Site icon Vistara News

Leopard attack: ಬೈಪಾಸ್‌ ಸರ್ವಿಸ್‌ ರಸ್ತೆ ಬದಿ ಕದಲದೆ ಕುಳಿತ ಚಿರತೆ; ಮನೆಯಿಂದ ಹೊರಬರದಂತೆ ಎಚ್ಚರಿಕೆ

#image_title

ಗದಗ: ಇಲ್ಲಿನ ಬಿಂಕದಕಟ್ಟಿ ಬಳಿ ಬೈಪಾಸ್ ಸರ್ವಿಸ್ ರಸ್ತೆಯಲ್ಲಿ ಚಿರತೆಯೊಂದು (Leopard attack) ಕಾಣಿಸಿಕೊಂಡಿದ್ದು, ಸಾರ್ವಜನಿಕರು, ವಾಹನ ಸವಾರರು ಆತಂಕಕ್ಕೆ ಒಳಗಾದರು. ಭಾನುವಾರ ರಾತ್ರಿ 10:30ರ ಸುಮಾರಿಗೆ ಬೈಪಾಸ್‌ ರಸ್ತೆ ಬದಿ ಬಂದ ಚಿರತೆಯು ಕದಲದಂತೆ ಕುಳಿತುಕೊಂಡಿತ್ತು.

ಮೊದಮೊದಲು ಸಾರ್ವಜನಿಕರು, ವಾಹನ ಸವಾರರು ಎಲ್ಲರೂ ಯಾವುದೋ ಬೀದಿನಾಯಿ ರಸ್ತೆ ಬದಿ ಕುಳಿತಿರಬೇಕೆಂದು ತಿಳಿದುಕೊಂಡಿದ್ದರು. ಸಮೀಪ ಬಂದು ನೋಡಿದಾಗಲೇ ಅದು ಚಿರತೆ ಎಂದು ತಿಳಿದು ಭಯಗೊಂಡರು. ಹಲವು ಬೈಕ್‌ ಸವಾರರು ಚಿರತೆ ಬಳಿ ಬಂದು ವಾಪಸ್‌ ತಿರುಗಿಸಿಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂತು.

ಚಿರತೆ ಕಂಡೊಡನೆ ಬೈಕ್‌ ತಿರುಗಿಸಿದ ಸವಾರರು

ಕಾರಿನಲ್ಲಿ ಸಂಚರಿಸುತ್ತಿದ್ದ ಸವಾರರೊಬ್ಬರು ರಸ್ತೆ ಬದಿ ಕುಳಿತ ಚಿರತೆಯನ್ನು ಮೊಬೈಲ್‌ನಲ್ಲಿ ಚಿತ್ರಿಕರಿಸಿದ್ದು, ಗದಗದಲ್ಲಿ ಚಿರತೆ ಸುದ್ದಿ ಕ್ಷಣಮಾತ್ರದಲ್ಲೇ ವೈರಲ್‌ ಆಗಿದೆ. ಚಿರತೆ ದೃಶ್ಯ ವೈರಲ್ ಆಗಿದ್ದೇ ತಡ ಬೈಪಾಸ್ ರಸ್ತೆ ಬಳಿ‌ ಜನರು ಜಮಾಯಿಸಿದ್ದಾರೆ. ಇತ್ತ ಜನರು ಜಮಾಯಿಸುತ್ತಿದ್ದಂತೆ ಅಲ್ಲಿಂದ ಚಿರತೆ ಕಾಲ್ಕಿತ್ತಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Karnataka Rain: ವಿಜಯಪುರದಲ್ಲಿ ಸಿಡಿಲು ಬಡಿದು 12 ಕುರಿಗಳು ಬಲಿ, ಕಂಗಾಲಾದ ರೈತರು; ರಾಜ್ಯದ ಅಲ್ಲಲ್ಲಿ ಇಂದೂ ಇದೆ ಮಳೆ

ಅರಣ್ಯ ಇಲಾಖೆ ಅಧಿಕಾರಿಗಳಿಂದ ಚಿರತೆಗಾಗಿ ಶೋಧ‌ ಕಾರ್ಯಾಚರಣೆ ನಡೆಯುತ್ತಿದ್ದು, ಬಿಂಕದಕಟ್ಟಿ,‌ ಅಸುಂಡಿ ಸೇರಿದಂತೆ ಸುತ್ತಲಿನ ಪ್ರದೇಶದ ಜನರು ಮನೆಯಿಂದ ಹೊರಬಾರದಂತೆ ಎಚ್ಚರಿಕೆ ನೀಡಲಾಗಿದೆ.

Exit mobile version