ಆನೇಕಲ್: ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಕುಲುಮೆಪಾಳ್ಯದಲ್ಲಿ ದನ ಮೇಯಿಸಲು ಹೋಗಿದ್ದ ವ್ಯಕ್ತಿಯೊಬ್ಬರು (Leopard attack) ನಾಪತ್ತೆಯಾಗಿದ್ದಾರೆ. ಕುಲುಮೆಪಾಳ್ಯ ವಾಸಿ ಪುಟ್ಟಸ್ವಾಮಿ (54) ಕಾಣೆಯಾದವರು.
ಬನ್ನೇರುಘಟ್ಟ ಅರಣ್ಯದಂಚಿನಲ್ಲಿ ಪುಟ್ಟಸ್ವಾಮಿ ಕಳೆದ ಬುಧವಾರ ಮಧ್ಯಾಹ್ನ ದನ ಮೇಯಿಸಲು ಹೋದವರು ಮನೆಗೆ ವಾಪಸ್ ಆಗಿಲ್ಲ. ಕುಟುಂಬಸ್ಥರು ಎಲ್ಲ ಕಡೆ ಹುಡುಕಿದರೂ ಪುಟ್ಟಸ್ವಾಮಿ ಸುಳಿವು ಸಿಕ್ಕಿಲ್ಲ. ಚಿರತೆ ಹೊತ್ತೊಯ್ದಿರುವ ಶಂಕೆ ಇದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮಸ್ಥರಿಂದ ಕಳೆದ ಎರಡು ದಿನಗಳಿಂದ ಶೋಧ ಕಾರ್ಯ ಮುಂದುವರಿದಿದೆ.
ಇತ್ತ ಕಾಣೆಯಾದ ಪುಟ್ಟಸ್ವಾಮಿ ಬಗ್ಗೆ ಸಣ್ಣ ಸುಳಿವು ಸಿಗುತ್ತಿಲ್ಲ. ಪುಟ್ಟಸ್ವಾಮಿ ನಾಪತ್ತೆ ಬಗ್ಗೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕುಟುಂಬಸ್ಥರು ಆತಂಕದಲ್ಲೇ ದಿನದೂಡುವಂತಾಗಿದೆ.
ಇದನ್ನೂ ಓದಿ: Honeybee Attack: ಶಾಲೆಯಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಜೇನು ದಾಳಿ
ರೈತನ ಮೇಲೆ ದಾಳಿ ಮಾಡಿ ಮೇಕೆ ಹೊತ್ತೊಯ್ದ ಚಿರತೆ
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಾಮನಹಳ್ಳಿಯಲ್ಲಿ ಮಟಮಟ ಮಧ್ಯಾಹ್ನದಂದು ರೈತನ ಮೇಲೆ ದಾಳಿ ಮಾಡಿ ಮೇಕೆಯನ್ನು ಚಿರತೆ ಹೊತ್ತೊಯ್ದ ಘಟನೆ ಶುಕ್ರವಾರ (ಡಿ.14) ನಡೆದಿದೆ. ಪ್ರಾಣಾಪಾಯದಿಂದ ರೈತ ಶಶಿಕುಮಾರ್ (45) ಪಾರಾಗಿದ್ದಾರೆ.
ಚಾಮನಹಳ್ಳಿ ಗ್ರಾಮದ ಭತ್ತದ ಗದ್ದೆಯಲ್ಲಿ ಎರಡು ಚಿರತೆಗಳು ಬೀಡು ಬಿಟ್ಟಿವೆ. ಚಿರತೆ ದಾಳಿಯಿಂದ ಗ್ರಾಮದ ಜನತೆ ಭಯಭೀತರಾಗಿದ್ದಾರೆ. ಚಿರತೆಗಳ ಸೆರೆಗೆ ಆಗ್ರಹಿಸಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿತ್ರದುರ್ಗದಲ್ಲೂ ಚಿರತೆ ಭೀತಿ
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ನಾಗರಕಟ್ಟೆ ಗ್ರಾಮದಲ್ಲಿ ಚಿರತೆಯೊಂದು ಪ್ರತ್ಯಕ್ಷಗೊಂಡಿದೆ. ಕಳೆದ 15 ದಿನಗಳಿಂದ ಸಂಜೆ ಆಗುತ್ತಿದ್ದಂತೆ ತನ್ನ ಮರಿಗಳೊಂದಿಗೆ ಚಿರತೆ ಗ್ರಾಮಕ್ಕೆ ಬರುತ್ತಿದೆ. ಗ್ರಾಮದ ಎಮ್ಮೆ, ನಾಯಿಗಳ ಮೇಲೆ ದಾಳಿ ನಡೆಸುತ್ತಿದೆ.
ಚಿರತೆ ಪ್ರತ್ಯಕ್ಷದಿಂದ ಹೊಲ ಗದ್ದೆಗಳಿಗೆ ಹೋಗಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಈ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.
ಜಮೀನಿಗೆ ಹಾಕಿದ್ದ ವಿದ್ಯುತ್ ತಂತಿ ತುಳಿದು ಕಾಡಾನೆ ಸಾವು
ಕರೆಂಟ್ ಶಾಕ್‌ಗೆ ಕಾಡಾನೆಯೊಂದು (Elephant Death) ಬಲಿಯಾಗಿದೆ. ಇಲ್ಲಿನ ಪಿರಿಯಾಪಟ್ಟಣ ತಾಲೂಕಿನ ಮರಳುಕಟ್ಟೆ ಹಾಡಿ ಜಮೀನಿನಲ್ಲಿ ಘಟನೆ ನಡೆದಿದೆ. ಹಾಡಿಯ ಗಿರಿಜನ ಮಣಿ ಎಂಬುವವರ ಜಮೀನಿನಲ್ಲಿ ಕಾಡಾನೆ ಮೃತಪಟ್ಟಿದೆ.
ಮಣಿ ಜಮೀನಿನ ಸುತ್ತ ವಿದ್ಯುತ್ ತಂತಿಯನ್ನು ಹಾಕಿದ್ದರು. ಇತ್ತ ಆಹಾರ ಅರಸಿ ಬಂದ ಕಾಡಾನೆ, ತಂತಿಯನ್ನು ಸ್ಪರ್ಶಿಸಿದ ಕೂಡಲೇ ವಿದ್ಯುತ್ ಪ್ರವಹಿಸಿ ಮೃತಪಟ್ಟಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಣಿ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ.
ವಿದ್ಯುತ್ ಪರಿವೀಕ್ಷಕ ಅಧಿಕಾರಿ ವೀಣಾ, ಸೆಸ್ಕ್ ಎಇಇ ಗುರು ಬಸವರಾಜು ಪರಿಶೀಲಿಸಿದ್ದಾರೆ. ಅರಣ್ಯ ಇಲಾಖೆಯ ವನ್ಯಜೀವಿ ಪಶು ವೈದ್ಯ ಡಾ.ಚೆಟ್ಟಿಯಪ್ಪ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ವಿದ್ಯುತ್ ಶಾಕ್‌ನಿಂದ ಕಾಡಾನೆ ಮೃತಪಟ್ಟಿರುವುದನ್ನು ಖಚಿತ ಪಡಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ