Site icon Vistara News

Lakkundi Utsava 2023: ಫೆ.10ರಿಂದ ಲಕ್ಕುಂಡಿ ಉತ್ಸವ; ಲಾಂಛನ, ಪ್ರೋಮೊ, ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಿದ ಸಿ.ಸಿ.ಪಾಟೀಲ್‌

Lakkundi Utsava 2023

#image_title

ಗದಗ: ಫೆ.10 ರಿಂದ 12 ರವರೆಗೆ ಐತಿಹಾಸಿಕ ಲಕ್ಕುಂಡಿ ಉತ್ಸವ (Lakkundi Utsava 2023) ನಡೆಯುವ ಹಿನ್ನೆಲೆಯಲ್ಲಿ ಲಕ್ಕುಂಡಿಯ ಅನ್ನದಾನಿಶ್ವರ ಸಮುದಾಯ ಭವನದಲ್ಲಿ ಮಂಗಳವಾರ ಲಕ್ಕುಂಡಿ ಉತ್ಸವ-2023ರ ಲಾಂಛನ, ಪ್ರೋಮೊ ಹಾಗೂ ಪ್ರಚಾರ ಸಾಮಗ್ರಿಯನ್ನು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಸಚಿವ ಸಿ.ಸಿ.ಪಾಟೀಲ ಅವರು, ಫೆ.10 ರಿಂದ 12 ರವರೆಗೆ ಮೂರು ದಿನಗಳ ಕಾಲ ನಡೆಯುವ ಐತಿಹಾಸಿಕ ಲಕ್ಕುಂಡಿ ಉತ್ಸವವನ್ನು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಯಶಸ್ವಿಗೊಳಿಸಬೇಕು. ಲಕ್ಕುಂಡಿ ಉತ್ಸವದ ಯಶಸ್ಸಿಗೆ ರಚಿಸಲಾದ ವಿವಿಧ ಸಮಿತಿಗಳ ಸಭೆ ನಡೆಸಿ, ವ್ಯವಸ್ಥಿತ ಕಾರ್ಯಕ್ರಮ ಆಯೋಜನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲು ಸಮಯ ಹೊಂದಾಣಿಕೆ ಮಾಡಲಾಗಿದೆ. ಖ್ಯಾತ ಕಲಾವಿದರು, ಸಾಹಿತ್ಯಕಾರರಿಗೂ ಆದ್ಯತೆ ನೀಡಲಾಗಿದೆ. ಫೆ.10ರಂದು ಮಧ್ಯಾಹ್ನ ನಡೆಯುವ ಮೆರವಣಿಗೆಗೆ ಹೆಚ್ಚಿನ ಮೆರುಗು ನೀಡುವ ಉದ್ದೇಶದಿಂದ ಸ್ಥಳೀಯ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಕಲಾತಂಡಗಳನ್ನು ಕರೆ ತರಲಾಗುತ್ತಿದೆ. ಉತ್ಸವದ ಉದ್ಘಾಟನಾ ಕಾರ್ಯಕ್ರಮದ ನಂತರ ರಂಗಾಯಣ ಕಲಾವಿದರಿಂದ ವೀರ ರಾಣಿ ಕಿತ್ತೂರು ರಾಣಿ ಚನ್ನಮ್ಮ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.

ಉತ್ಸವಕ್ಕೆ ಆಗಮಿಸುವ ಎಲ್ಲರಿಗೂ ಮೂರು ದಿನಗಳ ಕಾಲ ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ರಾಷ್ಟ್ರ ಮಟ್ಟದ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಉತ್ಸವವನ್ನು ಪಕ್ಷಾತೀತವಾಗಿ ಆಚರಿಸಲಾಗುತ್ತಿದ್ದು, ಸರ್ವರೂ ಭಾಗಿಯಾಗಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ | ಫೆಬ್ರವರಿ 6 ರಂದು ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಫೆ.11 ರಂದು ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಕಲಾವಿದರಿಂದ ಸಾಂಸ್ಕತಿಕ ಕಾರ್ಯಕ್ರಮಗಳು ಜರುಗಲಿವೆ. ಖ್ಯಾತ ಗಾಯಕಿ ಅನನ್ಯ ಭಟ್ ತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಫೆ.12 ರಂದು ಸಾಯಂಕಾಲ ಸಮಾರೋಪ ಸಮಾರಂಭ ನಂತರ ಸಿಡಿಮದ್ದು ಪ್ರದರ್ಶನ, ಕೊನೆಯಲ್ಲಿ ಖ್ಯಾತ ಗಾಯಕ ಕುನಾಲ್ ಗಾಂಜಾವಾಲ ಅವರಿಂದ ಸಂಗೀತ ರಸದೌತಣ ಇರಲಿದೆ. ಈ ನಡುವೆ ಬೆಳಗಿನಿಂದ ಮಧ್ಯಾಹ್ನದವರೆಗೆ ವಿವಿಧ ವಿಷಯಗಳ ಕುರಿತು ಗೋಷ್ಠಿಗಳು ಜರುಗಲಿವೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಲಕ್ಕುಂಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಲಲಿತಾ ಗದಗಿನ, ಉಪಾಧ್ಯಕ್ಷ ಸಿದ್ದು ಮುಳಗುಂದ, ಗ್ರಾಮ ಪಂಚಾಯತಿ ಸದಸ್ಯರು, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಜಿ.ಪಂ. ಸಿ.ಇ.ಓ ಡಾ.ಸುಶೀಲಾ ಬಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡರ, ಡಿ.ಎಫ್.ಒ ದೀಪಿಕಾ ಬಾಜಪೇಯಿ, ಉಪ ವಿಭಾಗಾಧಿಕಾರಿ ಅನ್ನಪೂರ್ಣ ಮತ್ತಿತರರು ಇದ್ದರು.

Exit mobile version