ಕೊಪ್ಪಳ: ಕೊಪ್ಪಳದ ಜಿಲ್ಲಾಡಳಿತ ಭವನದ ಎದುರಿಗೆ ಇಂದು ತಂಡೋಪತಂಡವಾಗಿ ಬಂದಿದ್ದರು. ಅಲ್ಲಿದ್ದ ಸಿಬ್ಬಂದಿ ಗ್ರಾಮದಲ್ಲಿ ನೀರಿನ ಸಮಸ್ಯೆನೋ, ರಸ್ತೆ ಸಮಸ್ಯೆ ಅಥವಾ ಬೇರೆನೋ ಸಮಸ್ಯೆ ಇರಬಹುದು ಎಂದು ಅಂದಾಜಿಸಿದ್ದರು. ಆದರೆ ಸಿಬ್ಬಂದಿ ಹತ್ತಿರಕ್ಕೆ ಹೋದಾಗಲೇ ತಿಳಿದಿದ್ದು, ಕುಡುಕರು ಒಗ್ಗಟಾಗಿ ಸೇರಿ ಬಾರ್ ಬೇಕೆಂದು (Liquor shop) ಬೇಡಿಕೆ ಇಟ್ಟಿದ್ದಾರೆ ಎಂದು.
ಸಾಮಾನ್ಯವಾಗಿ ಮೂಲಭೂತ ಸೌಲಭ್ಯಗಳ ಕಲ್ಪಿಸಿ ಎಂದೋ, ಸಮಸ್ಯೆಗಳನ್ನು ಪರಿಹರಿಸಿ ಎಂದೋ ಪ್ರತಿಭಟನೆ, ಮನವಿ ಸಲ್ಲಿಸುವುದನ್ನು ನಾವು ನೋಡಿದ್ದೇವೆ. ಆದರೆ ತಮ್ಮೂರಲ್ಲಿ ಬಾರ್ ಆರಂಭಿಸುವಂತೆ ಜನರು ಜಿಲ್ಲಾಡಳಿತದ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ.
ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದ ಮದ್ಯಪ್ರಿಯರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು. ಬಾರ್ ಓಪನ್ ಮಾಡಿ ಎಂದು ಪಟ್ಟು ಹಿಡಿದರು. ಕುದರಿಮೋತಿ ಗ್ರಾಮದಲ್ಲಿ ಶ್ರೀ ಲಿಕ್ಕರ್ಸ್ ಎನ್ನುವ ಮದ್ಯದ ಅಂಗಡಿ ಮಂಜೂರಾಗಿದೆ. ಆದರೆ ಗ್ರಾಮದ ಕೆಲವರು ಇದನ್ನು ಆರಂಭಿಸಲು ಬಿಡುತ್ತಿಲ್ಲ. ಇದರಿಂದಾಗಿ ಗ್ರಾಮದ ಮದ್ಯಪ್ರಿಯರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಗ್ರಾಮದಲ್ಲಿ ಬಾರ್ ಆರಂಭಿಸಬೇಕು.
ನಾವು ಬೇರೆ ಕಡೆಯಿಂದ ದುಬಾರಿ ಹಣಕ್ಕೆ ಮದ್ಯ ಖರೀದಿ ಮಾಡಬೇಕು. ಮದ್ಯ ಖರೀದಿಗೆ ಬೇರೆ ಕಡೆ ಹೋಗಬೇಕು. ಇದರಿಂದ ಹಣ, ಸಮಯ ಎರಡೂ ವ್ಯರ್ಥವಾಗುತ್ತಿದೆ. ಈ ಹಿನ್ನಲೆಯಲ್ಲಿ ಗ್ರಾಮದಲ್ಲಿಯೇ ಮದ್ಯದ ಅಂಗಡಿ ಆರಂಭಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಬಾರ್ ಬೇಕೇ ಬೇಕು ಎಂದು ಮದ್ಯಪ್ರಿಯರು ಘೋಷಣೆ ಕೂಗಿದರು. ಅಲ್ಲದೆ ಬಾರ್ ಆರಂಭಿಸಬೇಕು ಎಂದು ಒತ್ತಾಯಿಸಿ ಕೊಪ್ಪಳ ಉಪವಿಭಾಗಾಧಿಕಾರಿ ಮದ್ಯಪ್ರಿಯರು ಮನವಿ ಸಲ್ಲಿಸಿದರು.
ತಮ್ಮೂರಿಗೆ ಮದ್ಯದಂಗಡಿ ಬೇಕು. ಮಂಜೂರಾಗಿರುವ ಮದ್ಯದಂಗಡಿಯನ್ನು ಓಪನ್ ಮಾಡಿಸಬೇಕು ಎಂದು ಕುದರಿಮೋತಿ ಗ್ರಾಮದ ಮದ್ಯಪ್ರಿಯರು ಸಲ್ಲಿಸಿರುವ ಮನವಿಯನ್ನು ಖುದ್ದು ಕೊಪ್ಪಳ ಉಪವಿಭಾಗಾಧಿಕಾರಿ ಸ್ವೀಕರಿಸಿದರು. ಈ ಬಗ್ಗೆ ಅಬಕಾರಿ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳುವುದಾಗಿ ಕುದರಿಮೋತಿ ಗ್ರಾಮದ ಮದ್ಯಪ್ರಿಯರಿಗೆ ಭರವಸೆ ನೀಡಿ ಕಳಿಸಿದ್ದಾರೆ.
ಗ್ರಾಮದಲ್ಲಿ ಎಲ್ಲೆಂದರಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಆದರೆ ಸಕ್ರಮ ಮದ್ಯ ಮಾರಾಟಕ್ಕೆ ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ