ಕಾರವಾರ: ರಾಜ್ಯದ ಕರಾವಳಿಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಹೊರತುಪಡಿಸಿ ಲೈಟ್ ಫಿಶಿಂಗ್‌ನಂತಹ (Light fishing ) ಅವೈಜ್ಞಾನಿಕ ಮೀನುಗಾರಿಕೆ ಮೇಲೆ ನಿಷೇಧ ಹೇರಲಾಗಿದೆ. ಆದರೂ ಕೆಲ ಬೋಟುಗಳ ಮೀನುಗಾರರು ಕದ್ದುಮುಚ್ಚಿ ಇಂಥ ಮೀನುಗಾರಿಕೆ ನಡೆಸುತ್ತಿದ್ದರು. ಬೋಟಿನ ಮೂಲಕ ಲೈಟ್ ಫಿಶಿಂಗ್ ಮಾಡುತ್ತಿದ್ದ ಬೋಟಿನ ಬಳಿ ಅಂಕೋಲಾದ ಮೀನುಗಾರರೇ ಅಧಿಕಾರಿಗಳನ್ನು ಕರೆದೊಯ್ದು ರೆಡ್ ಹ್ಯಾಂಡ್ ಆಗಿ ಹಿಡಿದು ಕೊಟ್ಟಿದ್ದಾರೆ.
ತಾಲೂಕಿನ ಗಾಬಿತಕೇಣಿ ಭಾಗದ ಅರಬ್ಬಿ ಸಮುದ್ರದಲ್ಲಿ ಆರ್ಯಾ ದುರ್ಗಾ ಹೆಸರಿನ ಆಳಸಮುದ್ರ ಮೀನುಗಾರಿಕಾ ಬೋಟಿನಲ್ಲಿ ಜನರೇಟರ್ ಹಾಗೂ ದೊಡ್ಡ ದೊಡ್ಡ ಲೈಟ್‌ಗಳನ್ನು ಅಳವಡಿಸಿಕೊಂಡು ಬೆಳಕು ಮೀನುಗಾರಿಕೆ ನಡೆಸಲಾಗುತ್ತಿತ್ತು. ಇದು ಸ್ಥಳೀಯ ಮೀನುಗಾರರ ಕಣ್ಣಿಗೆ ಬಿದ್ದಿದ್ದು, ಮರುದಿನ ಬೆಳಗ್ಗೆ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಹಾಗೂ ಕರಾವಳಿ ಕಾವಲು ಪಡೆ ಪೊಲೀಸರನ್ನು ಬೋಟು ಇದ್ದ ಸ್ಥಳಕ್ಕೆ ಮೀನುಗಾರರೇ ಕರೆದೊಯ್ದಿದ್ದಾರೆ. ಅಲ್ಲದೇ ಲೈಟ್ ಫಿಶಿಂಗ್ ಮಾಡುತ್ತಿದ್ದ ಬೋಟಿನಲ್ಲಿದ್ದ ಮೂವರು ಕಾರ್ಮಿಕರನ್ನು ಹಿಡಿದುಕೊಟ್ಟಿದ್ದಾರೆ.
ಇಂಥ ಮೀನುಗಾರಿಕೆಯನ್ನು ಸರ್ಕಾರ ನಿಷೇಧ ಮಾಡಿದ್ದರೂ ಕೆಲವರು ಕದ್ದುಮುಚ್ಚಿ ಈ ಅವೈಜ್ಞಾನಿಕ ಪದ್ಧತಿಯಲ್ಲಿ ಮೀನುಗಾರಿಕೆ ನಡೆಸುತ್ತಿರುವುದು ಇತರೆ ಸಾಂಪ್ರದಾಯಿಕ ಮೀನುಗಾರರಿಗೆ ನಷ್ಟ ಉಂಟು ಮಾಡುತ್ತಿದೆ. ಜೊತೆಗೆ ಬೊಂಡಾಸ್(ಸ್ಕ್ವಿಡ್ ಮೀನು)ಗಳನ್ನು ಹಿಡಿಯಲು ಮರಳು, ಕಸ ತುಂಬಿದ ಚೀಲಗಳನ್ನು ಸಮುದ್ರಕ್ಕೆ ಇಳಿಸಿ ಮೀನುಗಾರಿಕೆ ಮಾಡಲಾಗುತ್ತದೆ. ಇದರಿಂದ ಕಸ ಸಮುದ್ರತಳವನ್ನು ಸೇರುತ್ತಿದ್ದು, ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ಮೀನುಗಾರರ ಬಲೆಗೆ ಇದೇ ಕಸ ಬೀಳುತ್ತಿದೆ. ಈ ರೀತಿ ಅವೈಜ್ಞಾನಿಕ ಮೀನುಗಾರಿಕೆ ನಡೆಸುವವರು ಕಂಡುಬಂದ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಅಲ್ಪ ಪ್ರಮಾಣದ ದಂಡ ವಿಧಿಸಿ ಕೈಬಿಡುತ್ತಿದ್ದಾರೆ. ಪರಿಣಾಮವಾಗಿ ಇಂತಹ ಮೀನುಗಾರಿಕೆ ಇನ್ನೂ ಜೀವಂತವಾಗಿದೆ ಎಂದು ಟ್ರಾಲರ್ ಬೋಟು ಮಾಲೀಕರಾದ ಪ್ರಶಾಂತ ಹರಿಕಂತ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಗೋವಾ, ಉಡುಪಿ, ಮಂಗಳೂರು ಭಾಗದಿಂದ ಬರುವ ಮೀನುಗಾರರು ಹಾಗೂ ಕೆಲ ಸ್ಥಳೀಯ ಮೀನುಗಾರರು ಆಳ ಸಮುದ್ರದಲ್ಲಿ ಲೈಟ್ ಫಿಶಿಂಗ್ ನಡೆಸುತ್ತಾರೆ. ರಾತ್ರಿ ವೇಳೆ ಬೋಟಿನಲ್ಲಿ ಅಳವಡಿಸಿರುವ ಜನರೇಟರ್ ಮೂಲಕ ಪ್ರಖರವಾದ ಬೆಳಕಿನ ಬಲ್ಬ್‌ಗಳನ್ನು ಸಮುದ್ರದತ್ತ ಉರಿಸಿದಾಗ ಅದರ ಬೆಳಕಿಗೆ ಆಕರ್ಷಿತವಾಗಿ ಮೀನುಗಳು ಬರುತ್ತವೆ. ಇಂತಹ ಸಂದರ್ಭದಲ್ಲಿ ಬಲೆ ಹಾಕಿ ಮೀನುಗಳನ್ನು ಹಿಡಿಯಲಾಗುತ್ತದೆ. ಆದರೆ ಇಂತಹ ಮೀನುಗಾರಿಕೆಯಿಂದ ಸಣ್ಣ ಸಣ್ಣ ಮೀನು ಮರಿಗಳೂ ಬಲೆಗೆ ಬಿದ್ದು ಸಾವನ್ನಪ್ಪುವುದರಿಂದ ಮೀನು ಸಂತತಿಯ ಮೇಲೆ ಭಾರೀ ಹೊಡೆತ ಬೀಳುತ್ತದೆ. ಪರಿಣಾಮವಾಗಿ ಮತ್ಸ್ಯಕ್ಷಾಮದಂತಹ ಪರಿಸ್ಥಿತಿ ಎದುರಾಗುವ ಕಾರಣಕ್ಕೆ ಇಂತಹ ಮೀನುಗಾರಿಕೆಯನ್ನು ದೇಶದಲ್ಲೇ ನಿಷೇಧ ಮಾಡಲಾಗಿದೆ.
ಇದನ್ನೂ ಓದಿ | Vajra bus | ಬಿಎಂಟಿಸಿ ವಜ್ರ ಮತ್ತಷ್ಟು ದುಬಾರಿ; ಪರಿಷ್ಕೃತ ದರ ಜನವರಿ 1ರಿಂದ ಜಾರಿ
ಆದರೂ ಕೆಲ ಮೀನುಗಾರರು ಹೆಚ್ಚಿನ ಲಾಭದ ಆಸೆಗೆ ಇಂತಹ ಅವೈಜ್ಞಾನಿಕ ಕ್ರಮಗಳನ್ನು ಅನುಸರಿಸಿ ಮೀನುಗಾರಿಕೆ ನಡೆಸುತ್ತಿದ್ದು, ಇಂತಹವರ ಮೇಲೆ ನಿಗಾ ಇರಿಸಬೇಕಾದ ಕೋಸ್ಟ್‌ಗಾರ್ಡ್, ಕರಾವಳಿ ಕಾವಲು ಪಡೆ ಹಾಗೂ ಮೀನುಗಾರಿಕಾ ಇಲಾಖೆಯ ನಿರ್ಲಕ್ಷ್ಯವಹಿಸುತ್ತಿವೆ. ಹೀಗಾಗಿ ಅವೈಜ್ಞಾನಿಕ ಮೀನುಗಾರಿಕೆಗೆ ಕಡಿವಾಣ ಹಾಕುವುದು ಸಾಧ್ಯವಾಗುತ್ತಿಲ್ಲ. ಆದರೆ ಈ ರೀತಿಯ ಮೀನುಗಾರಿಕೆಯಿಂದ ಸಾಂಪ್ರದಾಯಿಕ ಮೀನುಗಾರರು ಮೀನು ಸಿಗದೇ ಸಂಕಷ್ಟ ಎದುರಿಸಬೇಕಾಗಿದೆ. ಸಣ್ಣ ಬೋಟುಗಳ ಮೀನುಗಾರರು 12 ನಾಟಿಕಲ್ ಮೈಲು ವ್ಯಾಪ್ತಿಯೊಳಗೆ ಮಾತ್ರ ಮೀನುಗಾರಿಕೆ ನಡೆಸುತ್ತಾರೆ. ಲೈಟ್ ಫಿಶಿಂಗ್ ನಿಂದಾಗಿ ಮೀನುಗಳು ಚದುರಿ ಹೋಗುವುದರಿಂದ ಸಾಂಪ್ರದಾಯಿಕ ಮೀನುಗಾರರು ಮೀನು ಸಿಗದೇ ನಷ್ಟ ಅನುಭವಿಸಬೇಕಾಗಿದೆ. ಇದು ಹೀಗೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಮೀನುಗಾರಿಕೆ ನಡೆಸುವುದನ್ನೇ ಕೈಬಿಡಬೇಕಾದ ಪರಿಸ್ಥಿತಿ ಎದುರಾಗಲಿದೆ ಎನ್ನುತ್ತಾರೆ ಸಾಂಪ್ರದಾಯಿಕ ಮೀನುಗಾರರಾದ ಮೋಹನ್.
ಇದನ್ನೂ ಓದಿ | Rishabh Pant | ನಿಧಾನವಾಗಿ ಕಾರು ಓಡಿಸು; ಪಂತ್ಗೆ ಧವನ್ ಸಲಹೆ ಕೊಟ್ಟ ವಿಡಿಯೊ ಇದೀಗ ಮುನ್ನೆಲೆಗೆ