ಶಿವಮೊಗ್ಗ: ಸಾಮಾಜಿಕ ಜಾಲತಾಣದಲ್ಲಿ ಕಾಳಿ ಮಾತೆ ಸಿಗರೇಟ್ ಸೇದುವಂತಹ ಆಕ್ಷೇಪಾರ್ಹ ಪೋಸ್ಟರ್ ಹಾಕಿರುವ ನಿರ್ದೇಶಕಿ ಲೀನಾ ಮಣಿಮೇಕಲೈ ಮಾನಸಿಕ ಅಸ್ವಸ್ಥೆಯಾಗಿದ್ದು, ಆಕೆಯನ್ನು ಕೂಡಲೇ ಬಂಧಿಸಬೇಕು ಎಂದು ಸಂತೋಷ್ ಗುರೂಜಿ ಒತ್ತಾಯಿಸಿದ್ದಾರೆ.
ಸಾಕ್ಷ್ಯಚಿತ್ರದಲ್ಲಿ ಕಾಳಿಮಾತೆಗೆ ಅವಮಾನ ಮಾಡಿರುವ ಬಗ್ಗೆ ನಗರದಲ್ಲಿ ಬುಧವಾರ ಮಾತನಾಡಿದ ಅವರು, ಜಗತ್ತಿನಲ್ಲಿಯೇ ಸಹಬಾಳ್ವೆಯೊಂದಿಗೆ ಹೋಗುತ್ತಿರುವ ಏಕೈಕ ಧರ್ಮವೆಂದರೆ ಅದು ಸನಾತನ ಧರ್ಮ. ನಾವು ಚಿತ್ರಹಿಂಸೆಯನ್ನು ಪ್ರಚೋದಿಸುವ ಕೆಲಸವನ್ನು ಎಂದೂ ಮಾಡಿಲ್ಲ. ಲೀನಾ ಸಾವಿರಾರು ಸಾಕ್ಷ್ಯಚಿತ್ರವನ್ನು ತೆಗೆಯಲಿ, ಆದರೆ ಮಾದಕ ವಸ್ತುವನ್ನು ದೇವರ ಬಾಯಲ್ಲಿಟ್ಟು ತೋರಿಸಿರುವುದು ಸರಿಯಲ್ಲ. ದೇಶದಲ್ಲಿ ಎಲ್ಲವನ್ನೂ ನಾವು ದೇವಿ ರೂಪದಲ್ಲಿ ಕಾಣುತ್ತೇವೆ. ಅಂತಹದ್ದರಲ್ಲಿ ದೇವಿಯನ್ನು ಅವಹೇಳನಕಾರಿಯಾಗಿ ಚಿತ್ರಿಸಿರುವುದು ಅಕ್ಷಮ್ಯ ಅಪರಾಧ ಎಂದರು.
ಮುಸ್ಲಿಂ ಪ್ರವಾದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ ಇಡೀ ಜಗತ್ತಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಯಿತು. ಮುಸ್ಲಿಮರಲ್ಲಿ ಅವರ ಧರ್ಮದ ಬಗ್ಗೆ ಕಾಳಜಿ, ಪ್ರೀತಿ ಇದೆ. ಹಾಗಂತ ನಾವು ಹಿಂಸೆಗೆ ಇಳಿಯುವುದಿಲ್ಲ. ಹಿಂದು ದೇವತೆಗೆ ಅವಮಾನ ಮಾಡಿದವರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ ಅವರು, ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಭೀಕರ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿ, ನಾವಿಬ್ಬರೂ ಕೆಲವೊಂದು ಕಾರ್ಯಕ್ರಮಗಳನ್ನು ಒಟ್ಟಿಗೆ ಮಾಡಿದ್ದೆವು. ಅನ್ನ ತಿಂದ ಮನೆಗೆ ಕನ್ನ ಹಾಕುವ ಕೆಲಸ ನಡೆದಿದೆ. ತಪ್ಪಿತಸ್ಥರಿಗೆ ತಿಂಗಳೊಳಗೆ ನೇಣಿಗೆ ಹಾಕುವಂತಹ ಕೆಲಸವಾಗಬೇಕು. ಸರ್ಕಾರ ಶಾಂತಿ, ಸುವ್ಯವಸ್ಥೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ವಿಶೇಷವಾಗಿ ಸ್ವಾಮೀಜಿಗಳಿಗೆ ಹೆಚ್ಚಿನ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ನಗರದಲ್ಲಿ ತೆಂಗಿನ ಮರ ಬಿದ್ದು ಮನೆ ಹಾನಿಯಾಗಿರುವ ಸೋಮಿನಕೊಪ್ಪದ ಮಸೀದಿ ರಸ್ತೆಯಲ್ಲಿರುವ ಇಂದ್ರಮ್ಮ ಕೃಷ್ಣೋಜಿ ರಾವ್ ಕುಟುಂಬಸ್ಥರನ್ನು ಭೇಟಿ ನೀಡಿದ ಸಂತೋಷ್ ಗುರೂಜಿ, ಆರ್ಥಿಕ ನೆರವು ನೀಡಿದರು.
ಇದನ್ನೂ ಓದಿ | ʻಸರಳ ವಾಸ್ತುʼ ಚಂದ್ರಶೇಖರ ಗುರೂಜಿ ದೇಹಕ್ಕೆ 42 ಇರಿತ, ಕುತ್ತಿಗೆಯಲ್ಲೂ ಗಾಯ