ಬೆಂಗಳೂರು: ಬೆಂಗಳೂರು ಉದ್ಯಾನ ನಗರ ಎಂದು ಈಗಾಗಲೇ ಪ್ರಸಿದ್ಧಿಯಾಗಿದೆ. ಅಭಿವೃದ್ಧಿಯಲ್ಲಿ ಈ ಹೆಸರು ಹಿಂದೆ ಸರಿದಿದ್ದು, ಮತ್ತೊಮ್ಮೆ ಉದ್ಯಾನ ನಗರದ ಗತ ವೈಭವವನ್ನು ಮರುಕಳಿಸುವಂತೆ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನವನ್ನು (Lalbagh Flower Show 2023) ಉದ್ಘಾಟಿಸಿ ಮಾತನಾಡಿದರು.
ಗಣರಾಜ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನಕಲಾ ಸಂಘದ ವತಿಯಿಂದ ಲಾಲ್‍ಬಾಗ್‌ನ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನವು ಜನವರಿ 20ರಿಂದ ಶುರುವಾಗಲಿದೆ. ಈ ಬಾರಿ ರಾಜಧಾನಿ ಬೆಂಗಳೂರು ನಗರದ ಇತಿಹಾಸದ ದರ್ಶನವಾಗಲಿದೆ.
ಉದ್ಯಾನನಗರ ಹೆಸರು ಕಾಯಂ
ಬೆಂಗಳೂರಿನ ಲಾಲ್ ಬಾಗ್, ಕಬ್ಬನ್ ಪಾರ್ಕ್ ಸೇರಿದಂತೆ ಪ್ರಮುಖ ಉದ್ಯಾನಗಳನ್ನು ಉತ್ತಮವಾಗಿಟ್ಟುಕೊಂಡು ಬಿಬಿಎಂಪಿ ನಿರ್ವಹಿಸುವ ಹೊಸ ಉದ್ಯಾನವನಗಳಲ್ಲಿ ಹೆಚ್ಚಿನ ಸಸ್ಯ ಸಂಪತ್ತನ್ನು ಬೆಳೆಸುವುದು ಹಾಗೂ ಹೊರವಲಯದಲ್ಲಿ ಹೊಸ ಉದ್ಯಾನಗಳನ್ನು ನಿರ್ಮಿಸುವ ಮೂಲಕ ಉದ್ಯಾನ ನಗರ ಹೆಸರನ್ನು ಖಾಯಂ ಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ತಿಳಿಸಿದರು.
ರಾಜ್ಯದಲ್ಲಿ ಹಸಿರು ಪದರ ವಿಸ್ತರಣೆಯಾಗಬೇಕು
ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಅತ್ಯಂತ ಜನಪ್ರಿಯವಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಈ ಬಾರಿ 10- 15 ಲಕ್ಷ ಜನ ಬರುವ ನಿರೀಕ್ಷೆ ಇದೆ. ಅದಕ್ಕಾಗಿ ತೋಟಗಾರಿಕಾ ಇಲಾಖೆ ವ್ಯವಸ್ಥೆ ಗಳನ್ನು ಮಾಡಿಕೊಂಡಿದೆ. ಫಲಪುಷ್ಪ ಎಲ್ಲರಿಗೂ ಬಹಳ ಪ್ರಿಯವಾಗಿರುವಂಥದ್ದು, ಇಲ್ಲಿ ಪ್ರದರ್ಶನದ ಮುಖಾಂತರ ರಾಜ್ಯದ ಸಸ್ಯಸಂಪತ್ತು ಎಷ್ಟು ದೊಡ್ಡದಿದೆ, ವಿಭಿನ್ನ, ವಿಸ್ತಾರವಾಗಿದೆ ಎಂದು ಪ್ರದರ್ಶನವಾಗುತ್ತದೆ.
ಸಸ್ಯಸಂಪತ್ತನ್ನು ಬೆಳೆಸುವುದು ನಮ್ಮ ಉದ್ದೇಶ. ರಾಜ್ಯದಲ್ಲಿ ಹಸಿರು ಪದರ ವಿಸ್ತರಣೆಯಾಗಬೇಕು. ಅದಕ್ಕಾಗಿ ಹಸಿರು ಆಯವ್ಯಯವನ್ನು ರೂಪಿಸಲಾಗಿದೆ. 100 ಕೋಟಿ ರೂ.ಗಳನ್ನು ಹಸಿರು ವಿಸ್ತರಣೆಗಾಗಿ ಮೀಸಲಿರಿಸಿದೆ. ಅದರ ಅನುಷ್ಠಾನವೂ ಆಗುತ್ತಿದೆ. ಗುಡ್ಡಗಾಡು ಪ್ರದೇಶಗಳ ಸಂಪೂರ್ಣ ಹಸಿರು ಮಾಡಿ ಪರಿಸರ ಸಮತೋಲನ ಕಾಯ್ದುಕೊಳ್ಳಲು ರಾಜ್ಯದಲ್ಲಿ ಪ್ರಥಮ ಬಾರಿಗೆ ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಇದರ ಜೊತೆಗೆ ತೋಟಗಾರಿಕೆ ವಿಸ್ತರಣೆಯೂ ಆಗಬೇಕು. ಲಾಲ್ ಬಾಗ್ ನಿಂದ ಹಿಡಿದು ರಾಜ್ಯದೆಲ್ಲೆಡೆ ತೋಟಗಾರಿಕೆ ಇದೆ. ಇವುಗಳ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ರೂಪಿಸುತ್ತಿದ್ದು, ಬಜೆಟ್ ನಲ್ಲಿ ಅನುದಾನ ನೀಡಬೇಕೆನ್ನುವ ಚಿಂತನೆಯೂ ಇದೆ. ತೋಟಗಾರಿಕೆಯಿಂದ ಹಸಿರು ಹೆಚ್ಚುವುದರ ಜತೆಗೆ ಅಲ್ಲಿ ಉತ್ಪಾದನೆ, ಉತ್ಪನ್ನ ಹೆಚ್ಚಾಗುತ್ತದೆ ಹಾಗೂ ಪೌಷ್ಟಿಕ ಆಹಾರವನ್ನು ಒದಗಿಸಲು ಸಾಧ್ಯವಿದೆ. ದೊಡ್ಡ ಪ್ರಮಾಣದಲ್ಲಿ ತೋಟಗಾರಿಕೆಯನ್ನು ವಿಸ್ತರಿಸಿ, ಫಾರ್ಮ್‌ಗಳನ್ನು ಬೆಳೆಸುವ ಕೆಲಸವನ್ನು ಸರ್ಕಾರ ಮಾಡುತ್ತದೆ ಎಂದರು.
ಜನ ಫಲಪುಷ್ಪಗಳನ್ನು ಬೆಳೆಸಲು ಪ್ರಯತ್ನಿಸಬೇಕು
ಜನ ಫಲಪುಷ್ಪ ಪ್ರದರ್ಶನದ ಲಾಭ ಪಡೆಯಲಿ ಹಾಗೂ ತಮ್ಮದೇ ರೀತಿಯಲ್ಲಿ ಫಲಪುಷ್ಪಗಳನ್ನು ಬೆಳೆಸಲು ತಮ್ಮ ಪ್ರಯತ್ನ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ತೋಟಗಾರಿಕಾ ಸಚಿವ ಮುನಿರತ್ನ, ವಿಧಾನ ಪರಿಷತ್ ಸದಸ್ಯ ಟಿ. ಎ. ಶರವಣ ಮೊದಲಾದವರು ಉಪಸ್ಥಿತರಿದ್ದರು.
11 ದಿನಗಳ ಫ್ಲವರ್ ಶೋ
ಜನವರಿ 20ರಿಂದ 30 ರವರಗೆ ಒಟ್ಟು 11 ದಿನಗಳ ಕಾಲ ಫ್ಲವರ್ ಶೋ ನಡೆಯಲಿದೆ. ಈ ಬಾರಿ ಒಟ್ಟು 112 ಪುಷ್ಪ ಡೋಮ್‌ಗಳ ಪ್ರದರ್ಶನವಿದ್ದು, ಹಾಲೆಂಡ್, ಕೊಲಂಬಿಯಾ, ಇಸ್ರೇಲ್, ಚಿಲಿ, ನೆದರ್‌ಲ್ಯಾಂಡ್ಸ್, ಬೆಲ್ಜಿಯಂ, ಕೀನ್ಯಾ, ಆಸ್ಟ್ರೇಲಿಯಾ, ಯಥೋಪಿಯಾ ಸೇರಿದಂತೆ 11 ವಿದೇಶಗಳ 69 ಜಾತಿಯ ಹೂಗಳನ್ನು ಪ್ರದರ್ಶಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಡಾರ್ಜಿಲಿಂಗ್‌ನ ಸಿಂಬಡಿಯ ಆರ್ಕಿಡ್ಸ್ ಹೂವು ಈ ಬಾರಿಯ ಪ್ರಮುಖ ಆಕರ್ಷಣೆ ಆಗಿದೆ. ತೋಟಗಾರಿಕೆ ಇಲಾಖೆ ವತಿಯಿಂದಲೇ 6 ಲಕ್ಷ ಹೂವಿನ ಕುಂಡಗಳನ್ನು ಪ್ರದರ್ಶಿಸಲಾಗುತ್ತಿದೆ. ಬೆಂಗಳೂರು ಇತಿಹಾಸದ ಪ್ರತಿಬಿಂಬವಾಗಿ ಲಾಲ್ ಬಾಗ್ ಬಂಡೆ, ವರ್ಟಿಕಲ್ ಗಾರ್ಡನ್ ರೂಪದಲ್ಲಿ ಗಡಿ ಗೋಪುರ, ಕಾಡುಮಲ್ಲೇಶ್ವರ ದೇವಾಲಯ, ಟಿಪ್ಪುವಿನ ಬೇಸಿಗೆ ಅರಮನೆ, ಹೈಕೋರ್ಟ್, ಬೆಂಗಳೂರು ಅರಮನೆ, ವಿಧಾನಸೌಧದ ಕಲಾಕೃತಿಗಳು ಬಣ್ಣ ಬಣ್ಣದ ಹೂಗಳ ನಡುವೆ ಅರಳಿವೆ.
ಇದನ್ನೂ ಓದಿ | KSOU Admission : ಮುಕ್ತ ವಿವಿ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದೆ