ಬೆಂಗಳೂರು: ಬೆಂಗಳೂರಿನ ಬೀದಿಯಲ್ಲಿ ರಾಜಾರೋಷವಾಗಿ ಓಡಾಡಿ ಅಪಾರ್ಟ್‌ಮೆಂಟ್ ಮೊದಲ ಮಹಡಿಗೂ ಚಿರತೆ ವಿಸಿಟ್ (Leopard Spotted) ಕೊಟ್ಟು ಹೋಗಿದೆ. ಚಿರತೆಯೊಂದು ಕಳೆದ ಹಲವು ದಿನದಿಂದ ಬೆಂಗಳೂರಿನ ಜನರ ನಿದ್ದೆಗೆಡಿಸಿದೆ. ಚಿರತೆ ಓಡಾಟಕ್ಕೆ ಬ್ರೇಕ್ ಹಾಕಲು ಅರಣ್ಯಾಧಿಕಾರಿಗಳು ಸರ್ಕಸ್ ಮಾಡುತ್ತಿದ್ದಾರೆ. ಸದ್ಯ ಬೆಂಗಳೂರು ಚಿರತೆ ಸೆರೆಗೆ ಮೈಸೂರಿನ ಟಾಸ್ಕ್ ಫೋರ್ಸ್ ತಂಡ ಭೇಟಿ ನೀಡಿದೆ. ಈಗಾಗಲೇ ಹಲವು ಕಡೆ ಚಿರತೆಗಳನ್ನು ಹಿಡಿದು ಪರಿಣಿತರಾಗಿರುವ ಸಿಬ್ಬಂದಿ ಚಿರತೆ ಕಾರ್ಯಾಚರಣೆ ನಡೆಸಲಿದ್ದಾರೆ. ಜತೆಗೆ ಬನ್ನೇರುಘಟ್ಟದಿಂದ ಬಯೋಲಾಜಿಕಲ್ ಪಾರ್ಕ್‌ನಿಂದ ವೈದ್ಯಾಧಿಕಾರಿ ತಂಡವು ಆಗಮಿಸಿದೆ.
ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸೋಮವಾರ ತಡರಾತ್ರಿ ಚಿರತೆ ಕಾಣಿಸಿಕೊಂಡಿದೆ. ಪರಪ್ಪನ ಅಗ್ರಹಾರ ಲಾ ಆ್ಯಂಡ್ ಆರ್ಡರ್ ಪೊಲೀಸ್ ನೈಟ್ ಬೀಟ್ ಮಾಡುವಾಗ ಚಿರತೆ ಓಡಾಡಿದೆ. ಖಾಲಿ ಬಿಲ್ಡಿಂಗ್ ಮುಂಭಾಗದಲ್ಲಿ ಚಿರತೆ ಓಡಾಟ ಕಂಡು ಪೊಲೀಸರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಬಿಲ್ಡಿಂಗ್ ಒಳಗಡೆಯೇ ಚಿರತೆ ಇರುವ ಶಂಕೆ ಇದೆ.
ಹೀಗಾಗಿ ಕಗ್ಗಲೀಪುರ, ಆನೇಕಲ್ ಅರಣ್ಯಾಧಿಕಾರಿಗಳಿಂದ 2 ಬೋನ್‌ಗಳನ್ನು ಸಿಬ್ಬಂದಿ ತರಿಸಿಕೊಂಡಿದ್ದಾರೆ. ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಚಿರತೆ ಹಿಡಿಯಲು ಸಕಲ ರೀತಿಯಲ್ಲಿ ಸಜ್ಜಾಗಿದ್ದಾರೆ. ಚಿರತೆ ಟಾಸ್ಕ್ ಪೋರ್ಸ್ ಟೀಂ ಸೇಫ್ಟಿ ಜಾಕೇಟ್ ಬಳಸಿ ಅಖಾಡಕ್ಕೆ ಇಳಿದಿದ್ದಾರೆ.
ವನ್ಯಪ್ರಾಣಿಗಳಿಂದ ಸಾಕಷ್ಟು ಹುಷಾರಾಗಿ ಇರಬೇಕೆಂದು ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಮುಖ್ಯ ವನ್ಯ ಜೀವಿ ಪರಿಪಾಲಕ ಅಧಿಕಾರಿ ಸುಭಾಸ್ ಮಾಲ್ಕಾಡೆ ತಿಳಿಸಿದ್ದಾರೆ. ಕಾರ್ಯಾಚರಣೆ ವೇಳೆ ಜನರು ಎಲ್ಲರೂ ಹೊರಗಡೆ ಓಡಾಡಬಾರದು. ಮೈಸೂರಿನಿಂದ ಟಾಸ್ಕ್ ಪೋರ್ಸ್ ಬಂದಿದೆ. ವೈದ್ಯ ಕಿರಣ್ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಎರಡು ಕಡೆ ರಸ್ತೆ ಬಂದ್
ಕಾರ್ಯಾಚರಣೆ ವೇಳೆ ಜನರು ಓಡಾಡದಂತೆ ಪಾಲು ಬಿದ್ದ ಬಿಲ್ಡಿಂಗ್ ಬಳಿ ಎರಡು ಕಡೆ ರಸ್ತೆ ಬಂದ್ ಮಾಡಲಾಗಿದೆ. ಚಿರತೆ ಸೆರೆ ಕಾರ್ಯಾಚರಣೆ ಸಂದರ್ಭದಲ್ಲಿ ಯಾವುದೇ ಅನಾಹುತ ಸಂಭವಿಸಬಾರದೆಂದು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಅಕ್ಕಪಕ್ಕದಲ್ಲಿ ಪ್ರತಿಷ್ಠಿತ ಐಟಿ ಕಂಪನಿಗಳಿರುವ ಹಿನ್ನೆಲೆಯಲ್ಲಿ ಯಾರು ಹೊರಗೆ ಬಾರದಂತೆ ಸೂಚನೆ ನೀಡಲಾಗಿದೆ. ಪಾಳು ಬಿದ್ದ ಬಿಲ್ಡಿಂಗ್‌ನಲ್ಲಿ ಚಿರತೆ ಓಡಾಟ ನಡೆಸಿರುವ ಹೆಜ್ಜೆ ಗುರುತು ಪತ್ತೆಯಾಗಿದೆ.
ಚಿರತೆ ಭಯಕ್ಕೆ ಜನರ ಕೈಗೆ ಬಂತು ದೊಣ್ಣೆ
ಬೊಮ್ಮನಹಳ್ಳಿಯ ಕೂಡ್ಲು ಭಾಗದ ಜನವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ. ಸದ್ಯ ಪರಿಸ್ಥಿತಿ ಹೇಗಾಗಿದೆ ಎಂದರೆ ಮನೆಯಿಂದ ಹೊರಗೆ ಹೋಗಬೇಕಾದರೆ ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಭಯದಿಂದಲೇ ಓಡಾಡುವಂತಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ