ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೊರವಲಯದ ಹಲವು ಪ್ರದೇಶದಲ್ಲಿ ಚಿರತೆಗಳ ಹಾವಳಿ, ದಾಳಿ (Leopard attack) ಹೆಚ್ಚಾಗಿ ಜನರು ಜೀವ ಭಯದಲ್ಲೇ ಓಡಾಡುವಂತಾಗಿತ್ತು. ಚಿರತೆ ಸೆರೆಗೆ ಅರಣ್ಯಾಧಿಕಾರಿಗಳು ಅಲ್ಲಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ, ಬೋನ್‌ಗಳನ್ನು ಇಟ್ಟಿದ್ದರು. ಇದೀಗ ಭೈರವಳ್ಳಿ ಬಳಿ ಇರಿಸಿದ್ದ ಬೋನಿಗೆ ಚಿರತೆ (Leopard catch) ಬಿದ್ದಿದೆ.
ಚಿರತೆ ಕಾಣಿಸಿಕೊಂಡಿರುವ ಪ್ರದೇಶಗಳಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು, ಮುಂಜಾನೆ ವಾಕಿಂಗ್ ಹೋಗುವ ಹಾಗೂ ಕೆಲಸಕ್ಕೆ ತೆರಳುವ ಜನರೆಲ್ಲರೂ ಜೀವವನ್ನು ಅಂಗೈಯಲ್ಲಿ ಹಿಡಿದು ಹೋಗುವಂತಾಗಿತ್ತು. ಸೂಲಿಕೆರೆ ಅರಣ್ಯ ವ್ಯಾಪ್ತಿಯಲ್ಲಿ ಚಿರತೆಯ ತೀವ್ರ ಉಪಟಳದ ಇಟ್ಟಿದ್ದ ಕಾರಣ ಬೋನು ಇರಿಸಲಾಗಿತ್ತು. ಶುಕ್ರವಾರ ರಾತ್ರಿ ಆಹಾರ ಅರಸಿ ಬಂದ ಚಿರತೆಯು ಬೋನಿಗೆ ಬಿದ್ದಿದೆ.
ಒಟ್ಟು ನಾಲ್ಕು ಚಿರತೆಗಳು ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತ ಕಾಣಿಸಿಕೊಂಡಿದೆ ಎಂದು ಹೇಳಲಾಗಿತ್ತು. ಬೆಂಗಳೂರಿನ ಹೊರ ವಲಯದ ಅಲ್ಲಲ್ಲಿ ಅರಣ್ಯ ಪ್ರದೇಶಗಳು ಇದ್ದರೂ ಒಮ್ಮೆ ಚಿರತೆಯು ನಗರದ ಒಳಗೆ ಪ್ರವೇಶ ಮಾಡಿದರೆ, ಸುತ್ತಮುತ್ತಲೆಲ್ಲ ಕಡೆಗಳಲ್ಲಿ ಮನೆಗಳು, ಕಟ್ಟಡಗಳೇ ಇರುವುದರಿಂದ ದಾಳಿ ನಡೆದರೆ ಹೆಚ್ಚಿನ ಸಾವು-ನೋವುಗಳು ಸಂಭವಿಸುವ ಆತಂಕವು ಎಲ್ಲೆಡೆ ಮನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಚಿರತೆ ಸೆರೆಗೆ ಒತ್ತಾಯಗಳು ಕೇಳಿಬಂದಿದ್ದವು.
ಕೆಂಗೇರಿ ಬಳಿಯ ತುರಹಳ್ಳಿ ಫಾರೆಸ್ಟ್ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿರುವುದು, ಬನಶಂಕರಿ, ಕೆಂಗೇರಿ, ರಾಜರಾಜೇಶ್ವರಿ ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಜನತೆಯನ್ನು ಭಯಭೀತಗೊಳಿಸಿತ್ತು. ಸದ್ಯ ಚಿರತೆಯೊಂದು ಬೋನಿಗೆ ಬಿದ್ದಿದ್ದರಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ.