ಕೊಪ್ಪಳ: ಆಂಜನೇಯನ ಜನ್ಮಸ್ಥಳವಾಗಿರುವ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಸೋಮವಾರ ಅಕ್ಷರಶಃ ಕೇಸರಿಮಯವಾಗಿತ್ತು. ಹನುಮ ಜಯಂತಿ ಹಿನ್ನೆಲೆಯಲ್ಲಿ (Hanuma Jayanti) ನಾಡಿನ ಮೂಲೆ ಮೂಲೆಗಳಿಂದ ಬಂದಿದ್ದ ಲಕ್ಷಾಂತರ ಹನುಮ ಮಾಲಾಧಾರಿಗಳು ಅಂಜನಾದ್ರಿ ಪರ್ವತವನ್ನೇರಿ ಮಾಲೆ ವಿಸರ್ಜಿಸಿ ಹನುಮನ ದರ್ಶನ ಪಡೆದುಕೊಂಡರು.
ಅಂಜನಾದ್ರಿ ಪರ್ವತ ಲಕ್ಷಾಂತರ ಹನುಮಮಾಲಾಧಾರಿಗಳಿಂದ ತುಂಬಿ ತುಳುಕುತ್ತಿತ್ತು. ರಾಜ್ಯದ ನಾನಾ ಮೂಲೆಗಳಿಂದ ಭಾನುವಾರ ರಾತ್ರಿಯಿಂದಲೇ ಲಕ್ಷಾಂತರ ಹನುಮ ಮಾಲಾಧಾರಿಗಳು ಹನುಮ ನಾಮಸ್ಮರಣೆಯೊಂದಿಗೆ 576ಕ್ಕೂ ಹೆಚ್ಚು ಮೆಟ್ಟಿಲುಗಳನ್ನೇರಿ ಆಂಜನೇಯನ ಸನ್ನಿಧಿಯಲ್ಲಿ ಮಾಲೆ ವಿಸರ್ಜಿಸಿ ಬಳಿಕ ಪವನಪುತ್ರನ ದರ್ಶನ ಪಡೆದು ಕೃತಾರ್ಥರಾದರು.
ಇದನ್ನೂ ಓದಿ | ಹನುಮ ಜಯಂತಿ| ಅಂಜನಾದ್ರಿಯಲ್ಲಿ ಆಂಜನೇಯನ ದರ್ಶನಕ್ಕೆ ಜನಸಾಗರ
ಬೆಳಗ್ಗೆ ಮೂರು ಗಂಟೆಯಿಂದ 11 ಗಂಟೆಯವರೆಗೂ ಭಕ್ತಸಾಗರ ಲೆಕ್ಕಕ್ಕೆ ಸಿಗದಂತೆ ಜಮಾಯಿಸಿತ್ತು. ಇನ್ನು ಮಾಜಿ ಸಚಿವ ಜನಾರ್ದನರೆಡ್ಡಿ ಪಂಪ ಸರೋವರದಲ್ಲಿ ಪೂಜೆ ಸಲ್ಲಿಸಿ ಮಾಲೆ ಧರಿಸಿ ಒಂದು ದಿನದ ವ್ರತವನ್ನು ಕೈಗೊಂಡರು. ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗಸ್ವಾಮಿ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಸೇರಿ ಅನೇಕ ಗಣ್ಯರು ಬೆಟ್ಟವನ್ನೇರಿ ಆಂಜನೇಯನ ದರ್ಶನ ಪಡೆದರು. ರಾಜಕಾರಣದ ದೃಷ್ಟಿಯನ್ನು ಬಿಟ್ಟು ಅಂಜನಾದ್ರಿಯ ಅಭಿವೃದ್ಧಿಗೆ ಸರ್ಕಾರ ವೇಗ ನೀಡಬೇಕು ಎಂದು ಈ ಸಂದರ್ಭದಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ಗಂಗಾವತಿ ನಗರದಲ್ಲಿ ಅದ್ಧೂರಿ ಹನುಮ ಸಂಕೀರ್ತನಾ ಯಾತ್ರೆ
ಇನ್ನು ಇತ್ತ ಗಂಗಾವತಿಯ ಎಪಿಎಂಸಿ ಬಳಿಯಿಂದ ಹನುಮ ಮಾಲಾಧಾರಿಗಳು ಸಂಕೀರ್ತನಾ ಯಾತ್ರೆ ನಡೆಸಿದರು. ಹೇಮರಡ್ಡಿ ಮಲ್ಲಮ್ಮ ವೃತ್ತ, ಬಸವೇಶ್ವರ ವೃತ್ತ ಮೂಲಕ ಸಾಗಿದ ಶೋಭಾಯಾತ್ರೆ ಬಳಿಕ ಕೃಷ್ಣದೇವರಾಯ ವೃತ್ತದ ಬಳಿಯ ಬಹಿರಂಗ ವೇದಿಕೆ ತಲುಪಿತು. ವೇದಿಕೆಯಲ್ಲಿ ಹಿಂದು ಮುಖಂಡರು ಭಾಷಣದುದ್ದಕ್ಕೂ ಲವ್ ಜಿಹಾದ್, ಮತಾಂತರದಂತಹ ಪಿಡುಗುಗಳು ಹಿಂದು ಧರ್ಮವನ್ನು ಸದಾ ಕಾಡುತ್ತಿದೆ. ಇದರಿಂದ ಹಿಂದು ಸಮಾಜ ಸದಾ ಜಾಗೃತ ಆಗಿರಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ | Criminal politics | ಬಿಜೆಪಿಗೆ ನಾನು ಕಾಣೊಲ್ಲ, ಅವರಿಗೆ ರೌಡಿಗಳು, ಗೂಂಡಾಗಳು, ದುಡ್ಡಿರೋರೇ ಬೇಕು ಎಂದ ಮುತಾಲಿಕ್