Site icon Vistara News

Landslide: ಕೊಡಗಿಗೆ ಮತ್ತೆ ಭಾರಿ ಭೂಕುಸಿತದ ಭೀತಿ! ಬೆಚ್ಚಿ ಬೀಳಿಸಿದ ಜಿಲ್ಲಾಡಳಿತ ವರದಿ

ಭೂಕುಸಿತ

ಮಡಿಕೇರಿ: ಮಳೆಗಾಲದ‌ ಆರಂಭದಲ್ಲೇ ಕೊಡಗು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸುವಂತೆ ಒಂದು ವರದಿಯನ್ನು ಜಿಲ್ಲಾಡಳಿತ ನೀಡಿದೆ. ಕೊಡಗಿನ 90 ಗ್ರಾಮಗಳಿಗೆ ಈ ವರ್ಷ ಕಂಟಕ ಕಾದಿದೆ. ಭೂ ಕುಸಿತ (Landslide), ‌ಪ್ರವಾಹಗಳು ಕಾಡಲಿವೆ.

ನಿನ್ನೆಯ ಮುಖ್ಯಮಂತ್ರಿ ಜತೆಗೆ ನಡೆಸಲಾದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮಳೆ ಹಾಗೂ ಅದರ ಸಂಭಾವ್ಯ ಪರಿಣಾಮಗಳ ಬಗ್ಗೆ ಕೊಡಗು ಜಿಲ್ಲಾಡಳಿತ ಮಾಹಿತಿ ನೀಡಿದೆ. ಅದರಲ್ಲಿ 45ಕ್ಕೂ ಹೆಚ್ಚು ಗ್ರಾಮಗಳಿಗೆ ಭೂಕುಸಿತ, 40ಕ್ಕೂ ಹೆಚ್ಚು ಗ್ರಾಮಗಳಿಗೆ ಪ್ರವಾಹದ ಆತಂಕವಿದೆ ಎಂದಿದೆ.

ಮಡಿಕೇರಿ ತಾಲ್ಲೂಕಿನ ತಾವೂರು, ತಣ್ಣಿಮಾನಿ, ಪದಕಲ್ಲು, ಕಡಿಯತ್ತೂರು, ಚರಿಯಪರಂಬು, ಬಲಮುರಿ, ಕುಶಾಲನಗರ ತಾಲ್ಲೂಕಿನ ಮುಳ್ಳುಸೋಗೆ, ಗುಮ್ಮನಕೊಲ್ಲಿ, ಮಾದಪಟ್ಟಣ, ನೆಲ್ಯಹುದಿಕೇರಿ, ಕಣಿವೆ, ಕೂಡಿಗೆ ಮುಂತಾದ 40 ಗ್ರಾಮಗಳಲ್ಲಿ ಪ್ರವಾಹ ಎದುರಾಗುವ ಭೀತಿಯಿದೆ. ಮಡಿಕೇರಿ ತಾಲ್ಲೂಕಿನ ಸಂಪಾಜೆ, ಮದೆ, ಭಾಗಮಂಡಲ, ಚೇರಂಗಾಲ, ಗಾಳಿಬೀಡು, ಮಕ್ಕಂದೂರು, ಹೆಬ್ಬೆಟಗೇರಿ, ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ಲು, ಐಗೂರು, ತಾಕೇರಿ, ಕಿರಗಂದೂರು, ಬಿಳಿಗೇರಿ, ಶಾಂತಳ್ಳಿ ಸೇರಿದಂತೆ ಒಟ್ಟು 45ಕ್ಕೂ ಅಧಿಕ ಗ್ರಾಮಗಳಲ್ಲಿ ಭೂ ಕುಸಿತ ಆತಂಕವಿದೆ.

ಮಡಿಕೇರಿ ತಾಲ್ಲೂಕಿನಲ್ಲಿ 765 ಕುಟುಂಬಗಳ 2681 ಜನರನ್ನು, 26 ಕಾಳಜಿ ಕೇಂದ್ರ ತೆರೆದು ಸ್ಥಳಾಂತರಿಸಬೇಕು. ಸೋಮವಾರಪೇಟೆ ತಾಲ್ಲೂಕಿನಲ್ಲಿ 1143 ಕುಟುಂಬಗಳ 4162 ಜನರನ್ನು, 30 ಕಾಳಜಿ ಕೇಂದ್ರ ತೆರೆದು ಸ್ಥಳಾಂತರಿಸಬೇಕು. ವಿರಾಜಪೇಟೆ ತಾಲ್ಲೂಕಿನಲ್ಲಿ 582 ಕುಟುಂಬಗಳ 2049 ಜನರನ್ನು 26 ಕಾಳಜಿ ಕೇಂದ್ರ ತೆರೆದು ಸ್ಥಳಾಂತರಿಸಬೇಕು ಎಂದು ಜಿಲ್ಲಾಡಳಿತ ವರದಿ ನೀಡಿದೆ.

ಇದನ್ನೂ ಓದಿ: Jammu and Kashmir: ಕಾಶ್ಮೀರದಲ್ಲಿ ಹೊಸದಾಗಿ ನಿರ್ಮಿಸಲಾದ ಸುರಂಗದಲ್ಲಿ ಭೂಕುಸಿತ, ಸೇನಾ ವಾಹನಕ್ಕೆ ಹಾನಿ

Exit mobile version