ಮಹಲಿಂಗೇಶ್ ಹಿರೇಮಠ, ವಿಸ್ತಾರ ನ್ಯೂಸ್ ಗದಗ
ಫೆಬ್ರವರಿ ೧೦ರಂದು ಆರಂಭಗೊಂಡ ಮೂರು ದಿನಗಳ ಗದಗದ ಐತಿಹಾಸಿಕ ಲಕ್ಕುಂಡಿ ಉತ್ಸವದಲ್ಲಿ (Lakkundi Festival) ಗ್ರಾಮೀಣ ಕ್ರೀಡೆಗಳ ಕಸರತ್ತು, ಜಟ್ಟಿಗಳ ಕಾಳಗ ರೋಮಾಂಚನ ಸೃಷ್ಟಿಸಿದೆ.
ಇತಿಹಾಸದ ಗತ ವೈಭವವನ್ನು ಸ್ಮರಿಸುವ ನೆಪದಲ್ಲಿ ಮೂರು ದಿನಗಳ ಕಾಲ ಉತ್ಸವ ಆಯೋಜನೆಗೊಂಡಿದ್ದು, ಎರಡನೇ ದಿನವಾದ ಶನಿವಾರ (ಫೆ.೧೧) ಗ್ರಾಮೀಣ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು. ಅಂತಾರಾಷ್ಟ್ರೀಯ ಅರ್ಜುನ ಪ್ರಶಸ್ತಿ ವಿಜೇತ ಹೊನ್ನಪ್ಪ ಗೌಡ ಮತ್ತು ಅಂತಾರಾಷ್ಟ್ರೀಯ ಕುಸ್ತಿ ಪಟು ಪ್ರೇಮಾ ಹುಚ್ಚಣ್ಣವರ ಸೇರಿದಂತೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಎಸ್ಪಿ ಬಾಬಾ ಸಾಬ ನೇಮಗೌಡ, ಇನ್ನಿತರರು ಸಸಿಗೆ ನೀರು ಹಾಕುವ ಮೂಲಕ ಕ್ರೀಡಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದನ್ನೂ ಓದಿ: Appointments of Governors: ಆಂಧ್ರಕ್ಕೆ ನಿವೃತ್ತ ಜಡ್ಜ್, ಕನ್ನಡಿಗ ಅಬ್ದುಲ್ ನಜೀರ್ ರಾಜ್ಯಪಾಲ, ಒಟ್ಟು 12 ಗವರ್ನರ್ ನೇಮಕ
ದೇಸಿ ಕ್ರೀಡೆಯಾದ ಕಬಡ್ಡಿ ಹಾಗೂ ಕುಸ್ತಿ ಪಂದ್ಯಾವಳಿಗಳು ಉತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಕ್ರೀಡೆಯ ರಂಗನ್ನು ಹೆಚ್ಚಿಸಿತು. ತೊಡೆ ತಟ್ಟಿ ಅಖಾಡಕ್ಕಿಳಿದ ಯುವ ಕುಸ್ತಿ ಪಟುಗಳು ಎದುರಾಳಿ ತಂಡವನ್ನು ಬಡಿದೆಬ್ಬಿಸಿದರು. ಮಹಿಳೆಯರು ಕಬಡ್ಡಿ ಆಡಿದರು. ಮಹಿಳೆಯರು ಬೆಂಕಿ ಬಳಸದೆ ಅಡುಗೆ ತಯಾರಿಸುವ ವಿಧಾನವನ್ನು ತೋರಿಸಿಕೊಟ್ಟರು. ಗ್ರಾಮದ ಬಿ.ಎಚ್.ಪಾಟೀಲ್ ಪ್ರೌಢಶಾಲೆ ಮೈದಾನದಲ್ಲಿ ಕಬಡ್ಡಿ ಹಾಗೂ ಕುಸ್ತಿ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಆಯುಧ ಉಪಯೋಗಿಸದೇ ಒಬ್ಬನೊಡನೊಬ್ಬ ಸೆಣಸಿ ಗೆಲ್ಲುವ ಪಂದ್ಯಾಟ ನೆರೆದವರನ್ನು ರೋಮಾಂಚನಗೊಳಿಸಿತು. ರಟ್ಟೆ ಬಡಿಯುತ್ತಾ ಜಟ್ಟಿಗಳಿಬ್ಬರು ಅಖಾಡಕ್ಕಿಳಿದು ನೆಲಕ್ಕುರುಳಿಸುವ ಸೆಣಸಾಟ ಪ್ರೇಕ್ಷಕರನ್ನು ಮನಸೂರೆಗೊಳಿಸಿತು. ವಿದ್ಯಾರ್ಥಿನಿಯರ ಕಬಡ್ಡಿ ತಂಡಗಳು ಹೆಚ್ಚಿನ ಅಂಕ ಪಡೆಯೋಕೆ ಎದುರಾಳಿ ತಂಡವನ್ನು ಮಕಾಡೆ ಮಲಗಿಸೋ ದೃಶ್ಯ ಮೈನವಿರೇಳಿಸಿತು.
ಪಾಕಶಾಲೆ ಪರಿಣಿತರಿಗೂ ಬೆಂಕಿ ಇಲ್ಲದೆ, ಅಡುಗೆ ಮಾಡುವ ಸ್ಪರ್ಧೆ ಆಯೋಜಿಸಲಾಗಿತ್ತು. 26 ಕ್ಕೂ ಹೆಚ್ಚು ಸ್ಪರ್ಧಿಗಳು, ಇಂತಿಷ್ಟು ಸಮಯದಲ್ಲೇ, ಬೇಸನ್ನು ಉಂಡೆ, ಕೋಸುಂಬರಿ, ಗಿರಿಮಿಟ್, ಪಾನ್ ಮಸಾಲಾ ಸೇರಿದಂತೆ ವಿವಿಧ ಖಾದ್ಯಗಳನ್ನು ಸ್ಥಳದಲ್ಲೇ ತಯಾರಿಸಿದರು. ಉತ್ಸವಕ್ಕೆಂದು ಬಂದ ಪ್ರವಾಸಿಗರಿಗೆ ಮನೋರಂಜನೆಗಾಗಿ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಲಕ್ಕುಂಡಿ ಉತ್ಸವ ಕೇವಲ, ಕಲೆ, ಸಾಹಿತ್ಯ, ಸಂಸ್ಕೃತಿ, ಕವಿಗೋಷ್ಠಿಗಳಿಗಷ್ಟೇ ಸೀಮಿತಗೊಳ್ಳದೆ, ಗ್ರಾಮೀಣ ಕ್ರೀಡೆಗಳು ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿತು.
ಇದನ್ನೂ ಓದಿ: Kantara movie: ಕಾಂತಾರ ಸಿನಿಮಾ ಹಾಡಿನ ವೇಳೆ ಪಂಜುರ್ಲಿ ವೇಷಧಾರಿ ವಿದ್ಯಾರ್ಥಿ ಮೈಯಲ್ಲಿ ಆವೇಶ!