ಚಾಮರಾಜನಗರ: ಚಾಮರಾಜ ನಗರ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಜನರ ಬದುಕನ್ನೇ ಹೈರಾಣಾಗಿಸಿದೆ. ಸುವರ್ಣಾವತಿ ನದಿ ಉಕ್ಕಿ ಹರಿದು ಎಲ್ಲೆಡೆ ಪ್ರವಾಹವೇ ಸೃಷ್ಟಿಯಾಗಿದೆ. ಈ ನಡುವೆ ಸಿಡಿಲು ಬಡಿದು ರೈತರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಯಳಂದೂರು ತಾಲೂಕಿನ ಕೆಸ್ತೂರಿನಲ್ಲಿ ರೇವಣ್ಣ ಎಂಬ ರೈತರೊಬ್ಬರು ಜಮೀನಿನಲ್ಲಿ ಭತ್ತ ನಾಟಿ ಮಾಡುತ್ತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಅವರು ಮಳೆ ಇಲ್ಲದ ಹೊತ್ತಿನಲ್ಲಿ ಜಮೀನಿನಲ್ಲಿ ಭತ್ತ ನಾಟಿ ಮಾಡಲು ಹೋಗಿದ್ದರು. ಆಗ ಸಿಡಿಲು ಬಡಿದಿದೆ.
ಬಳೇಪೇಟೆ ಪೂರ್ಣ ಜಲಾವೃತ
ಚಾಮರಾಜನಗರದ ಅವಳಿ ಜಲಾಶಯದಿಂದ ೧೪೦೦೦ ಕ್ಯೂಸೆಕ್ ನೀರು ಬಿಟ್ಟ ಹಿನ್ನೆಲೆಯಲ್ಲಿ ಭಾರಿ ಅವಾಂತರವಾಗಿದ್ದು, ಯಳಂದೂರಿನ ಬಳೇಪೇಟೆಯ ಸಾವಿರಾರು ಮನೆಗಳು ಜಲಾವೃತವಾಗಿವೆ. ಸುವರ್ಣಾವತಿ, ಚಿಕ್ಕಹೊಳೆ ಜಿಲ್ಲೆಯ ಅವಳಿ ಜಲಾಶಯಗಳಾಗಿದ್ದು, ಇಲ್ಲಿಂದ ಬಿಟ್ಟ ನೀರಿನಿಂದಾಗಿ ಯಳಂದೂರು ಸುತ್ತಮುತ್ತಲ ನೂರಾರು ಎಕರೆ ಜಮೀನು ಜಲಾವೃತವಾಗಿವೆ.
ನೀರು ತುಂಬಿದ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಪರದಾಡುತ್ತಿದ್ದಾರೆ. ಸ್ಥಳೀಯ ಯುವಕರು ಅವರ ಬೆಂಬಲಕ್ಕೆ ನಿಂತಿದ್ದಾರೆ. ಮಳೆಯಿಂದಾಗಿ ಅಗರ-ಮಾಂಬಳ್ಳಿ ಪೊಲೀಸ್ ಠಾಣೆ ವಾರದಲ್ಲಿ ಎರಡನೇ ಬಾರಿ ಮುಳುಗಿದೆ. ಕೊಳ್ಳೇಗಾಲ-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ಕೂಡಾ ಬಂದ್ ಆಗಿದೆ.
Rain News | ಬಾಗಲಕೋಟೆಯಲ್ಲಿ ಗುಡುಗು ಸಹಿತ ಭಾರಿ ಮಳೆ, ಸಿಡಿಲು ಬಡಿದು ರೈತ ಸಾವು