Site icon Vistara News

School Problem | ಖಾಸಗಿ ಶಾಲೆಗಳಿಗೆ ಭೂ ಕಂಟಕ; ಶಿಕ್ಷಣ ಸಚಿವರ ಪತ್ರಕ್ಕೂ ಆಯುಕ್ತರು ಡೋಂಟ್‌ಕೇರ್‌?

School

ಬೆಂಗಳೂರು: ಶೈಕ್ಷಣಿಕ ಉದ್ದೇಶಕ್ಕೆ ಭೂ ಪರಿವರ್ತನೆ (Land Conversion) ಕಡ್ಡಾಯಗೊಳಿಸಿರುವ ನಿಯಮವು ಖಾಸಗಿ ಶಾಲೆಗಳಿಗೆ ಕಂಟಕವಾಗಿ [School Problem] ಪರಿಣಮಿಸಿದೆ. ಶಿಕ್ಷಣ ಇಲಾಖೆ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಕಾನೂನು ಹೋರಾಟದಿಂದ ಮಕ್ಕಳ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ.

ಅದರಲ್ಲೂ ಕೊರೊನಾ ಸೇರಿದಂತೆ ಹತ್ತಾರು ಅಡೆತಡೆಗಳ ನಡುವೆ ಶಿಕ್ಷಣ ಒದಗಿಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಅವಕಾಶ ನೀಡುವ ಬದಲಿಗೆ ನಿಯಮದ ಹೆಸರಲ್ಲಿ ಶಿಕ್ಷಣ ಇಲಾಖೆ ಆಯುಕ್ತ ಆರ್​. ವಿಶಾಲ್​ ಸಮಸ್ಯೆ ಸೃಷ್ಟಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಈ ಮೊದಲು ಸಾವಿರಾರು ಶಾಲೆಗಳ ನಿವೇಶನಗಳು ಶೈಕ್ಷಣಿಕ ಉದ್ದೇಶಕ್ಕೆ ಭೂ ಪರಿವರ್ತನೆ ಅನುಮತಿ ಪಡೆಯದೆ, ವಾಣಿಜ್ಯ ಅಥವಾ ವಾಸ ನಿವೇಶನದ ಭೂ ಪರಿವರ್ತನೆ ಪಡೆದು ಶಾಲಾ ಕಟ್ಟಡ ನಿರ್ಮಾಣಗೊಂಡಿವೆ. ಆದರೆ 2018ರಲ್ಲಿ ಶಾಲೆಗಳಿಗೆ ಭೂ ಪರಿವರ್ತನೆ ಪಡೆಯುವುದನ್ನು ಕಡ್ಡಾಯ ಮಾಡಲಾಗಿದ್ದು, 2020ರಿಂದ ಪರಿಣಾಮಕಾರಿಯಾಗಿ ಈ ನಿಯಮವನ್ನು ಜಾರಿ ಮಾಡಲಾಯಿತು. ಭೂ ಪರಿವರ್ತನೆ ಕಡ್ಡಾಯಗೊಳಿಸಿರುವುದು ಈಗ ಶಾಲಾ-ಕಾಲೇಜುಗಳ ಅಸ್ತಿತ್ವಕ್ಕೆ ಕಂಟಕ ತಂದೊಡ್ಡಿದೆ.

ಈ ಸಂಬಂಧ ಖಾಸಗಿ ಶಾಲೆಗಳ ಒಕ್ಕೂಟ ʼರುಪ್ಸಾʼ ಸೇರಿ ಅನೇಕ ಸಂಘಟನೆಗಳು, ಖಾಸಗಿ ಶಾಲೆಗಳು ವಿನಾಯಿತಿ ನೀಡುವಂತೆ ಮನವಿ ಮಾಡಿದ್ದರೂ ಶಿಕ್ಷಣ ಇಲಾಖೆ ಸ್ಪಂದಿಸುತ್ತಿಲ್ಲವೆಂದು ಆರೋಪಿಸಲಾಗಿದೆ. ಭೂ ಪರಿವರ್ತನೆ ಮಾಡದೇ ಇದ್ದರೆ ಅನಧಿಕೃತ ಶಾಲೆ ಎಂಬ ಹಣೆಪಟ್ಟಿ ಸಿಗಲಿದ್ದು ಜತೆಗೆ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಲಿದೆ. ಜತೆಗೆ ಮಕ್ಕಳು ಅತಂತ್ರಕ್ಕೆ ಸಿಲುಕುವಂತಾಗುತ್ತದೆ. ಶಿಕ್ಷಣ ಇಲಾಖೆಯ ಈ ಸುತ್ತೋಲೆಯನ್ನು ಹಿಂಪಡೆದು ಎಸ್‌.ವಿ. ಸಂಕನೂರ್‌ ಸಮಿತಿ ನೀಡಿರುವ ಶಿಫಾರಸು ಜಾರಿಗೊಳಿಸಬೇಕೆಂದು ರುಪ್ಸಾ ಅಧ್ಯಕ್ಷ ಲೋಕೇಶ್‌ ತಾಳೀಕಟ್ಟೆ ಒತ್ತಾಯಿಸಿದ್ದಾರೆ.

ಶಿಕ್ಷಣ ಇಲಾಖೆ ವಾದವೇನು?

ಕೃಷಿ ಭೂಮಿಯಲ್ಲಿ ಶಾಲೆ ಕಟ್ಟುವುದು ಅಥವಾ ಕೃಷಿಯೇತರ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಬೇಕಾದರೆ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದು ಭೂ ಪರಿವರ್ತನೆ ಆಗಬೇಕು. ಕೃಷಿ ಭೂಮಿ ದುರ್ಬಳಕೆ ಆಗಬಾರದು ಎಂಬುದು ಕರ್ನಾಟಕ ಸರ್ಕಾರದ ನಿಯಮ. ಹೀಗಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಅನುಮತಿ ತನ್ನಿ, ಇಲ್ಲವಾದರೆ ಶಾಲೆಯ ಮಾನ್ಯತೆ ರದ್ದುಪಡಿಸುವುದಾಗಿ ಹೇಳುತ್ತಿದ್ದಾರೆ.

ಶಾಲೆಗಳ ವಾದವೇನು?

ಯಾವುದೇ ಶಾಲೆಗಳಿಗೆ ಮಾನ್ಯತೆ ನೀಡುವಾಗ 2018ರವರೆಗೆ ಶಿಕ್ಷಣ ಇಲಾಖೆಯು ಭೂ ಪರಿವರ್ತನೆ ದಾಖಲಾತಿಯನ್ನು ಕೇಳುತ್ತಿರಲಿಲ್ಲ. ಲೀಸ್‌ ಅಗ್ರಿಮೆಂಟ್‌ ನೀಡಿದರೆ ಶಾಲೆಗಳ ಮಾನ್ಯತೆಯನ್ನು ಪರಿಗಣಿಸುತ್ತಿದ್ದರು. 2018ರ ನಂತರ ನಿಯಮ ಬದಲಾಗಿ ಭೂ ಪರಿವರ್ತನೆ ಕಡ್ಡಾಯ ಮಾಡಿದ್ದರೂ ಕಟ್ಟುನಿಟ್ಟಿನ ಪಾಲನೆ ಆಗುತ್ತಿರಲಿಲ್ಲ. ಹತ್ತಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಶಾಲೆಗಳಿಗೆ ಈಗ ಏಕಾಏಕಿ ಭೂ ಪರಿವರ್ತನೆ ಕಡ್ಡಾಯ ಮಾಡಿರುವುದು ಸರಿಯಲ್ಲ ಎಂದು ಖಾಸಗಿ ಶಾಲಾ ಸಂಘಟನೆಗಳು ಆರೋಪಿಸಿವೆ.

ಭೂ ಪರಿವರ್ತನೆ ಮಾಡಿಸಲು ಕೆಲ ನಿಯಮಗಳು ಅಡ್ಡ ಬರುವುದಾಗಿ ಖಾಸಗಿ ಶಾಲಾ ಸಂಘಟನೆಗಳು ಅಳಲು ತೋಡಿಕೊಂಡಿದ್ದು, ಪ್ರಮುಖವಾಗಿ ನಗರ ಪ್ರದೇಶದ ಶಾಲೆಗಳು ಅರ್ಜಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರೆ ಸ್ಕೂಲ್‌ ಜೋನ್‌ಗೆ ಬರಲಿದೆಯೇ ಎಂಬುದನ್ನು ಪರಿಶೀಲಿಸುತ್ತಾರೆ. ಶಾಲಾ ವ್ಯಾಪ್ತಿಗೆ ಬಂದಿಲ್ಲವೆಂದರೆ ಅರ್ಜಿಯನ್ನು ತಿರಸ್ಕರಿಸುತ್ತಾರೆ. ಇದರಿಂದಾಗಿ ಹಳೆಯ ಶಾಲೆಗಳು ಭೂ ಪರಿವರ್ತನೆಯ ಅರ್ಜಿಯನ್ನು ನೀಡಲು ಆಗುವುದಿಲ್ಲ ಎಂದು ಲೋಕೇಶ್‌ ತಾಳೀಕಟ್ಟೆ ತಿಳಿಸಿದ್ದಾರೆ.

ಶಿಕ್ಷಣ ಸಚಿವ ನಾಗೇಶ್‌ ಅವರ ಪತ್ರ

ಸಚಿವರ ಪತ್ರದಲ್ಲಿ ಏನಿದೆ?

ಸಮಸ್ಯೆಯನ್ನು ಪರಿಹರಿಸುವಂತೆ ಅನೇಕ ಶಾಲೆಗಳು ಶಿಕ್ಷಣ ಸಚಿವರಿಗೂ ಮನವಿ ಮಾಡಿದೆ. ಈ ಕುರಿತು ರಮಣಶ್ರೀ ಪ್ರತಿಷ್ಠಾನ ಸಂಸ್ಥೆಗೆ ಸೇರಿದ ಸಂಸ್ಥೆಯ ಸಂಬಂಧ ಶಿಕ್ಷಣ ಸಚಿವರು ಬರೆದಿರುವ ಪತ್ರವೊಂದು ಲಭ್ಯವಾಗಿದೆ.

ಶಾಲೆಗಳು ಸಲ್ಲಿಸಿರುವ ಅರ್ಜಿಯನ್ನು ಡಿಡಿಪಿಐಗಳು, ಶೈಕ್ಷಣಿಕ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುವುದಿಲ್ಲವೆಂದು ತಿರಸ್ಕರಿಸಿದ್ದಾರೆ. ಹೀಗಾಗಿ ಭೂ ಪರಿವರ್ತನೆ ಸಂಬಂಧ ಶಿಕ್ಷಣ ಸಚಿವ ನಾಗೇಶ್‌ ಪತ್ರವನ್ನು ಬರೆದಿದ್ದಾರೆ. ನಗರ ಪ್ರದೇಶ ಮತ್ತು ಗ್ರಾಮಠಾಣಾ ವ್ಯಾಪ್ತಿಯಲ್ಲಿ ಆಯಾ ಸ್ಥಳೀಯ ಸಂಸ್ಥೆಗಳಲ್ಲಿ ಖಾತಾ ದಾಖಲಾಗಿದ್ದು, ಸಂಬಂಧಿಸಿದ ಪ್ರಾಧಿಕಾರದಿಂದ ಪಡೆದ ಶಾಲಾ/ಕಾಲೇಜು ಕಟ್ಟಡ ನಕ್ಷೆ ಹಾಗೂ ಇತರೆ ಸಂಬಂಧಿಸಿದ ದಾಖಲೆಗಳು ಸಮರ್ಪಕವಿದ್ದಲ್ಲಿ ನಗರ ಸ್ಥಳೀಯ ಸಂಸ್ಥೆಯ ಮಾಸ್ಟರ್ ಪ್ಲಾನ್ ಮತ್ತು Zonal Regulationನಲ್ಲಿ ಅಳವಡಿಸಿರುವ ಅಂಶಗಳ ಆಧಾರದ ಮೇಲೆ ಶಾಲಾ/ಕಾಲೇಜು ಪ್ರಥಮ ಮಾನ್ಯತೆ/ ನವೀಕರಣ ಮಾಡುವುದನ್ನು ಪರಿಗಣಿಸಬಹುದಾಗಿದೆ.

ಕೂಡಲೇ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಎಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸ್ಪಷ್ಟ ನಿರ್ದೇಶನ ನೀಡುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸಚಿವರು ಸೂಚನೆ ನೀಡುವಂತೆ ಪತ್ರವನ್ನು ಬರೆದಿದ್ದರು. ಮಕ್ಕಳ ಹಿತದೃಷ್ಟಿಯಿಂದ 2022-23ನೇ ಸಾಲಿಗೆ ಖಾಸಗಿ ಅನುದಾನರಹಿತ ಶಾಲಾ/ಕಾಲೇಜುಗಳನ್ನು ಪ್ರಾರಂಭಿಸಲು ಅನುಕೂಲವಾಗುವಂತೆ ಕನಿಷ್ಟ 2 ವಾರಗಳ ಕಾಲ ಕಾಲಾವಕಾಶವನ್ನು ನೀಡಲು ಸೂಚಿಸಿದ್ದಾರೆ.

ಆದರೆ ಸಚಿವರು ಬರೆದ ಪತ್ರವನ್ನೂ ಆಯುಕ್ತರು ಹಾಗೂ ಇನ್ನಿತರೆ ಅಧಿಕಾರಿಗಳು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಮತ್ತೆ ಶಾಲೆಗಳಿಗೆ ನೋಟಿಸ್‌ ನೀಡುತ್ತಿದ್ದಾರೆ. ಭೂ ಪರಿವರ್ತನೆಯ ದಾಖಲೆ ನೀಡದೇ ಇದ್ದರೆ ಶಾಲೆಯ ಮಾನ್ಯತೆಯನ್ನು ರದ್ದುಪಡಿಸುವ ಬೆದರಿಕೆ ಒಡ್ಡುತ್ತಿದ್ದಾರೆ. ಇಷ್ಟು ವರ್ಷಗಳಿಂದ ಶಾಲೆಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಸಾವಿರಾರು ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಶಾಲಾ ಆಡಳಿತ ಮಂಡಳಿ ಜತೆಗೆ ಅಲ್ಲಿ ಕಲಿಯುವ ಮಕ್ಕಳು, ಕಾರ್ಯನಿರ್ವಹಿಸುವ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಯ ಭವಿಷ್ಯವೂ ಕತ್ತಲಿಗೆ ದೂಡಲ್ಪಡುತ್ತದೆ ಎಂದು ಶಾಲೆಯೊಂದರ ಮುಖ್ಯಸ್ಥರು ನೋವು ತೋಡಿಕೊಂಡಿದ್ದಾರೆ.

ಇದನ್ನೂ ಓದಿ | Teachers Day | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಸರ್ಕಾರಿ ಶಾಲೆ ಕಟ್ಟಿದ ಈರಪ್ಪ ರೇವುಡಿ

Exit mobile version