ಬೆಂಗಳೂರು: ಬೊಮ್ಮನಹಳ್ಳಿಯ ಕೂಡ್ಲು ಗೇಟ್ ಬಳಿ ಚಿರತೆ ಪ್ರತ್ಯಕ್ಷವಾದ (Leopard Spotted) ಹಿನ್ನೆಲೆಯಲ್ಲಿ ಜನರು ಮನೆಯಲ್ಲೇ ಬಂಧಿಯಾಗಿದ್ದಾರೆ. ಅರಣ್ಯಾಧಿಕಾರಿಗಳು ಎಷ್ಟೇ ಸರ್ಕಸ್ ಮಾಡಿದರೂ ಚಿರತೆಯನ್ನು ಸೆರೆ ಹಿಡಿಯಲು ಆಗುತ್ತಿಲ್ಲ. ಕೂಡ್ಲು ಗೇಟ್‌ನಲ್ಲಿರುವ ಕಡೆಂಝಾ (cadenza) ಅಪಾರ್ಟ್‌ಮೆಂಟ್‌ನಲ್ಲಿ ಓಡಾಡಿದ ಚಿರತೆ ಬಳಿಕ ನಾಪತ್ತೆ ಆಗಿದೆ. ಹೀಗಾಗಿ ರಾತ್ರಿ ಕಾರ್ಯಾಚರಣೆಗೆ ಥರ್ಮಲ್ ಡ್ರೋನ್ (Thermal drone) ಬಳಕೆಗೆ ಅಧಿಕಾರಿಗಳು ಮುಂದಾಗಿದ್ದಾರೆ.
ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸೋಮವಾರ ತಡರಾತ್ರಿ ಚಿರತೆ ಕಾಣಿಸಿಕೊಂಡಿತ್ತು. ಪರಪ್ಪನ ಅಗ್ರಹಾರ ಲಾ ಆ್ಯಂಡ್ ಆರ್ಡರ್ ಪೊಲೀಸರು ನೈಟ್ ಬೀಟ್ ಮಾಡುವಾಗ ಚಿರತೆಯನ್ನು ಕಂಡಿದ್ದರು. ಪಾಳು ಬಿದ್ದ ಕಟ್ಟಡವೊಂದರಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿತ್ತು. ಹೀಗಾಗಿ ಮೂಲೆ ಮೂಲೆಯಲ್ಲೂ ಹುಡುಕಾಡಿ ತಡಕಾಡಿದರೂ ಚಿರತೆ ಸುಳಿವು ಮಾತ್ರ ಸಿಕ್ಕಿಲ್ಲ.
ಬೊಮ್ಮನಹಳ್ಳಿಯ ಕೂಡ್ಲು ಭಾಗದ ಜನವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳವಾರ (ಅ.31) ಬೆಳಗಿನಿಂದ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಆದರೆ ಸಂಜೆ ಕಳೆದರೂ ಚಿರತೆ ಬೋನಿಗೆ ಬೀಳುತ್ತಿಲ್ಲ. ಹೀಗಾಗಿ ಥರ್ಮಲ್ ಡ್ರೋನ್ ಮೂಲಕ ಚಿರತೆ ಸೆರೆ ಹಿಡಿಯಲು ಮುಂದಾಗಿದ್ದಾರೆ.
ಇದನ್ನೂ ಓದಿ: Leopard Death : ಅರಣ್ಯಾಧಿಕಾರಿಗಳು ಹುಡುಕುತ್ತಿದ್ದ ಚಿರತೆ ಕರೆಂಟ್ ಶಾಕ್‌ನಿಂದ ಸಾವು!
ಥರ್ಮಲ್ ಡ್ರೋನ್ ಹೇಗೆ ಕಾರ್ಯನಿರ್ವಹಿಸುತ್ತೆ?
ಸಂಜೆ ಕಳೆದು ರಾತ್ರಿ ಆವರಿಸುತ್ತಿರುವುದರಿಂದ ಚಿರತೆ ಸೆರೆಗೆ ಥರ್ಮಲ್ ಡ್ರೋನ್ ಬಳಕೆ ಮಾಡಲಾಗುತ್ತಿದೆ. ಹಗಲು ಮತ್ತು ರಾತ್ರಿ ಪ್ರಾಣಿಗಳ ಚಲನವಲನ ಥರ್ಮಲ್ ಡ್ರೋನ್‌ನಿಂದ ತಿಳಿಯಲಿದೆ. ರಾತ್ರಿ ಸಮಯದಲ್ಲೂ ಪ್ರಾಣಿಗಳ ದೃಶ್ಯ ಸೆರೆ ಹಿಡಿಯಬಲ್ಲ ಸಾಮರ್ಥ್ಯವನ್ನು ಈ ಥರ್ಮಲ್ ಡ್ರೋನ್ ಹೊಂದಿದೆ. ಮೊದಲ ಬಾರಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಥರ್ಮಲ್ ಡ್ರೋನ್ ಬಳಸಲಾಗಿತ್ತು. ಈವರೆಗೂ ಹುಲಿ, ಚಿರತೆ, ಆನೆಗಳನ್ನು ಸೆರೆ ಹಿಡಿಯಲು ಡ್ರೋನ್ ಬಳಕೆ ಮಾಡಲಾಗಿದೆ.
ಥರ್ಮಲ್ ಡ್ರೋನ್ ಕ್ಯಾಮೆರಾವು ಮೂರು ಬ್ಯಾಟರಿಗಳ ಸಾಮಾರ್ಥ್ಯ ಹೊಂದಿದೆ. ಪ್ರಾಣಿಗಳು ಪತ್ತೆಯಾದ ತಕ್ಷಣ ಲೊಕೇಷನ್ ಸಮೇತ ಪ್ರಾಣಿಯ ಚಿತ್ರ ಸೆರೆ ಹಿಡಿದು ಕಳಿಸುತ್ತದೆ. ಇತರೆ ಡ್ರೋನ್‌ನಂತೆ ಥರ್ಮಲ್ ಡ್ರೋನ್‌ನಲ್ಲಿ ಹೆಚ್ಚು ಶಬ್ದ ಇರುವುದಿಲ್ಲ. ಇದರಿಂದಾಗಿ ಪ್ರಾಣಿಗಳಿಗೆ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ. ಗರಿಷ್ಠ 1 ಕಿ.ಮೀ ಸುತ್ತಲಿನ ಪ್ರದೇಶದ ವ್ಯಾಪ್ತಿಯಲ್ಲಿರುವ ಫೋಟೋ ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ. ಹಗಲು ಹೊತ್ತು ಮಾಮೂಲಿ ಚಿತ್ರ ಹಾಗೂ ರಾತ್ರಿ ನೆಗೆಟೀವ್ ಮಾದರಿಯ ಚಿತ್ರಗಳನ್ನು ಸೆರೆ ಹಿಡಿಯಬಲ್ಲದು. ಸಾಧಾರಣ ಡ್ರೋನ್‌ಗಳು ಕಾಡಿನ ಚಿತ್ರಗಳನ್ನಷ್ಟೇ ಸೆರೆ ಹಿಡಿದರೆ ಥರ್ಮಲ್ ಡ್ರೋನ್ ಪ್ರಾಣಿಗಳನ್ನೂ ಗುರುತಿಸಿ ಚಿತ್ರ ಕ್ಲಿಕ್ಕಿಸುತ್ತದೆ.
ಚಿರತೆ ಕಾರ್ಯಾಚರಣೆ ಸ್ಥಳಕ್ಕೆ ಶಾಸಕ ಸತೀಶ್ ರೆಡ್ಡಿ ಭೇಟಿ ನೀಡಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಪ್ರತಿಕ್ರಿಯಿಸಿದ ಅವರು ಮೂರ್ನಾಲ್ಕು ದಿನಗಳಿಂದ ಚಿರತೆ ಓಡಾಡುವ ಮಾಹಿತಿ ಇತ್ತು. ಅಪಾರ್ಟ್‌ಮೆಂಟ್ ನಿವಾಸಿಗಳು ಚಿರತೆ ಪ್ರತ್ಯಕ್ಷದ ಕುರಿತು ಮಾಹಿತಿ ನೀಡಿದ್ದಾರೆ. ಈಗಾಗಲೇ ಸಿಸಿಟಿವಿ ದೃಶ್ಯಾವಳಿಗಳು ಕೂಡ ಲಭ್ಯವಾಗಿವೆ. ಹಳೆಯ ಕಟ್ಟಡದ ಒಳಗೆ ಬೋನ್ ಇಡಲಾಗಿದೆ. ಜನರು ಆತಂಕಪಡುವ ಅಗತ್ಯ ಇಲ್ಲ. ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ಆದಷ್ಟು ಬೇಗ ಚಿರತೆಯನ್ನು ಸೆರೆ ಹಿಡಿಯಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ