ಚಿತ್ರದುರ್ಗ: ʻʻʻಬ್ರಿಟಿಷರ ಕಾಲದಲ್ಲಿ ಆರ್ಯರು, ದ್ರಾವಿಡರು ಎಂಬ ಚರ್ಚೆ ಹುಟ್ಟು ಹಾಕಲಾಯಿತು. ಆರ್ಯರು ಹೊರಗಿನವರಲ್ಲ ಎಂಬ ವೈಜ್ಞಾನಿಕ ಪುರಾವೆಯಿದೆ. ಆದರೂ ಆರ್ಯರು, ದ್ರಾವಿಡರು ಎಂಬ ಚರ್ಚೆ ಹುಟ್ಟು ಹಾಕುವುದು ಸಿದ್ದರಾಮಯ್ಯಗೆ ಶೋಭೆ ತರುವುದಿಲ್ಲʼʼ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿಕೆಗೆ ಟಾಂಗ್ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಸೋಮವಾರ ಮಾತನಾಡಿದ ಅವರು, ಹೆಡ್ಗೇವಾರ್ ಸಿದ್ಧಾಂತದ ಮೇಲೆ ರಾಜಕೀಯ ಪಕ್ಷ ಬಿಜೆಪಿ ರೂಪುಗೊಂಡಿದೆ. ಜನ ಒಪ್ಪಿದ ಸಿದ್ಧಾಂತ ತಿರಸ್ಕರಿಸುವುದು ಸರಿಯಲ್ಲ, ಮಹಾತ್ಮ ಗಾಂಧಿ ಹತ್ಯೆ ವೇಳೆ ಸಿಹಿ ಹಂಚಿದ್ದು ಯಾರು? ಯಾವ ದಾಖಲೆಯಿದೆ, ಕಾಂಗ್ರೆಸ್ ಹೇಳಲಿ, ಆರ್‌ಎಸ್‌ಎಸ್ ದೇಶ ವಿರೋಧಿ ಆಗಿದ್ದರೆ ಜನ ಬಿಜೆಪಿಗೆ ಮತ ಹಾಕುತ್ತಿದ್ದರೇ ಎಂದು ಪ್ರಶ್ನಿಸಿದರು.
ಮಸೀದಿ ಸ್ಥಳಗಳಲ್ಲಿ ದೇಗುಲಗಳ ಕುರುಹು ಪತ್ತೆ ವಿಚಾರ ಸ್ವಾತಂತ್ರ್ಯ ಪೂರ್ವದಲ್ಲೇ ಇತಿಹಾಸದ ಪುಟಗಳಲ್ಲಿದೆ. ಆದರೆ ಅವು ಬಿಜೆಪಿ ಸರ್ಕಾರ ಬಂದ ಬಳಿಕ ಬಯಲಾಗುತ್ತಿದೆ. ಬಸವ ಕಲ್ಯಾಣದಲ್ಲಿ ಪೀರ್ ಪಾಷಾ ದರ್ಗಾದಲ್ಲಿ ಅನುಭವ ಮಂಟಪ ಕುರುಹು ಪತ್ತೆಯಾಗಿರುವುದು ನಿಜ, ಆ ಸ್ಥಳವನ್ನು ಕೆಲವರು ಹಿಂದೂಗಳಿಗೆ ಮಾರಾಟ ಮಾಡಲು ಸಿದ್ಧ ಎಂದು ಹೇಳಿರುವ ಬಗ್ಗೆ ಮಾಹಿತಿಯಿದೆ. ಈ ಬಗ್ಗೆ ಚರ್ಚಿಸಿ ಸಮಸ್ಯೆ ಪರಿಹರಿಸಬೇಕಾಗಿದ್ದು, ಸಾಮರಸ್ಯ ಕದಡುವ ಕೆಲಸವನ್ನು ಯಾರೂ ಮಾಡಬಾರದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಆರ್‌ಎಸ್‌ಎಸ್ ವಿರೋಧಿಗಳು ತುಂಡಾಸುರರು ಎಂದು ಬಣ್ಣಿಸಿದ ವಸಂತಕುಮಾರ್
ಕಾಂಗ್ರೆಸ್ ಟೀಕೆಗಳಿಗೆ ಉತ್ತರ ಕೊಡುತ್ತೇವೆ
ಬಿಜೆಪಿಯಲ್ಲಿ ಇರುವವರೆಲ್ಲ ಸಂಘದವರೆ, ಆರ್‌ಎಸ್‌ಎಸ್ ನೇರವಾಗಿ ಉತ್ತರ ಕೊಡದಿದ್ದರೇನು, ನಾವು ಕಾಂಗ್ರೆಸ್ ನಾಯಕರ ಟೀಕೆಗಳಿಗೆ ಉತ್ತರ ಕೊಡುತ್ತೇವೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ಆರ್‌ಎಸ್ಎಸ್ ಸಂಘಟನೆ ನಪುಂಸಕ ಎಂಬ ಕಾಂಗ್ರೆಸ್ ಟ್ವೀಟ್ ಬಗ್ಗೆ ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರು ಈ ರೀತಿ ಭಾಷೆ ಬಳಸೋದು ಸಮಂಜಸವಲ್ಲ, ಆರ್‌ಎಸ್‌ಎಸ್ ರಾಷ್ಟ್ರಭಕ್ತರ ಸಂಘಟನೆಯಾಗಿದ್ದು, ಅಲ್ಲಿ ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮದ ಚಿಂತನೆ ಇರುತ್ತದೆ. ನಪುಂಸಕರು ಎಂದು ಇವರಿಗೆ ಹೇಗೆ ಗೊತ್ತು. ನಮ್ಮ ನಾಯಕರೊಬ್ಬರು ಹೇಳಿದ್ದಾರೆ, ನಪುಂಸಕರಿಗೆ ನಪುಂಸಕತ್ವದ ಬಗ್ಗೆ ಗೊತ್ತಿರುತ್ತೆ ಎಂದು ಹೇಳಿರುವುದಾಗಿ ವ್ಯಂಗ್ಯಮಾಡಿದರು.
ಇನ್ನು ನಾಲ್ಕೈದು ವರ್ಷ ಕಳೆದರೆ ಆರ್‌ಎಸ್‌ಎಸ್ ಹುಟ್ಟಿ ನೂರು ವರ್ಷವಾಗುತ್ತದೆ. ಆರ್‌ಎಸ್ಎಸ್‌ನಿಂದ ದೇಶಕ್ಕೆ ಎಷ್ಟು ಅನುಕೂಲ ಆಗಿದೆ ಎಂಬುದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಯಾರೊ ಕಾಂಗ್ರೆಸ್‌ನ ಇಟಲಿಯನ್ನರನ್ನು ಮೆಚ್ಚಿಸೋದಕ್ಕೆ ಈ ರೀತಿ ಮಾತಾಡೋದು ಯೋಗ್ಯವಲ್ಲ. ಆರ್‌ಎಸ್ಎಸ್ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ ಎಂದರು.
ಮಸೀದಿ ಮಂದಿರ ವಿಚಾರ ಪ್ರತಿಕ್ರಿಯಿಸಿದ ಅವರು, ಔರಂಗಜೇಬ್, ಅಲ್ಲಾವುದ್ದೀನ್ ಖಿಲ್ಜಿ, ಮಹ್ಮದ್ ಘಜ್ನಿ ಎಲ್ಲರೂ ದೇವಸ್ಥಾನ ಹಾಳು ಮಾಡಿಯೇ ಮಸೀದಿ ಕಟ್ಟಿಸಿದ್ದಾರೆ. ಸ್ವತಂತ್ರವಾಗಿ ಕಟ್ಟಿದ್ದರೆ ಯಾವುದೇ ತಂಟೆ ತಕರಾರು ಇಲ್ಲ. ಮೊನ್ನೆ ಕಾಶಿಗೆ ಹೋಗಿದ್ದೆ. ಜ್ಞಾನವಾಪಿ ಸುತ್ತ ದೇವಸ್ಥಾನದ ಗೋಡೆಗಳೇ ಇವೆ. ಅದನ್ನು ತೆಗದು ಮಸೀದಿ ಮಾಡಿದ್ದಾರೆ. ವಿವಾದ ಇತ್ಯರ್ಥವಾಗಲು ಮುಸ್ಲಿಮರು ಸಹಕರಿಸಬೇಕು ಎಂದು ಮನವಿ ಮಾಡಿದರು. ಎಲ್ಲಿ ಮಂದಿರ ಕೆಡವಿ ಮಸೀದಿಗಳು ನಿರ್ಮಿಸಿದ್ದಾರೋ ಅಲ್ಲಿ ದೇಗುಲಗಳು ಜೀರ್ಣೋದ್ಧಾರವಾಗಬೇಕು ಎಂದರು ಚರಂತಿಮಠ
ಇದನ್ನೂ ಓದಿ | ಪಠ್ಯಪುಸ್ತಕ ವಿಚಾರದಲ್ಲಿ ಸಿದ್ದರಾಮಯ್ಯ ಮತಬ್ಯಾಂಕ್ ರಾಜಕೀಯ: ಎಂ.ಜಿ.ಮಹೇಶ್