Site icon Vistara News

Lalbagh Flower Show 2023 | ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನದಲ್ಲಿ ಬೆಂಗಳೂರು ಇತಿಹಾಸದ ದರ್ಶನ

ಲಾಲ್‌ಬಾಗ್

ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ (Lalbagh Flower Show 2023) ಸಜ್ಜಾಗಿದ್ದು, ಈ ಬಾರಿ ಬಗೆ ಬಗೆಯ ಹೂಗಳ ಮೂಲಕ ಕೆಂಪೇಗೌಡರು ಕಟ್ಟಿರುವ ಬೆಂಗಳೂರು ದರ್ಶನವಾಗಲಿದೆ. ಜನವರಿ 26ರ ಗಣರಾಜ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ 213ನೇ ಫಲಪುಷ್ಪ ಪ್ರದರ್ಶನ ಆಯೋಜಿಸುತ್ತಿದೆ. ಜನವರಿ 20ರಿಂದ 30 ರವರಗೆ ಒಟ್ಟು 11 ದಿನಗಳ ಕಾಲ ಫ್ಲವರ್‌ ಶೋ ನಡೆಯಲಿದೆ.

ಫ್ಲವರ್‌ ಶೋವನ್ನು ಜನವರಿ 20ರಂದು ಬೆಳಗ್ಗೆ ‌10 ಗಂಟೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಈ ಬಾರಿಯ ಫ್ಲವರ್ ಶೋಗೆ ಎರಡರಿಂದ ಮೂರು ಕೋಟಿ ರೂಪಾಯಿ ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು ಇತಿಹಾಸದ ಪ್ರತಿಬಿಂಬವಾಗಿ ಲಾಲ್ ಬಾಗ್ ಬಂಡೆ, ವರ್ಟಿಕಲ್ ಗಾರ್ಡನ್ ರೂಪದಲ್ಲಿ ಗಡಿ ಗೋಪುರ, ಕಾಡುಮಲ್ಲೇಶ್ವರ ದೇವಾಲಯ, ಟಿಪ್ಪುವಿನ ಬೇಸಿಗೆ ಅರಮನೆ, ಹೈಕೋರ್ಟ್, ಬೆಂಗಳೂರು ಅರಮನೆ, ವಿಧಾನಸೌಧದ ಕಲಾಕೃತಿಗಳು ಬಣ್ಣ ಬಣ್ಣದ ಹೂಗಳ ನಡುವೆ ಅರಳಲಿವೆ.

11 ವಿದೇಶಿ ಹೂಗಳ ಪ್ರದರ್ಶನ
ಈ ಬಾರಿ ಒಟ್ಟು 112 ಪುಷ್ಪ ಡೋಮ್‌ಗಳ ಪ್ರದರ್ಶನವಿದ್ದು, ಹಾಲೆಂಡ್, ಕೊಲಂಬಿಯಾ, ಇಸ್ರೇಲ್, ಚಿಲಿ, ನೆದರ್‌ಲ್ಯಾಂಡ್ಸ್, ಬೆಲ್ಜಿಯಂ, ಕೀನ್ಯಾ, ಆಸ್ಟ್ರೇಲಿಯಾ, ಯಥೋಪಿಯಾ ಸೇರಿದಂತೆ 11 ವಿದೇಶಗಳ 69 ಜಾತಿಯ ಹೂಗಳನ್ನು ಪ್ರದರ್ಶಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಡಾರ್ಜಿಲಿಂಗ್‌ನ ಸಿಂಬಡಿಯ ಆರ್ಕಿಡ್ಸ್ ಹೂವು ಈ ಬಾರಿಯ ಪ್ರಮುಖ ಆಕರ್ಷಣೆ ಆಗಿದೆ. ತೋಟಗಾರಿಕೆ ಇಲಾಖೆ ವತಿಯಿಂದಲೇ 6 ಲಕ್ಷ ಹೂವಿನ ಕುಂಡಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ತಿಳಿಸಿದರು.

ಟಿಕೆಟ್‌ ದರದಲ್ಲಿ ಇಲ್ಲ ಬದಲಾವಣೆ
ಟಿಕೆಟ್ ದರವನ್ನು ಏರಿಕೆ ಮಾಡಿಲ್ಲ. ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 70 ರೂಪಾಯಿ, ರಜಾ ದಿನಗಳಲ್ಲಿ ‌75 ರೂಪಾಯಿ ನಿಗದಿ ಮಾಡಲಾಗಿದೆ. 12 ವರ್ಷದೊಳಗಿನ ಮಕ್ಕಳಿಗೆ ಎಲ್ಲ ದಿನಗಳಲ್ಲಿ 30 ರೂಪಾಯಿ ದರ ನಿಗದಿ ಮಾಡಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಾಲ್ಕು ಗೇಟ್‌ಗಳಲ್ಲಿಯೂ ಟಿಕೆಟ್ ಕೌಂಟರ್ ವ್ಯವಸ್ಥೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 10-12 ಲಕ್ಷಕ್ಕೂ ಅಧಿಕ ಜನರು ಬರುವ ನಿರೀಕ್ಷೆ ಇದೆ.

ಇದನ್ನೂ ಓದಿ | Viral Video | ಹಿಮದ ಮುಂದೆ ಕುಣಿತ; ವೈರಲ್‌ ಆಯ್ತು ಈ ಜೋಡಿಯ ನೃತ್ಯ

Exit mobile version