Site icon Vistara News

Lawyers Protest: ವಕೀಲರ ಮೇಲೆ ಹಲ್ಲೆ ಮಾಡಿದ್ರೆ 100 ಪೊಲೀಸರ ಕೊಲ್ತೇವೆ; ಲಾಯರ್‌ ವಾರ್ನಿಂಗ್‌

Subhash Chayagol

ವಿಜಯಪುರ: ಚಿಕ್ಕಮಗಳೂರಿನ ಯುವ ವಕೀಲನ ಮೇಲೆ ಹಲ್ಲೆ ಖಂಡಿಸಿ ಪೊಲೀಸರ ವಿರುದ್ಧ ರಾಜ್ಯಾದ್ಯಂತ ವಕೀಲರು ಪ್ರತಿಭಟನೆ (Lawyers Protest) ನಡೆಸುತ್ತಿದ್ದಾರೆ. ಈ ನಡುವೆ ವಿಜಯಪುರದಲ್ಲಿ ವಕೀಲರೊಬ್ಬರು ನಾಲಿಗೆ ಹರಿಬಿಟ್ಟಿದ್ದು, ಇನ್ನುಮುಂದೆ ವಕೀಲರ ಮೇಲೆ ಏನಾದರೂ ಹಲ್ಲೆ ಮಾಡಿದರೆ, 100 ಪೊಲೀಸರನ್ನು ಕೊಲ್ಲುತ್ತೇವೆ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ. ಆದರೆ, ಪ್ರತಿಭಟನೆ ವೇಳೆ ಆಡಿದ್ದ ಮಾತುಗಳಿಗೆ ವ್ಯಾಪಕ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ವಕೀಲ ಕ್ಷಮೆಯಾಚಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಆಪ್ತ, ಕಾಂಗ್ರೆಸ್ ಮುಖಂಡ, ನ್ಯಾಯವಾದಿ ಸುಭಾಷ್ ಛಾಯಾಗೋಳ ಎಚ್ಚರಿಕೆ ನೀಡಿದ್ದಾರೆ. ವಿಜಯಪುರ ಜಿಲ್ಲಾ ನ್ಯಾಯವಾದಿಗಳ ಸಂಘದ ನೇತೃತ್ವದಲ್ಲಿ ಮಂಗಳವಾರ ನಡೆದ ಪ್ರತಿಭಟನೆ ವೇಳೆ ಮಾತನಾಡಿರುವ ಅವರು, ಇನ್ನುಮುಂದೆ ಯಾವುದೇ ಪೊಲೀಸರು ವಕೀಲರ ಮೇಲೆ ಹಲ್ಲೆ ಮಾಡಬಾರದು. ಹಲ್ಲೆ ಮಾಡಿದರೆ ನಾವು ವಕೀಲರು ನೂರು ಪೊಲೀಸರನ್ನು ಕೊಲೆ ಮಾಡುವ ಕೆಲಸ ಮಾಡುತ್ತೇವೆ. ಇದನ್ನು ತಿಳಿದುಕೊಳ್ಳಬೇಕು, ಯಾಕೆಂದರೆ ಇದು ಪೊಲೀಸರ ರಾಜ್ಯವಲ್ಲ, ವಕೀಲರ ರಾಜ್ಯ ಎಂದು ಹೇಳಿದ್ದಾರೆ.

ಇದನ್ನೂ ಓದಿ | Health Card: ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್‌ಗೆ ಹೊಸ ರೂಪ; ಸಿಎಂ ಚಾಲನೆ

ಕ್ಷಮೆ ಕೇಳಿದ ವಕೀಲ

ಚಿಕ್ಕಮಗಳೂರದಲ್ಲಿ ವಕೀಲನ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಿದಾಗ ವಕೀಲ ವಿವಾದಿತ ಹೇಳಿಕೆ ನೀಡಿದ್ದಾರೆ. ಆದರೆ, ತಮ್ಮ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ತಪ್ಪಿನ ಅರಿವಾಗಿ ಅವರು ಕ್ಷಮೆಯಾಚಿಸಿದ್ದಾರೆ. ನೆನ್ನೆ ವಕೀಲರ ಸಂಘದಿಂದ ಪ್ರತಿಭಟನೆ ಮಾಡಿದೆವು. ಆ ವೇಳೆ ಗಾಂಧಿಚೌಕದಲ್ಲಿ ನಾನು ಬಾಯಿ ತಪ್ಪಿ ಪೊಲೀಸರ ಬಗ್ಗೆ ಮಾತನಾಡಿದ್ದು, ಪೊಲೀಸ್ ಇಲಾಖೆಗೆ ನೋವಾಗಿದ್ದಲ್ಲಿ ನಾನು ಅವರಿಗೆ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ.

ಪೊಲೀಸ್ ಪ್ರತಿಭಟನೆ ಸಮಾಜಕ್ಕೆ ಒಳ್ಳೆಯ ಬೆಳವಣಿಗೆ ಅಲ್ಲ

ಬೆಳಗಾವಿ: ಚಿಕ್ಕಮಗಳೂರು ವಕೀಲನ ಮೇಲೆ ಹಲ್ಲೆ ಪ್ರಕರಣ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿದೆ. ವಕೀಲರು ಪ್ರತಿಭಟನೆ ಮಾಡಿದರು ಎಂದು ಪೊಲೀಸರೂ ಪ್ರತಿಭಟನೆ ಮಾಡಿದ್ದಾರೆ. ಸಾರ್ವಜನಿಕರ ರೀತಿಯಲ್ಲಿ ಅವರು ಪ್ರತಿಭಟನೆ ಮಾಡಿದ್ದಾರೆ. ವಕೀಲರ ಮೇಲೆ 307 ಕೇಸ್ ಹಾಕಿದ್ದಾರೆ. ಪೊಲೀಸ್ ಪ್ರತಿಭಟನೆ ಸಮಾಜಕ್ಕೆ ಒಳ್ಳೆಯ ಬೆಳವಣಿಗೆ ಅಲ್ಲ. ಪ್ರಕರಣದಲ್ಲಿ ರಾಜ್ಯ ಸರ್ಕಾರ‌ ಕೂಡಲೇ ಮಧ್ಯ ಪ್ರವೇಶ ಮಾಡಬೇಕು ಎಂದು ಶಾಸಕ ಸುನೀಲ್‌ ಕುಮಾರ್‌ ಒತ್ತಾಯಿಸಿದ್ದಾರೆ.

ಇದನ್ನೂ ಓದಿ | CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ತನ್ವೀರ್‌; NIA ತನಿಖೆಗೆ ವಹಿಸಲು ಶಾಗೆ ಯತ್ನಾಳ್‌ ಪತ್ರ!

ಸರ್ಕಾರ ಮಧ್ಯ ಪ್ರವೇಶಿಸದಿದ್ದರೆ ವಕೀಲರು ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಾರೆ. ವಕೀಲರು ಮತ್ತು ಪೊಲೀಸರ ನಡುವಿನ ಸಂಘರ್ಷ ನಿಲ್ಲಿಸುವ ಕೆಲಸ ಮಾಡಬೇಕು ಎಂದರು. ಈ ವೇಳೆ ಸಚಿವ ಕೃಷ್ಣ ಬೈರೇಗೌಡ ಪ್ರತಿಕ್ರಿಯಿಸಿ, ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ಗೃಹ ಸಚಿವರಿಂದ ಉತ್ತರ ಕೊಡಿಸುವುದಾಗಿ ಭರವಸೆ ನೀಡಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version