ಬೆಳಗಾವಿ/ಬೀದರ್: ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿಗಳ ಭರವಸೆ ಕೊಟ್ಟ ಕಾಂಗ್ರೆಸ್ (Congress Guarantee) ಈಗ ಸರ್ಕಾರ ರಚನೆಯನ್ನೂ ಮಾಡಿದೆ. ಅದರ ಬೆನ್ನಲ್ಲೇ ಗ್ಯಾರಂಟಿ ಈಡೇರಿಕೆ ಆಗ್ರಹ ಎಲ್ಲೆಡೆಯಿಂದ ಕೇಳಿಬರುತ್ತಿದೆ. ಪ್ರತಿಪಕ್ಷಗಳು, ಸಾಮಾನ್ಯ ಜನರೆಲ್ಲ ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸುತ್ತಿವೆ. ಇಂದು ಬೀದರ್ನಲ್ಲಿ ಸಂಸದ ಭಗವಂತ್ ಖೂಬಾ ‘ಕಾಂಗ್ರೆಸ್ ಮನೆಯ ಒಡತಿಯ ಅಕೌಂಟ್ಗೆ 2000 ರೂಪಾಯಿ ಹಾಕುವುದಾಗಿ ಹೇಳಿದ್ದಾರೆ. ಸೊಸೆ ಅಕೌಂಟ್ಗೋ, ಅತ್ತೆ ಅಕೌಂಟ್ಗೋ ಎಂಬ ವಿಚಾರ ಜೋರಾಗಿ ಚರ್ಚೆಯಾಗುತ್ತಿದೆ. ಈ ಮೂಲಕ ಕಾಂಗ್ರೆಸ್ ಪಕ್ಷ ಅತ್ತೆ-ಸೊಸೆಯನ್ನು ಬೇರೆ ಮಾಡುತ್ತಿದೆ’ ಎಂದು ಹೇಳಿದ್ದರು.
ಹೀಗೆ ಗೃಹಲಕ್ಷ್ಮೀ ಯೋಜನೆಯಡಿ ಹಣ ಅತ್ತೆಗೆ ಸಲ್ಲಬೇಕೋ, ಸೊಸೆಗೆ ಸಲ್ಲಬೇಕೋ ಎಂಬ ಚರ್ಚೆ ಜೋರಾದ ಬೆನ್ನಲ್ಲೇ ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿದ ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಒಂದು ಸಿಂಪಲ್ ಉತ್ತರ ಕೊಟ್ಟಿದ್ದಾರೆ. ‘ನಾಳೆ ಗೃಹಲಕ್ಷ್ಮೀ ಯೋಜನೆಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸುತ್ತೇವೆ. ಈಗಲೇ ತುಂಬ ಏನೂ ಹೇಳುವುದಿಲ್ಲ. ಗೃಹಲಕ್ಷ್ಮೀ ಯೋಜನೆಯನ್ನು ಸರಳವಾಗಿ ಜಾರಿ ಮಾಡುತ್ತೇವೆ. ಮೊದಲು ನಾವು ಅತ್ತೆಗೆ ಹಣ ಕೊಡುತ್ತೇವೆ, ಅತ್ತೆ ಪ್ರೀತಿಯಿಂದ ತನ್ನ ಸೊಸೆಗೇ ಕೊಡಿ ಎಂದರೆ ಸೊಸೆಗೆ ನೀಡುತ್ತೇವೆ’ ಎಂದು ಉತ್ತರಿಸಿದ್ದಾರೆ.
ಮೇ 31ರಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಅವರು ಸಚಿವರು, ಅಧಿಕಾರಿಗಳ ಜತೆ ಚರ್ಚೆ ಮಾಡಲಿದ್ದಾರೆ. ಆ ಸಭೆಯಲ್ಲಿ ಎಲ್ಲ ವಿಚಾರಗಳನ್ನೂ ಕೂಲಂಕಷವಾಗಿ ಚರ್ಚಿಸಲಾಗುವುದು. ಒಂದು ಮನೆಯಲ್ಲಿ ನಮ್ಮ ಮೊದಲ ಆಯ್ಕೆ ಅತ್ತೆ. ನಮ್ಮ ಸಂಸ್ಕೃತಿ ಪ್ರಕಾರ ಅತ್ತೆಯೇ ಮನೆಯ ಯಜಮಾನಿ ಆಗಿರುತ್ತಾರೆ. ಹಾಗಾಗಿ ನಮ್ಮ ಆದ್ಯತೆ ಅವರೇ ಆಗಿರುತ್ತಾರೆ. ಅವರೇನಾದರೂ ಸ್ವಯಂ ಪ್ರೇರಿತರಾಗಿ ಸೊಸೆಗೆ ಕೊಡಿ ಎಂದರೆ, ಅದನ್ನು ಲಿಖಿತವಾಗಿ ಬರೆದು, ಸಹಿ ಹಾಕಿ ಕೊಡಬೇಕು. ಇಲ್ಲಿ ಕೆಲವು ಷರತ್ತುಗಳೂ ಅನ್ವಯ ಆಗುತ್ತವೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಮತ್ತು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ವೀಣಾ ಕಾಶಪ್ಪನವರ್ ಹೇಳಿದ್ದೇನು?
ಗೃಹಲಕ್ಷ್ಮೀ ಯೋಜನೆಯಡಿ ಹಣವನ್ನು ಅತ್ತೆಗೆ ಕೊಡುವುದೋ, ಸೊಸೆಗೆ ಕೊಡುವುದೋ ಎಂಬ ಬಗ್ಗೆ ಮಾತನಾಡಿದ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಉಪಾದ್ಯಕ್ಷೆ ವೀಣಾ ಕಾಶಪ್ಪನವರ್ ‘ ಈ ಯೋಜನೆ ಜಾರಿಗೂ ಮುನ್ನ ಮನೆಗಳಿಂದ ಸರಿಯಾದ ಮಾಹಿತಿ ಪಡೆಯಬೇಕು. ಕೆಲವರದ್ದು ಕೂಡು ಕುಟುಂಬ ಇರುತ್ತದೆ, ಕೆಲವರು ಪ್ರತ್ಯೇಕವಾಗಿ ಇರುತ್ತಾರೆ. ಇದನ್ನೆಲ್ಲವನ್ನೂ ಸರಿಯಾಗಿ ಪರಿಶೀಲಿಸಬೇಕು. ನಾವು ಪ್ರಣಾಳಿಕೆಯಲ್ಲಿ, ಮನೆಯ ಯಜಮಾನಿಯ ಅಕೌಂಟ್ಗೆ ಎಂದು ಹೇಳಿದ್ದೇವೆ. ಅತ್ತೆಗೆ ಕೊಡ್ತೀವಿ-ಸೊಸೆಗೆ ಕೊಡ್ತೀವಿ ಎಂದು ಹೇಳಿಲ್ಲ. ಈ ಬಗ್ಗೆ ಮೊದಲ ಹಂತದ ಗಣತಿ ಶುರು ಮಾಡಿದ್ದೇವೆ’ ಎಂದು ಹೇಳಿದರು.
ಚುನಾವಣೆ ವೇಳೆ ಎಲ್ಲ ಮಹಿಳೆಯರಿಗೂ ಕೊಡ್ತೇವೆ ಎಂದು ಹೇಳಿದ್ದೀರಿ. ಆದರೆ ಈಗ ಒಂದೊಂದೇ ಷರತ್ತುಗಳನ್ನು ಹಾಕುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಕ್ಕೆ ಉತ್ತರಿಸಿದ ವೀಣಾ ಕಾಶಪ್ಪನವರ್ ‘ಚುನಾವಣೆ ವೇಳೆ ಷರತ್ತುಗಳನ್ನು ಹಾಕಿ ಮಾತಾಡಲು ಸಾಧ್ಯವಿಲ್ಲ. ಎಲ್ಲ ಅನುಕೂಲ ಇದ್ದವರಿಗೆ ಹಣ ಕೊಡುವ ಅಗತ್ಯವಿಲ್ಲ. ಬಡತನ ರೇಖೆಗಿಂತ ಕೆಳಗೆ ಇದ್ದವರು, ಕಷ್ಟದಲ್ಲಿರುವವರಿಗೆ ಸೇರಬೇಕು. ಒಟ್ಟಾರೆ ಈ ಯೋಜನೆಯ ಸಾಧಕ-ಬಾಧಕ ಚರ್ಚೆಯಾಗಬೇಕು ಯಾವ ವರ್ಗಕ್ಕೆ ಕೊಡಬೇಕು ಎಂಬುದನ್ನು ಪರಿಶೀಲಿಸುತ್ತೇವೆ. ಅಗತ್ಯವಿದ್ದವರಿಗೆ ಖಂಡಿತ ಹಣ ಸಿಗುತ್ತದೆ. ನಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದ ಪ್ರತಿಯೊಂದನ್ನೂ ಅನುಷ್ಠಾನಕ್ಕೆ ತಂದೇ ತರುತ್ತೇವೆ ಎಂದರು.