Site icon Vistara News

Lawyers Protest | ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹ: ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿ ವಕೀಲರ ಪ್ರತಿಭಟನೆ

Lawyers Protest

ಬೆಳಗಾವಿ: ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಒತ್ತಾಯಿಸಿ ಸುವರ್ಣಸೌಧದ ಎದುರು ವಕೀಲರು ಮಂಗಳವಾರ ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲು (Lawyers Protest) ಯತ್ನಿಸಿದರು. ಬ್ಯಾರಿಕೇಡ್‌ ಹಾಕಿದ್ದರೂ ವಕೀಲರು ಅದನ್ನು ಭೇದಿಸಿ ಒಳನುಗ್ಗಲು ಯತ್ನಿಸಿದ್ದರಿಂದ ಅವರನ್ನು ತಡೆಯಲು ಪೊಲೀಸರು ಹರಸಾಹಸಪಟ್ಟರು.

ಇದಕ್ಕೂ ಮುನ್ನ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಸಾವಿರಾರು ವಕೀಲರು ಪ್ರತಿಭಟನಾ ಮೆರವಣಿಗೆ ನಡೆಸಿದ್ದರಿಂದ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ರಾಜ್ಯ ಸರ್ಕಾರ ಹಾಗೂ ಕಾನೂನು ಸಚಿವ ಮಾಧುಸ್ವಾಮಿಗೆ ಧಿಕ್ಕಾರ ಘೋಷಣೆಗಳನ್ನು ಕೂಗುತ್ತ, ವಕೀಲರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹತ್ತಿಕ್ಕಲು ಕಾಯ್ದೆ ರೂಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸುವರ್ಣಸೌಧದ ಎದುರು ೪೦ ಪರ್ಸೆಂಟ್ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿದ ವಕೀಲರು, ಮಾಧುಸ್ವಾಮಿಗೆ ವಿರುದ್ಧವೂ ಘೋಷಣೆ ಕೂಗಿದರು. ಬಾಯಿ ಬಡಿದುಕೊಳ್ಳುತ್ತಾ ಚಿಲ್ಲರೆ ಹಣ ಸಂಗ್ರಹಿಸಿ ಗೇಟ್‌ ಮುಂದೆ ಚೆಲ್ಲಿ ಸರ್ಕಾರದ ವಿರುದ್ಧ ಕಿಡಿಕಾರುತ್ತ, ಚಳಿಗಾಲದ ಅಧಿವೇಶನದಲ್ಲೇ ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ | Yashaswini Scheme | ಯಶಸ್ವಿನಿ ಯೋಜನೆಗೆ 20 ಲಕ್ಷ ನೋಂದಣಿ; ಗಡುವು ಮುಗಿಯಲು ಕೇವಲ ಮೂರು ದಿನ ಬಾಕಿ

ಪ್ರತಿಭಟನೆ ವೇಳೆ ವಕೀಲರು ಮತ್ತು ಪೊಲೀಸರ ನಡುವೆ ತಳ್ಳಾಟ ನೂಕಾಟ ನಡೆಯಿತು. ನಮಗೆ ಒಳ ಹೋಗಲು ಬಿಡಿ ಎಂದು ವಕೀಲರ ಪಟ್ಟು ಹಿಡಿದರು. ಸ್ಥಳಕ್ಕೆ ಸಚಿವ ಮಾಧುಸ್ವಾಮಿ ಬರಬೇಕು, ಇಲ್ಲವೇ ನಮ್ಮನ್ನ ಒಳಬಿಡಿ ಎಂದು ಆಕ್ರೋಶ ಹೊರಹಾಕಿದರು. ಬಳಿಕ ಸುವರ್ಣಸೌಧದ ಗೇಟ್‌ಗೆ ಅಳವಡಿಸಿದ್ದ ಬ್ಯಾರಿಕೇಡ್ ಕಿತ್ತೆಸೆಯಲು ವಕೀಲರು ಯತ್ನಿಸಿದರು.

ಡಿಕೆಶಿ ಕಾರಿಗೆ ಮುತ್ತಿಗೆ, ಕಾರಜೋಳಗೆ ತರಾಟೆ
ಸುವರ್ಣಸೌಧಕ್ಕೆ ತೆರಳುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕಾರಿಗೆ ಮುತ್ತಿಗೆ ಹಾಕಿ ವಕೀಲರು ಪ್ರತಿಭಟನೆ ನಡೆಸಿದರು. ನಮ್ಮ ಬೇಡಿಕೆಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಿ ಸರ್ಕಾರದ ಗಮನಕ್ಕೆ ತರಬೇಕು ಎಂದು ಆಗ್ರಹಿಸಿದರು. ನಂತರ ಮನವಿ ಸ್ವೀಕರಿಸಲು ಬಂದ ಸಚಿವ ಗೋವಿಂದ ಕಾರಜೋಳ ಅವರನ್ನು ತರಾಟೆಗೆ ತೆಗೆದುಕೊಂಡ ವಕೀಲರು, ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ | Political turning points | 2022ರಲ್ಲಿ ಗಮನ ಸೆಳೆದ 10 ರಾಜಕೀಯ ಟರ್ನಿಂಗ್‌ ಪಾಯಿಂಟ್ಸ್

Exit mobile version