಾದರಿ ಕಾರವಾರ ಎಂಜಿನಿಯರಿಂಗ್ ಕಾಲೇಜ್ ಉನ್ನತೀಕರಣ, ಕಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಪ್ರತಿ ಶಾಲೆಗೆ 18 ಕೋಟಿ ರೂ. ವೆಚ್ಚದ ನಾರಾಯಣ ಗುರು ವಸತಿ ಶಾಲೆ, 250 ಕೋಟಿ ರೂ. ವೆಚ್ಚದಲ್ಲಿ 500 ಕಾಲು ಸಂಕಗಳ ನಿರ್ಮಾಣ, ಕಾರವಾರ ಜಿಲ್ಲೆಯಲ್ಲಿ ಹೊಸ ವಿಮಾನ ನಿಲ್ದಾಣ ಆರಂಭ ಹೀಗೆ ರಾಜ್ಯ ಬಜೆಟ್‍ನಲ್ಲಿ ಜಿಲ್ಲೆಗೆ ಹಲವು ಕೊಡುಗೆಗಳನ್ನು ನೀಡಲಾಗಿದೆ” ಎಂದಿದ್ದಾರೆ.
ಹೀಗೆ ಆರೋಗ್ಯ, ಮೂಲ ಸೌಕರ್ಯ, ಮೀನುಗಾರಿಕೆ, ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಅಡಿಯಲ್ಲಿ ಜಿಲ್ಲೆಯಲ್ಲಿ ವಿವಿಧ ಯೋಜನೆಗಳ ಜಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಂದಾಗಿದ್ದು, ಇದಕ್ಕೆ ಸಚಿವ ಶಿವರಾಂ ಹೆಬ್ಬಾರ್ ಮುಖ್ಯಮಂತ್ರಿಗಳನ್ನು ಅಭಿನಂದಿಸಿದ್ದಾರೆ.
ಇದನ್ನೂ ಓದಿ: ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಕಾಡಾನೆ ರಕ್ಷಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಪಶುವೈದ್ಯರ ಶ್ಲಾಘಿಸಿದ ಮೋದಿ