ಮಡಿಕೇರಿ: ಜನವಸತಿ, ಕೃಷಿ ಭೂಮಿಯನ್ನು ಅರಣ್ಯ ಇಲಾಖೆ ಒತ್ತುವರಿ ಮಾಡಿಕೊಂಡಿದೆ ಎಂದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿರುವ ಕೊತ್ನಳ್ಳಿ, ಕುಡಿಗಾಣ, ಕುಮಾರಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಇದರಿಂದ ನಮಗೆ ತೊಂದರೆಯಾಗುತ್ತಿದೆ, ಹೀಗಾಗಿ ಅರಣ್ಯ ಇಲಾಖೆ ಸೂಕ್ತ ರೀತಿಯಲ್ಲಿ ಸರ್ವೇ ನಡೆಸಿ ಗಡಿ ಗುರುತು (Land Issue) ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿ ಅರಣ್ಯ ಇಲಾಖೆ ಗಡಿ ಗುರುತು ಮಾಡಿದ ಹಿನ್ನೆಲೆಯಲ್ಲಿ ಜನವಸತಿ ಹಾಗೂ ಕೃಷಿ ಪ್ರದೇಶವನ್ನು ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರ್ಪಡೆ ಮಾಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಪುಷ್ಪಗಿರಿ ವನ್ಯಜೀವಿ ವಲಯದ ಎಸಿಎಫ್ ಶ್ರೀನಿವಾಸ್ ನಾಯಕ್, ಆರ್‌ಎಫ್‌ಒ ವಿಮಲ್‌ಬಾಬು ಸೇರಿ ಇಲಾಖೆಯ ಇತರ ಅಧಿಕಾರಿಗಳು ಗ್ರಾಮಸ್ಥರು ಸಭೆ ಆಯೋಜಿಸಿದ್ದರು. ಮಂಗಳವಾರ ಬೆಳಗ್ಗೆ ನಿಗದಿಯಾಗಿದ್ದ ಸಭೆಗೆ ಸಂಜೆ ಆಗಮಿಸಿದ್ದರಿಂದ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ಗ್ರಾಮಸ್ಥರು, ಕೊತ್ನಳ್ಳಿ, ಕುಮಾರಳ್ಳಿ, ಕುಡಿಗಾಣ ಗ್ರಾಮ ವ್ಯಾಪ್ತಿಯು ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶಕ್ಕೆ ಹತ್ತಿರವೇ ಇದ್ದರೂ ಈ ಹಿಂದೆ ಇದ್ದ ಅರಣ್ಯ ಪ್ರದೇಶದ ಗಡಿಯಿಂದ ದೂರವೇ ಇದೆ. ಆದರೆ ಇತ್ತೀಚೆಗೆ ವನ್ಯಜೀವಿ ವಲಯ ಅಧಿಕಾರಿಗಳು ಸರ್ವೇ ನಡೆಸಿ ಗ್ರಾಮಕ್ಕೆ ಸಮೀಪವೇ ಗಡಿ ಗುರುತು ಮಾಡಿ ಗಡಿ ಕಲ್ಲುಗಳನ್ನು ನೆಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ | Go back protest | ತೀರ್ಥಹಳ್ಳಿಯಲ್ಲಿ ರೋಹಿತ್ ಚಕ್ರತೀರ್ಥಗೆ ಗೋ ಬ್ಯಾಕ್ ಪ್ರತಿಭಟನೆ ಬಿಸಿ: ಕುವೆಂಪು ನಾಡಗೀತೆ ವಿರೂಪದ ಸಿಟ್ಟು
ಇದಾದ ಬಳಿಕ ನೂರಾರು ಮಂದಿ ಗ್ರಾಮಸ್ಥರೊಂದಿಗೆ ಗಡಿ ಕಲ್ಲುಗಳನ್ನು ನೆಟ್ಟಿರುವ ಪ್ರದೇಶಕ್ಕೆ ತೆರಳಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಆದರೆ, ತಡರಾತ್ರಿಯವರೆಗೂ ಈ ವಿಚಾರದ ಬಗ್ಗೆ ಗ್ರಾಮಸ್ಥರು ಹಾಗೂ ಅರಣ್ಯ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇತ್ತು. ಈ ಸಂದರ್ಭ ಹೊಸದಾಗಿ ಕಲ್ಲುಗಳನ್ನು ನೆಟ್ಟಿರುವ ಸ್ಥಳದಿಂದಲೇ ಸರ್ವೇ ಮಾಡಲು ಅಧಿಕಾರಿಗಳು ಮುಂದಾಗಿದ್ದರಿಂದ ಗ್ರಾಮಸ್ಥರು ಆಕ್ರೋಶಗೊಂಡು, ಹಳೇ ಗಡಿ ಕಲ್ಲು ಇರುವಲ್ಲಿಯೇ ಸರ್ವೇ ನಡೆಸುವಂತೆ ಪಟ್ಟುಹಿಡಿದರು.
ಈ ಹಿಂದೆ 8 ಸಾವಿರ ಹೆಕ್ಟೇರ್ ಇದ್ದ ಅರಣ್ಯ ಪ್ರದೇಶವೀಗ 11 ಸಾವಿರ ಹೆಕ್ಟೇರ್‌ಗೆ ಏರಿಕೆಯಾಗಿದೆ. ನಾವು ಅರಣ್ಯ ಪ್ರದೇಶವನ್ನು ಅತಿಕ್ರಮಿಸಿಕೊಂಡಿಲ್ಲ. ಪುಷ್ಪಗಿರಿ ವನ್ಯಜೀವಿ ವಲಯದಿಂದ ಹೊರಭಾಗದಲ್ಲಿಯೇ ಕೃಷಿ ನಡೆಸುತ್ತಿದ್ದೇವೆ. ಆದರೆ, ನಮ್ಮ ಗ್ರಾಮಗಳಿಗೆ ಕುತ್ತು ಬರುವಂತೆ ಗಡಿ ಕಲ್ಲುಗಳನ್ನು ಹಾಕಲಾಗಿದೆ. ಹೀಗಾಗಿ ಹಳೆ ಗಡಿಕಲ್ಲುಗಳು ಇರುವ ಸ್ಥಳವನ್ನೇ ಅರಣ್ಯದ ಗಡಿಯೆಂದು ಪರಿಗಣಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಇದೇ ವೇಳೆ ಇಲಾಖೆಯ ಗಾರ್ಡ್ ಶಶಿ ಅವರು ಸ್ಥಳೀಯರಿಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ ಗ್ರಾಮಸ್ಥರು, ಅವರನ್ನು ಕೂಡ ಇಲ್ಲಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಗ್ರಾಮಸ್ಥರ ಸಮಸ್ಯೆ ಆಲಿಸಿ ಪ್ರತಿಕ್ರಿಯಿಸಿದ ಎಸಿಎಫ್ ಶ್ರೀನಿವಾಸ್ ನಾಯಕ್, ಹಳೆಯ ಗಡಿಕಲ್ಲು ಇರುವ ಪ್ರದೇಶಕ್ಕೂ ಈಗಿನ ಕಲ್ಲುಗಳಿರುವ ಸ್ಥಳಕ್ಕೂ ಜಿಪಿಎಸ್‌ನಲ್ಲಿ ವ್ಯತ್ಯಾಸವಿದ್ದು, ಮೂಲ ಗಡಿ ಕಲ್ಲುಗಳನ್ನೇ ಅಭಯಾರಣ್ಯದ ಗಡಿ ಎಂದು ಗುರುತಿಸಿ ಕಲ್ಲುಗಳನ್ನು ಅಳವಡಿಸಲಾಗುವುದು. ಕುಮಾರಳ್ಳಿ ಗ್ರಾಮದ ಸ.ನಂ. 1/9ಪಿ99ರಲ್ಲಿ ಗೊಂದಲವಿದ್ದು, ಅಭಯಾರಣ್ಯಕ್ಕೆ ಹೆಚ್ಚಿನ ಪ್ರದೇಶ ದಾಖಲಾಗಿದೆ. ಈ ಬಗ್ಗೆ ತಹಸೀಲ್ದಾರ್‌ಗೆ ಪತ್ರ ಬರೆದಿದ್ದು, ಅಭಯಾರಣ್ಯ ಪ್ರದೇಶವನ್ನು ಮ್ಯೂಟೇಷನ್ ಮಾಡಲು ಮನವಿ ಮಾಡಲಾಗಿದೆ. ಜನವರಿ 3 ರಂದು ಸರ್ವೇ, ಕಂದಾಯ ಇಲಾಖೆ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಗಡಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ | Soraba News | ಸಾಗುವಳಿ ಜಮೀನಿನಲ್ಲಿ ಶ್ರೀ ನಾರಾಯಣ ಗುರು ವಸತಿ ಶಾಲೆಗೆ ಭೂ ಮಂಜೂರಾತಿ: ಗ್ರಾಮಸ್ಥರ ಪ್ರತಿಭಟನೆ