ಬೆಂಗಳೂರು: 1972ರಲ್ಲಿ ಜಾರಿಗೆ ಬಂದ ವನ್ಯಜೀವಿ ಸಂರಕ್ಷಣಾ ಕಾಯಿದೆಯಿಂದಾಗಿ ರಾಜ್ಯದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಿದ್ದು, ಈಗ 29 ಜಿಲ್ಲೆಗಳಲ್ಲಿ 2,500 ಚಿರತೆಗಳಿವೆ. ಇದು ಮಾನವ-ಚಿರತೆ ಸಂಘರ್ಷ (Leopard attack) ಹೆಚ್ಚಲು ಕಾರಣವಾಗಿದೆ ಎಂದು ವನ್ಯಜೀವಿ ವಿಜ್ಞಾನಿ ಡಾ.ಸಂಜಯ್ ಗುಬ್ಬಿ ಹೇಳಿದ್ದಾರೆ. ಸಂಘರ್ಷ ತಪ್ಪಿಸಲು ಅವರು ಸರ್ಕಾರಕ್ಕೆ ಕೆಲ ಸಲಹೆಗಳನ್ನೂ ನೀಡಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಮತ್ತು ಅರಣ್ಯ ಸಚಿವರಿಗೆ ಪತ್ರ ಬರೆದಿರುವ ಅವರು, ಚಿರತೆಗಳಿಗೆ ದೊಡ್ಡ ಕಾಡುಗಳೇ ಇರಲೇಬೇಕೆಂದೇನೂ ಇಲ್ಲ. ಸಣ್ಣಪುಟ್ಟ ಕಾಡುಗಳಲ್ಲಿ, ಕಲ್ಲು ಬಂಡೆಗಳಿರುವ ಗುಡ್ಡ ಪ್ರದೇಶಗಳು, ಕುರುಚಲು ಕಾಡು, ಹುಲ್ಲುಗಾವಲು ಹೀಗೆ ಎಲ್ಲ ತರಹದ ಜಾಗಗಳಲ್ಲಿಯೂ ಬುದುಕುತ್ತವೆ. ಅವುಗಳಿಗೆ ದಿನವೊಂದಕ್ಕೆ 4 ಕೆ.ಜಿಯಷ್ಟು ಆಹಾರ ಸಾಕಾಗುತ್ತದೆ. ಹಾಗಾಗಿ ಮೊಲ, ಮುಳ್ಳು ಹಂದಿ, ಕಾಡು ಹಂದಿ, ಮೇಕೆ-ಕುರಿ, ಸಾಕಿದ ನಾಯಿಗಳು ಹೀಗೆ ಸಣ್ಣ ಪುಟ್ಟ ಪ್ರಾಣಿಗಳನ್ನೇ ಬೇಟೆಯಾಡಿ ಬದುಕುತ್ತದೆ. ಹೀಗಾಗಿಯೇ ಚಿರತೆಗಳು ನಗರಗಳ ಸಮೀಪ ಸೇರಿದಂತೆ ಎಲ್ಲ ಕಡೆಯೂ ಬದುಕಬಲ್ಲವು. ಇದರಿಂದಾಗಿಯೇ ಮಾನವ ಮತ್ತು ಚಿರತೆಗಳ ನಡುವಿನ ಸಂಘರ್ಷ ಹೆಚ್ಚುತ್ತಿದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.
ರಾಜ್ಯದಲ್ಲಿರುವ ಒಟ್ಟು ಚಿರತೆಗಳ ಪೈಕಿ. ಶೇ.50 ರಷ್ಟು ಚಿರತೆಗಳು ರಾಮನಗರ, ತುಮಕೂರು, ಮಂಡ್ಯ, ಮೈಸೂರು ಮತ್ತು ಹಾಸನ ಜಿಲ್ಲೆಗಳಲ್ಲಿವೆ. ಇತ್ತೀಚೆಗೆ ಕೊಪ್ಪಳ, ಬಳ್ಳಾರಿ ಮತ್ತು ಕೋಲಾರ ಜಿಲ್ಲೆಗಳಲ್ಲಿಯೂ ಇವುಗಳ ಸಂಖ್ಯೆ ಹೆಚ್ಚುತ್ತಿದೆ. ಕಲ್ಲು ಕ್ವಾರಿ ಮತ್ತು ಗಣಿಗಾರಿಕೆಯಿಂದಾಗಿ ಅವುಗಳ ವಾಸಸ್ಥಳ ಕಡಿಮೆಯಾಗಿರುವುದರಿಂದ ಅವು ಜನವಸತಿ ಪ್ರದೇಶಗಳತ್ತ ಬರುತ್ತಿವೆ. ರಾಜ್ಯದ ಸುಮಾರು 700 ಹಳ್ಳಿಗಳಲ್ಲಿ ಚಿರತೆಗಳು ಕಾಣಿಸಿಕೊಂಡಿವೆ ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿಧಾಮಗಳಾಚೆ ಚಿರತೆಗಳ ನೈಸರ್ಗಿಕ ಆಹಾರವಾದ ಜಿಂಕೆ, ಕಡವೆ, ಕೊಂಡು ಕುರಿ, ಕಾಡು ಕುರಿ, ಮೊಲ, ಕಾಡು ಕೋಳಿ ಇನ್ನಿತರ ಬಲಿ ಪ್ರಾಣಿಗಳ ಕಳ್ಳ ಬೇಟೆಯು ಹೆಚ್ಚಿದೆ. ಹಾಗಾಗಿ ನೈಸರ್ಗಿಕ ಆಹಾರವನ್ನು ಕಳೆದುಕೊಂಡ ಚಿರತೆಗಳು ಪರ್ಯಾಯವಾಗಿ ಕುರಿ-ಮೇಕೆಯಂತಹ ಪ್ರಾಣಿಗಳನ್ನು ಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ಸಿ.ಸಿ.ಟಿ.ವಿಗಳ ಬಳಕೆ ಹೆಚ್ಚಾಗಿ ಅವುಗಳಲ್ಲಿ ಚಿರತೆಗಳು ದಾಖಲಾಗುತ್ತಿರುವುದರಿಂದ ಚಿರತೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ ಎಂಬ ಅಭಿಪ್ರಾಯ ಮೂಡಿದೆ. ಅದರೊಡನೆ ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಇವುಗಳ ಇರುವಿಕೆ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಪ್ರಚಾರ ಮಾಡಿ ಜನರಲ್ಲಿ ಆತಂಕ ಮೂಡುವ ಹಾಗೆ ಮಾಡಲಾಗುತ್ತಿದೆ ಎಂದು ಡಾ.ಸಂಜಯ್ ಗುಬ್ಬಿ ಹೇಳಿದ್ದಾರೆ.
ಹೆಚ್ಚಾಗಿ ಮಾನವ-ವನ್ಯಜೀವಿ ಸಂಘರ್ಷದ ಪ್ರಭಾವ ಆಗುವುದು ಆರ್ಥಿಕವಾಗಿ ದುರ್ಬಲವಾಗಿರುವವರ ಮೇಲೆ, ಹಾಗೆಯೇ ಈ ಸಂಘರ್ಷ ಚಿರತೆಗಳ ಮೇಲೆ ಸಹ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಜೊತೆಗೆ ಸಂಘರ್ಷದಿಂದ ಸಮಾಜ ವನ್ಯಜೀವಿ, ನಿಸರ್ಗ ಸಂರಕ್ಷಣೆಯ ಬಗ್ಗೆ ಇಟ್ಟಿದ್ದ ಮೃದು ಭಾವನೆ ಕಡಿಮೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಸಂಘರ್ಷವನ್ನು ಕಡಿಮೆ ಮಾಡಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಡಾ.ಗುಬ್ಬಿ ಪತ್ರದಲ್ಲಿ ವಿವರಿಸಿದ್ದು, ಸರ್ಕಾರಕ್ಕೆ ಕೆಲ ಸಲಹೆಗಳನ್ನು ನೀಡಿದ್ದಾರೆ.
ಅವರು ನೀಡಿರುವ ಸಲಹೆಗಳು ಇಂತಿವೆ;
೧. ಅರಣ್ಯ ಇಲಾಖೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟಲು ಪ್ರತ್ಯೇಕವಾದ ವಿಭಾಗ ತೆರೆಯಬೇಕು ಮತ್ತು ಅವರಿಗೆ ವಿಶೇಷ ತರಬೇತಿ, ಸಂಪನ್ಮೂಲಗಳು ಮತ್ತು ಭತ್ಯೆಯನ್ನು ಒದಗಿಸಬೇಕು. ಅರಣ್ಯ ಇಲಾಖೆಯಲ್ಲಿ ತೀವ್ರವಾದ ಸಿಬ್ಬಂದಿ ಕೊರತೆಯಿದೆ ಮತ್ತು ಕೆಲಸದ ಒತ್ತಡವು ಅತೀ ಹೆಚ್ಚು. ಹಾಗಾಗಿ ಇರುವ ಸಿಬ್ಬಂದಿಗಳೇ ಮಾನವ-ವನ್ಯಜೀವಿ ಸಂಘರ್ಷವನ್ನು ನಿಭಾಯಿಸುವುದು ಬಹು ಕ್ಲಿಷ್ಟವಾದ ಕೆಲಸವಾಗಿದೆ.
೨. ಚಿರತೆಗಳನ್ನು ಅನಾವಶ್ಯಕವಾಗಿ ಹಿಡಿದು ಬೇರೆಡೆಗೆ ಸ್ಥಳಾಂತರಿಸುವುದನ್ನು ನಿಲ್ಲಿಸಬೇಕು. ಜೀವ ಹಾನಿ, ಅತಿಯಾದ ಸಂಘರ್ಷ ಮತ್ತಿತರ ತುರ್ತು ಪರಿಸ್ಥಿಗಳಲ್ಲಿ ಮಾತ್ರ ಚಿರತೆಗಳನ್ನು ಹಿಡಿದು ಮೃಗಾಲಯಗಳಿಗೆ ತೆಗೆದುಕೊಂಡು ಹೋಗ ಬೇಕು. ರಾಜ್ಯದಲ್ಲಿ 2009 ರಿಂದ 2016ರವರೆಗೆ 357 ಚಿರತೆಗಳನ್ನು ಸ್ಥಳಾಂತರಿಸಲಾಯಿತು. ತದನಂತರ ಪ್ರತಿ ವರ್ಷವೂ ನೂರಾರು ಚಿರತೆಗಳನ್ನು ಹಿಡಿದು ಸ್ಥಳಾಂತರಿಸಲಾಗಿದೆ. ಆದರೂ ಸಂಘರ್ಷ ಕಡಿಮೆಯಾಗಿಲ್ಲ ಎನ್ನುವುದು ಈ ಕಾರ್ಯನೀತಿ ಸರಿಯಿಲ್ಲವೆನ್ನುವುದನ್ನು ಎತ್ತಿ ತೋರಿಸುತ್ತದೆ.
೩. ಅರಣ್ಯ ಇಲಾಖೆಯ ತರಬೇತಿ ಸಂಸ್ಥೆಗಳಲ್ಲಿ ಅರಣ್ಯ ವೀಕ್ಷಕ, ಅರಣ್ಯ ರಕ್ಷಕ, ಉಪ ವಲಯ ಅರಣ್ಯಾಧಿಕಾರಿ ಮತ್ತು ವಲಯ ಅರಣ್ಯಾಧಿಕಾರಿಗಳ ತರಬೇತಿ ಕೇಂದ್ರಗಳಲ್ಲಿ, ಮಾನವ-ವನ್ಯಜೀವಿ ಸಂಘರ್ಷ ನಿಭಾಯಿಸುವ ಬಗ್ಗೆ ಕನಿಷ್ಠ ಒಂದು ವಾರದ ತರಬೇತಿಯನ್ನು ಕಡ್ಡಾಯಗೊಳಿಸಬೇಕು. ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಪ್ರತಿ ಮೂರು ವರ್ಷಕ್ಕೊಮ್ಮೆ ಮಾನವ-ವನ್ಯಜೀವಿ ಸಂಘರ್ಷ ನಿಭಾಯಿಸುವ ಬಗ್ಗೆ ಪುನಶ್ವೇತನ ತರಬೇತಿ ಕಾರ್ಯಕ್ರಮಗಳು ಕಡ್ಡಾಯಗೊಳಿಸಬೇಕು.
೪. ತುರ್ತು ಪರಿಸ್ಥಿತಿಗಳಲ್ಲಿ ಸೆರೆಹಿಡಿದ ಅಥವಾ ವಾಹನ ಅಪಘಾತಗಳಲ್ಲಿ ತೀವ್ರವಾಗಿ ಗಾಯಗೊಂಡ ಚಿರತೆಗಳ ಆರೈಕೆಗೆ ರಾಜ್ಯದಲ್ಲಿ ಕನಿಷ್ಠ ಮೂರು ಚಿರತೆ ಪುನರ್ವಸತಿ ಕೇಂದ್ರಗಳನ್ನು ತೆರೆಯಬೇಕು. ಚಿರತೆಗಳ ನೈಸರ್ಗಿಕ ಆವಾಸಸ್ಥಾನಗಳ ಸಂರಕ್ಷಣೆಗೆ ಒತ್ತು ಕೊಡಬೇಕು.
೫. ಚಿರತೆ ಅಥವಾ ಯಾವುದೇ ವನ್ಯಜೀವಿಗಳಿಂದ ಪ್ರಾಣ ಹಾನಿಯಾದರೆ ಕುಟುಂಬದವರಿಗೆ ಕೊಡುವ ಪರಿಹಾರವನ್ನು 15 ಲಕ್ಷ ರೂಪಾಯಿಗಳಿಗೆ ಮತ್ತು ನಾಲ್ಕು ವರ್ಷಗಳಿಗೆ ಕೊಡುತ್ತಿರುವ ತಿಂಗಳ ಮಾಸಾಶನವನ್ನು 6,000 ರೊಗಳಿಗೆ ಹೆಚ್ಚಿಸಬೇಕು. ವನ್ಯಜೀವಿಗಳಿಂದ ಜೀವಹಾನಿಯಾದರೆ, ಅದು ಸಂಭವಿಸಿದ ಸ್ಥಳದ ಮೇಲೆ ಅವಲಂಭಿಸದೆ ಎಲ್ಲೇ ಪ್ರಾಣ ಹಾನಿಯಾದರೂ ಪರಿಹಾರ ಮತ್ತು ಜೀವನಾಂಶ ಕೊಡಬೇಕು. ಕೆಲ ಕಡೆ ಕಾಡಿನ ಒಳಗಡೆ ಈ ಘಟನೆಗಳು ನಡೆದರೆ ಪರಿಹಾರ ಕೊಡಲು ಅರಣ್ಯಾಧಿಕಾರಿಗಳು ಹಿಂಜರಿಯುತ್ತಿದ್ದಾರೆ.
೬. ಗ್ರಾಮಾಂತರ ಪ್ರದೇಶಗಳಲ್ಲಿ ಜಾನುವಾರು ಮತ್ತು ಕೋಳಿ ಸಾಕಾಣೆ ಮಾಡುವವರು ರಾತ್ರಿ ವೇಳೆ ತಮ್ಮ ಪ್ರಾಣಿಗಳನ್ನು ಸುರಕ್ಷಿತವಾಗಿ ಕೊಟ್ಟಿಗೆಗೂಡುಗಳಲ್ಲಿ ಕಟ್ಟಲು/ಇಡಲು ಕ್ರಮ ಕೈಗೊಳ್ಳಬೇಕು. ತೆರೆದ ಜಾಗದಲ್ಲಿ ಪ್ರಾಣಿಗಳನ್ನು ಕಟ್ಟಿದರೆ ಚಿರತೆಗಳನ್ನು ಆಕರ್ಷಿಸದಂತಾಗುತ್ತದೆ. ಈ ನಿಟ್ಟಿನಲ್ಲಿ ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಸಹಾಯಧನ ಒದಗಿಸಬೇಕು.
೭. ರೈತರು ರಾತ್ರಿ ವೇಳೆ ತೋಟ, ಜಮೀನುಗಳಿಗೆ ನೀರು ಕಟ್ಟಲು ಹೋದಾಗ ಹಲವಾರು ಬಾರಿ ಚಿರತೆ, ಕರಡಿ, ಆನೆಗಳಿಂದ ಜೀವ ಹಾನಿಯಾಗಿದೆ. ಹಾಗಾಗಿ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಿರುವ ಹಳ್ಳಿಗಳಲ್ಲಿ ದಿನದ ವೇಳೆ ಮೂರು ಫೇಸ್ ವಿದ್ಯುಚ್ಛಕ್ತಿ ನೀಡುವ ವ್ಯವಸ್ಥೆ ಆಗಬೇಕು.
೮. ಸಂಘರ್ಷ ಹೆಚ್ಚಿರುವ ಗ್ರಾಮ/ತಾಲ್ಲೂಕುಗಳಲ್ಲಿ ರೈತರು ತಮ್ಮ ಕೃಷಿಭೂಮಿ ಪಂಪ್ ಗಳಿಗೆ ಸಿಮ್ ಕಾರ್ಡ್ ಚಾಲಿತ ಸ್ಟಾಟರ್ ಗಳನ್ನು ಅಳವಡಿಸಿಕೊಳ್ಳಲು ಸೂಕ್ತ ಸಹಾಯಧನ ನೀಡಬೇಕು. ಇದರಿಂದ ಅವರು ಕತ್ತಲಲ್ಲಿ ಪಂಪ್ ಚಾಲನೆ ಮಾಡಲು ಹೋಗಬೇಕಾಗುವುದಿಲ್ಲ.
೯. ವನ್ಯಜೀವಿ ಸಂಘರ್ಷ ಇರುವ ಪ್ರದೇಶಗಳಲ್ಲಿ ಸರ್ಕಾರದ ಕಾರ್ಯಕ್ರಮಗಳ ಅಡಿಯಲ್ಲಿ ಶೌಚಾಲಯಗಳನ್ನು ನಿರ್ಮಿಸಿ, ನೀರಿನ ವ್ಯವಸ್ಥೆ ಮಾಡಬೇಕು. ಬಹಿರ್ದೆಸೆಗೆಂದು ಕೆಳಗೆ ಕುಳಿತಿರುವಾಗ ಚಿರತೆಗಳಿಗೆ ನಾವು ಸಣ್ಣ ಬಲಿ ಪ್ರಾಣಿಗಳ ಹಾಗೆ ಕಾಣುತ್ತೇವೆ ಮತ್ತು ಅವುಗಳು ನಮ್ಮ ಮೇಲೆ ಎರಗಬಹುದು.
೧೦. ಕಾಡಂಚಿನ ಗ್ರಾಮಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಬೇಕು. ಒಂಟಿಯಿರುವ ಮನೆಗಳಿಗೆ ವಿದ್ಯುಚ್ಛಕ್ತಿ ಅಥವಾ ಸೌರಶಕ್ತಿ ದೀಪಗಳ ಸೌಲಭ್ಯ ಒದಗಿಸಿಕೊಡಬೇಕು.
೧೧. ಸಂಘರ್ಷ ಇರುವ ಪ್ರದೇಶಗಳಲ್ಲಿ ಪ್ರಾಥಮಿಕ, ಮಧ್ಯಮ, ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಶಾಲೆಗೆ ಹೋಗಲು ಕಡ್ಡಾಯವಾಗಿ ಸಾರಿಗೆ ವ್ಯವಸ್ಥೆ ಮಾಡಬೇಕು.
೧೨. ಈಗಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸಾರ್ವಜನಿಕರಲ್ಲಿ ಭಯ, ಆತಂಕ ಮೂಡಿಸುವ ಕೆಲಸ ಹೆಚ್ಚಾಗಿದೆ. ಹಾಗಾಗಿ ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
ಇದನ್ನೂ ಓದಿ | Leopard attack | ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ: ಸಿಎಂ ಬೊಮ್ಮಾಯಿ ಘೋಷಣೆ