ಭಾಸ್ಕರ್ ಆರ್. ಗೆಂಡ್ಲ, ಶಿರಸಿ
ಒಂದಲ್ಲಾ ಒಂದು ಸಮಸ್ಯೆಯಿಂದ ತತ್ತರಿಸಿದ ಅಡಕೆ ಬೆಳೆಗಾರರಿಗೆ ಎಲೆ ಚುಕ್ಕೆ ರೋಗ (Leaf Spot Disease) ಕಂಗಾಲಾಗುವಂತೆ ಮಾಡಿದೆ. ಒಂದೆಡೆ ಎಲೆ ಚುಕ್ಕೆ ರೋಗಕ್ಕೆ ಅಡಕೆ ಮರಗಳು ನಾಶವಾಗುತ್ತಿದ್ದರೆ, ಇನ್ನೊಂದೆಡೆ ಅಡಕೆ ಕಾಯಿಗಳಿಗೂ ರೋಗ ಬಾಧೆ ವಿಸ್ತರಿಸಿ ಇಳುವರಿಗೆ ಹಾನಿಯಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 33,364 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಇವುಗಳಲ್ಲಿ 8,604 ಹೆಕ್ಟೇರ್ ಪ್ರದೇಶದಲ್ಲಿ ಎಲೆ ಚುಕ್ಕೆ ರೋಗ ಬಾಧಿಸುತ್ತಿದೆ. ಇನ್ನು ಜಿಲ್ಲೆಯ ಮಲೆನಾಡು ಭಾಗವಾದ ಶಿರಸಿ-ಯಲ್ಲಾಪುರ ತಾಲೂಕಿನಲ್ಲಿ ಎಲೆ ಚುಕ್ಕೆ ಉಲ್ಬಣಗೊಂಡಿದೆ. ಶಿರಸಿ ತಾಲೂಕಿನಲ್ಲಿ ಒಟ್ಟು 9.800 ಹೆಕ್ಟೇರ್ ಪ್ರದೇಶವಿದ್ದು, ಅದರಲ್ಲಿ 5062 ಹೆಕ್ಟೇರ್‌ನಲ್ಲಿ ಎಲೆ ಚುಕ್ಕೆ ರೋಗ ಕಾಣಿಸಿಕೊಂಡಿದೆ. ಇನ್ನು 1250 ಹೆಕ್ಟೇರ್ ಭಾಗದಲ್ಲಿ ಸೀವಿಯರ್ (ತೀವ್ರ ಹಾನಿ) ಹಂತ ತಲುಪಿದೆ.
ಜಿಲ್ಲೆಯ ಯಲ್ಲಾಪುರದಲ್ಲೂ ಕೂಡ ಎಲೆ ಚುಕ್ಕೆ ರೋಗ ಅಡಕೆ ಬೆಳೆಗಾರರನ್ನ ಕಂಗಾಲಾಗಿಸಿದೆ. ಒಟ್ಟು 4800 ಹೆಕ್ಟೇರ್ ಅಡಕೆ ಬೆಳೆ ಪ್ರದೇಶವಿದ್ದು, 2600 ಹೆಕ್ಟೇರ್‌ನಲ್ಲಿ ಎಲೆ ಚುಕ್ಕೆ ರೋಗ ಕಾಣಿಸಿಕೊಂಡಿದೆ. ಇನ್ನು 600 ಹೆಕ್ಟೇರ್ ಭಾಗದಲ್ಲಿ ಸೀವಿಯರ್ ಹಂತ ತಲುಪಿದೆ.
ಇದನ್ನೂ ಓದಿ | Karnataka Weather : ವಾರಪೂರ್ತಿ ಬಿಸಿಲು ಇರಲಿದೆ, ಭಾರಿ ಮಳೆಯೂ ಬರಲಿದೆ!
ಕಳೆದ ವರ್ಷದ ಮಳೆಗಾಲದ ಸಂದರ್ಭದಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ರೋಗವು ಈ ವರ್ಷ ತೇವ ಭರಿತ ಬಿಸಿಲಿನ ವಾತಾವರಣಕ್ಕೆ ವ್ಯಾಪಕವಾಗುತ್ತಿದೆ. ಕೊಳೆರೋಗ, ಬೇರುಹುಳು ಸಮಸ್ಯೆ, ಬೆಳೆಗೆ ವನ್ಯಜೀವಿಗಳ ಕಾಟ ಸೇರಿದಂತೆ ವಿವಿಧ ಸಮಸ್ಯೆಗೆ ಕಂಗೆಟ್ಟ ಅಡಕೆ ಬೆಳೆಗಾರರಿಗೆ, ಔಷಧೋಪಚಾರದ ನಡುವೆಯೂ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ಬರದಿರುವುದು ಇನ್ನಷ್ಟು ಸಂಕಷ್ಟಕ್ಕೆ ನೂಕಿದೆ.
ಸಣ್ಣ ಚುಕ್ಕೆಗಳು ದೊಡ್ಡದಾಗಿ ಒಂದಕ್ಕೊಂದು ಸೇರಿ ಅಡಕೆ ಎಲೆಗೆ ಹಬ್ಬಿ ಅದನ್ನು ಒಣಗಿಸುತ್ತಿವೆ. ಉಲ್ಬಣಗೊಂಡ ರೋಗದಿಂದ ಅಡಕೆ ಕಾಯಿಗಳ ಮೇಲೆ ಚುಕ್ಕೆಗಳು ಮೂಡುತ್ತಿವೆ. ಬಾಧಿತ ಕಾಯಿಗಳು ಬಲಿಯುವ ಮೊದಲೇ ಹಳದಿಯಾಗಿ ಬೀಳುತ್ತಿವೆ. ಕೆಲವು ಕಾಯಿಗಳು ಸೀಳಿ ಉದುರುತ್ತಿವೆ. ಹಲವು ಭಾಗದ ತೋಟಗಳಲ್ಲಿ ಶೇ. 40ರಷ್ಟು ಅಡಿಕೆ ನೆಲಕ್ಕುದುರಿವೆ. ರೋಗ ಬಾಧಿತ ಮರಗಳ ಪತ್ರ ಹರಿತ್ತು ಕಡಿಮೆಯಾಗಿ ಉತ್ಪಾದನೆ ಕುಂಠಿತವಾಗುತ್ತಿದೆ. ಇದು ಮರದ ಬೆಳವಣಿಗೆಗೆ ಮತ್ತು ಇಳುವರಿಯ ಮೇಲೆ ದೀರ್ಘ ಕಾಲದ ದುಷ್ಪರಿಣಾಮ ಬೀರುತ್ತದೆ. ಔಷಧ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಇದೇ ರೀತಿಯಾದರೆ ಅಡಿಕೆ ಬೆಳೆಗಾರರು ತೀವ್ರ ಕಷ್ಟ ಎದುರಿಸಬೇಕಾಗುತ್ತದೆ.
ಜಿನುಗುವ ಮಳೆ-ಬಿಸಿಲಿಗೆ ರೋಗ ಉಲ್ಬಣಗೊಳ್ಳುತ್ತದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಎಲೆ ಚುಕ್ಕೆ ರೋಗ ಹೆಚ್ಚಾಗಿದೆ. ಅಕ್ಟೋಬರ್ ತಿಂಗಳಲ್ಲಿ ಇದೀಗ ರೋಗ ಉಲ್ಬಣಗೊಂಡಿದ್ದು, ಸಾವಿರಾರು ಹೆಕ್ಟೇರ್ ಅಡಿಕೆ ತೋಟ ಗಂಭೀರ ಹಂತ ತಲುಪಿವೆ. ಹೀಗಾಗಿ ಅಡಿಕೆ ಕೊಳೆ ರೋಗ ನಿಯಂತ್ರಣಕ್ಕೆ ಬೋರ್ಡೊ ದ್ರಾವಣ ಸಿಂಪರಣೆ ಮಾಡುವ ವೇಳೆ ಅಡಕೆ ಎಲೆಗಳಿಗೂ ಸಿಂಪಡಣೆ ಮಾಡಲು ರೈತರಿಗೆ ತಿಳಿಸಲಾಗಿತ್ತು. ಆದರೆ ಕೆಲ ರೈತರು ನಿರ್ಲಕ್ಷ್ಯ ವಹಿಸಿದ್ದರಿಂದ ರೋಗ ಉಲ್ಬಣಿಸಿದೆ ಎಂಬುದು ತೋಟಗಾರಿಕಾ ಇಲಾಖೆ ಅಧಿಕಾರಿಗಳ ಅಭಿಪ್ರಾಯ.
ಇದನ್ನೂ ಓದಿ | Sugar Production : ರಾಜ್ಯದಲ್ಲಿ ಸಕ್ಕರೆ ಉತ್ಪಾದನೆ ಈ ಬಾರಿ 42.30% ಕುಸಿತ ಭೀತಿ
ತೋಟಗಾರಿಕೆ ಇಲಾಖೆಯು ಬೆಳೆಗಾರರಿಗೆ ತಮ್ಮ ತೋಟಗಳನ್ನು ಹೇಗೆ ಸಂರಕ್ಷಿಸಬೇಕು ಎಂಬ ಸೂಚನೆಗಳನ್ನು ನೀಡಿದೆ. ಇಲಾಖೆಯಿಂದ ಕೃಷಿ ತಜ್ಞರಿಂದ ಕಾರ್ಯಾಗಾರ ನಡೆಸಿ ಉಪಯುಕ್ತ ಮಾಹಿತಿ ನೀಡಲಾಗಿದೆ. ರೋಗ ನಿಯಂತ್ರಣಕ್ಕೆ ಉಚಿತ ಔಷಧ ಕೂಡ ವಿತರಿಸಲಾಗಿದೆ.
| ಬಿ.ಪಿ. ಸತೀಶ ಹೆಗಡೆ, ಉಪನಿರ್ದೇಶಕ, ತೋಟಗಾರಿಕಾ ಇಲಾಖೆ
ಈ ಬಾರಿ ಜಿಲ್ಲೆಯಲ್ಲಿ ಹೆಚ್ಚು ಎಲೆ ಚುಕ್ಕೆ ರೋಗ ಕಾಣಿಸಿಕೊಂಡಿದೆ. ಗಾಳಿಯಿಂದ ಹರಡುವ ಈ ರೋಗದ ಬಗ್ಗೆ ರೈತರಿಗೆ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ. ಈ ಬಗ್ಗೆ ಸರ್ಕಾರ ಗಮನಹರಿಸಿ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಜತೆ ವಿಶೇಷ ಪ್ಯಾಕೇಜ್ ಘೋಷಿಸಬೇಕು.
| ಸುದರ್ಶನ್ ನಾಯ್ಕ. ಅಡಕೆ ಬೆಳೆಗಾರ