Site icon Vistara News

Leopard attack: ಮಹಿಳೆ ಮೇಲೆ ದಾಳಿ ಮಾಡಿ ಮರುಕ್ಷಣವೇ ಪ್ರಾಣಬಿಟ್ಟ ಚಿರತೆ!

lepord attack

lepord attack

ಹಾವೇರಿ: ಇಲ್ಲಿನ ರಾಣೆಬೆನ್ನೂರ ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಬಾಯಿ ನೋವಿನಿಂದ ಬಳಲುತ್ತಿದ್ದ ಚಿರತೆಯು (Leopard attack) ಮಹಿಳೆ ಮೇಲೆ ದಾಳಿ ನಡೆಸಿದೆ. ಆಹಾರವಿಲ್ಲದೆ ನಿತ್ರಾಣಗೊಂಡಿದ್ದ ಚಿರತೆ ಬಳಿಕ ಮೃತಪಟ್ಟಿದೆ.

ಗ್ರಾಮದ ಸಿದ್ದಮ್ಮ ಬಣಗಾರ ಎಂಬುವರು ಭಾನುವಾರ ಬೆಳಗ್ಗೆ ತೋಟಕ್ಕೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಏಕಾಏಕಿ ಚಿರತೆಯು ಸಿದ್ದಮ್ಮ ಮೇಲೆ ಎರಗಿ ದಾಳಿ ಮಾಡಿತ್ತು. ಚಿರತೆ ದಾಳಿ ಮಾಡುತ್ತಿದ್ದಂತೆ ಸಿದ್ದಮ್ಮ ಜೋರಾಗಿ ಕೂಗಿಕೊಂಡಿದ್ದಾರೆ. ಈ ವೇಳೆ ಗ್ರಾಮಸ್ಥರು ಬಂದು ಚಿರತೆಯನ್ನು ಓಡಿಸುತ್ತಿದ್ದಂತೆ ಅಡಕೆ ತೋಟಕ್ಕೆ ನುಗ್ಗಿದೆ.

ಸಿದ್ದಮ್ಮ ಮೇಲೆ ದಾಳಿ ಮಾಡಿದ್ದ ಚಿರತೆ ಸಾವು

ಚಿರತೆ ದಾಳಿಗೆ ಒಳಗಾಗಿದ್ದ ಸಿದ್ದಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತ್ತ ಒಂದು ಗಂಟೆ ಬಳಿಕ ಗ್ರಾಮದ ಬಳಿಯಿರುವ ಅಡಕೆ ತೋಟದಲ್ಲಿ ಚಿರತೆಯ ಮೃತದೇಹವು ಪತ್ತೆಯಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಚಿರತೆಯು ಬಾಯಿ ನೋವಿನಿಂದ ಬಳಲಿ, ಆಹಾರವಿಲ್ಲದೆ ನಿತ್ರಾಣಗೊಂಡು ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.

ಕಾಡಾನೆಗೆ ಗುಂಡಿಟ್ಟು ಕೊಂದ ದುಷ್ಕರ್ಮಿಗಳು

ಕೊಡಗು ಜಿಲ್ಲೆಯಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷ (Elephant and human conflict) ಮುಂದುವರಿದಿದೆ. ಇಲ್ಲಿ ಕಾಡಾನೆಗಳು (Wild elephants) ಕಾಡಿನ ಭಾಗದಲ್ಲಿ ಮನುಷ್ಯರ ಮೇಲೆ ದಾಳಿ ಮಾಡುವುದು ಸಾಮಾನ್ಯವಾಗಿದ್ದರೆ, ಈ ಬಾರಿ ಕಿಡಿಗೇಡಿಗಳು 20 ವರ್ಷ ಪ್ರಾಯದ ಹೆಣ್ಣು ಕಾಡಾನೆಯನ್ನೇ ಗುಂಡಿಟ್ಟು (Elephant killed) ಕೊಂದಿದ್ದಾರೆ.

ಕೊಡಗಿನ ಕುಶಾಲನಗರ ತಾಲೂಕಿನ ಬಾಳುಗೋಡಿನಲ್ಲಿ ಘಟನೆ ನಡೆದಿದೆ. ಇಲ್ಲಿನ ರಸೂಲ್‌ಪುರ ಮತ್ತು ಬಾಳುಗೋಡು ನಡುವಿನ ಜಗದೀಶ್‌ ಎಂಬುವವರಿಗೆ ಸೇರಿದ ತೋಟದಲ್ಲಿ ಆನೆಯನ್ನು ಕೊಲೆ ಮಾಡಲಾಗಿದೆ. ಈ ಕಾಡಾನೆ ಆಹಾರ ಅರಸಿ ಬಾಳುಗೋಡಿನ ಜನವಸತಿ ಪ್ರದೇಶಕ್ಕೆ ಬಂದಿತ್ತು ಎನ್ನಲಾಗಿದೆ. ಅದು ತೋಟದೊಳಗೆ ಹೋಗಿದ್ದ ವೇಳೆ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಆನೆ ಹತ್ಯೆಗೈದ ವ್ಯಕ್ತಿಗಳ ಪತ್ತೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ: Crocodile Attack: ಬಾಟಲಿಗೆ ನೀರು ತುಂಬುತ್ತಿದ್ದ ಬಾಲಕನ ಹೊತ್ತೊಯ್ದ ಮೊಸಳೆ; ನದಿಯಲ್ಲಿ ತುರುಸಿನ ಶೋಧ

ಕೊಡಗು ಜಿಲ್ಲೆಯಲ್ಲಿ ಆನೆಗಳ ದಾಳಿಯಿಂದ ಹಲವಾರು ಸಾವುಗಳು ಸಂಭವಿಸಿವೆ. ಕೆಲವು ವಾರಗಳ ಹಿಂದೆ ಇಲ್ಲಿ ಒಂದೇ ದಿನ ಅಜ್ಜ ಮತ್ತು ಮೊಮ್ಮಗನನ್ನು ಆನೆ ಬಲಿ ಪಡೆದಿತ್ತು. ಆಗ ಸಾರ್ವಜನಿಕರು ಆನೆಯನ್ನು ತಕ್ಷಣ ಹಿಡಿಯದಿದ್ದರೆ ತಾವೇ ಅದನ್ನು ಹಿಡಿದು ಕೊಲ್ಲುವುದಾಗಿ ಎಚ್ಚರಿಕೆ ನೀಡಿದ್ದರು. ಕೊನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ಹಿಡಿದಿದ್ದರು. ಈ ನಡುವೆ ಆನೆಗಳ ಉಪಟಳ ತಾಳಲಾಗದೆ ಜನರೇ ಕಾನೂನನ್ನು ಕೈಗೆತ್ತಿಕೊಳ್ಳಲು ಮುಂದಾಗುತ್ತಿರುವ ವಿದ್ಯಮಾನಗಳು ಅಲ್ಲಲ್ಲಿ ನಡೆಯುತ್ತಿವೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version