ಬೆಂಗಳೂರು: ರಾಜ್ಯದಲ್ಲಿ ಮಳೆ ಅಸ್ಥಿರತೆ ಮುಂದುವರಿದಿದೆ. ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಹವಾಮಾನ ಇರಲಿದ್ದರೂ ಸಂಜೆ ವೇಳೆಗೆ ಹಲವು ಕಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (Weather Report) ಮುನ್ಸೂಚನೆ ನೀಡಿದೆ. ಇನ್ನೂ 4 ದಿನಗಳ ಕಾಲ ಭಾರಿ ಮಳೆ (Karnataka Rain) ಆಗಲಿದ್ದು, ದಕ್ಷಿಣ ಒಳನಾಡಿನಲ್ಲಿ ತುಸು ಹೆಚ್ಚಿಗೆ ಇರಲಿದೆ ಎಂದು ಹೇಳಲಾಗಿದೆ.
ದಕ್ಷಿಣ ಒಳನಾಡಿನಲ್ಲಿ ಗುರುವಾರದಿಂದ (ಜೂನ್ 1) ಜೂನ್ 4ರ ವರೆಗೆ ಬಹುತೇಕ ಕಡೆ ಜೋರು ಮಳೆಯಾಗುವ ಸಾಧ್ಯತೆ ಇದೆ. ಆದರೆ, ಜೂನ್ 2 ಮತ್ತು 3ರಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಭಾಗದ ಅಲ್ಲಲ್ಲಿ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ. ಆದರೆ, ಉತ್ತರ ಒಳನಾಡಿನಲ್ಲಿ ಕೆಲ ಕಡೆ ಮಾತ್ರ ಮಳೆ ಸುರಿಯಲಿದೆ. ಇನ್ನು ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತ ಗುರುವಾರ ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞ ಪ್ರಸಾದ್ ಮಾಹಿತಿ ನೀಡಿದ್ದಾರೆ.
ವಿದರ್ಭದಿಂದ ದಕ್ಷಿಣ ತಮಿಳುನಾಡಿನವರೆಗೆ ಟ್ರಫ್ ಮುಂದುವರಿಕೆಯಾಗುತ್ತಿದ್ದು, ಇದರಿಂದ ಮಳೆ ಪ್ರಮಾಣ ಇನ್ನೂ ಹೆಚ್ಚಳವಾಗಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಬಿಟ್ಟು ಹೊರಟ ಲವರ್ ಮೇಲೆ ಅತ್ಯಾಚಾರ ಮಾಡಿ, ಖಾಸಗಿ ಅಂಗಕ್ಕೆ ಖಾರದಪುಡಿ ಚೆಲ್ಲಿದ ವಿವಾಹಿತ!
ಹೆಚ್ಚಲಿದೆ ಗಾಳಿ ವೇಗ
ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಗಾಳಿಯು ಗಂಟೆಗೆ 40 ರಿಂದ 50 ಕಿ.ಮೀ. ವೇಗವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಈ ಭಾಗದ ಒಂದೆರಡು ಕಡೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಬಿರುಗಾಳಿ ಸಹಿತ ಗುಡುಗು, ಮಿಂಚಿನ ಸಾಧ್ಯತೆ ಇದ್ದು, ಎಂದು ಹವಾಮಾನ ಇಲಾಖೆ ತಿಳಿಸಿದೆ.
ಒಳನಾಡು, ಕರಾವಳಿಗಳಲ್ಲಿ ಹೆಚ್ಚಲಿದೆ ಬಿಸಿಲು
ಗರಿಷ್ಠ ಉಷ್ಣಾಂಶವು ಕರಾವಳಿಯ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 3 ಡಿಗ್ರಿ ಸೆಲ್ಸಿಯಸ್‌ವರೆಗೂ ಮತ್ತು ಒಳನಾಡಿನ ಒಂದೆರಡು ಕಡೆಗಳಲ್ಲಿ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ.
ಬೆಂಗಳೂರಿನ ವಾತಾವರಣ ಹೀಗಿದೆ
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರದವರೆಗೆ ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಸಂಜೆ ಅಥವಾ ರಾತ್ರಿಯ ವೇಳೆಗೆ ಒಂದೆರಡು ಸಲ ಭಾರಿ ಬಿರುಗಾಳಿ ಸಹಿತ ಗುಡುಗಿನೊಂದಿಗೆ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 32 ಮತ್ತು ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಸೊರಬದಲ್ಲಿ ಭಾರಿ ಮಳೆ
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಬುಧವಾರ ರಾತ್ರಿ ಗಾಳಿ ಸಹಿತ ಜೋರು ಮಳೆಯಾಗಿದ್ದು, ಬಿರುಸಿನ ಗಾಳಿಗೆ ಹಲವು ಕಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಇದರ ಪರಿಣಾಮ ವಾಹನ ಸಂಚಾರಕ್ಕೆ ತೊಡಕಾಗಿತ್ತು. ತಾಲೂಕಿನ ಚಂದ್ರಗುತ್ತಿ ಬಳಿಯ ಅಂಕರವಳ್ಳಿ ಗ್ರಾಮದಲ್ಲಿ ಮನೆಯೊಂದರ ಮೇಲೆ ಮರ ಉರುಳಿ ಬಿದ್ದಿದೆ. ಪರಿಣಾಮ ಮನೆಯ ಹೆಂಚು ತಗಡುಗಳಿಗೆ ಹಾನಿಯಾಗಿವೆ. ಜತೆಗೆ ಕಾರ್ ಶೆಡ್‌ನಲ್ಲಿದ್ದ ಕಾರಿಗೂ ಹಾನಿಯಾಗಿದೆ. ಮತ್ತೊಂದಡೆ ಅಂಗಡಿ ಮಳಿಗೆ ಮೇಲೂ ಮರ ಉರುಳಿದ್ದು, ಅಂಗಡಿಯಲ್ಲಿದ್ದ ಸಾವಿರಾರು ರೂ. ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ.
ಇನ್ನು ಅಂಕರವಳ್ಳಿ ಚಂದ್ರಗುತ್ತಿ ಮಾರ್ಗದಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿದ ಪರಿಣಾಮ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಸ್ಥಳೀಯರು ಮರವನ್ನು ಜೆಸಿಬಿ ಮೂಲಕ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇನ್ನು ಕಲ್ಕುಣಿ ಕ್ರಾಸ್ ಬಳಿ ಮರವೊಂದು ಉರುಳಿ ಬಿದ್ದಿದೆ. ಬಿರುಸಿನ ಗಾಳಿಗೆ ಜೋಳದಗುಡ್ಡೆ ಸಮೀಪದ ಗೊಮ್ಮಟೇಶ್ವರ ದೇವಸ್ಥಾನದ ಛಾವಣಿಗೆ ಹಾನಿಯಾಗಿದೆ. ಹೋಬಳಿಯ ಸುತ್ತಮುತ್ತ ಹಲವು ಕಡೆ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ವಿದ್ಯುತ್ ಪೂರೈಕೆಯಲ್ಲಿಯೂ ವ್ಯತ್ಯಯ ಉಂಟಾಯಿತು.
ಒಟ್ಟಾರೆ, ಹೋಬಳಿಯ ಸುತ್ತಮುತ್ತ ಉತ್ತಮ ಮಳೆಯಾಗಿದೆ.
ಶಿವಮೊಗ್ಗದಲ್ಲಿ ಅವಾಂತರ
ಶಿವಮೊಗ್ಗದಲ್ಲಿ ಬುಧವಾರ ರಾತ್ರಿ ಸುರಿದ ಗಾಳಿ ಮಳೆಗೆ ಅವಾಂತರವೇ ಸೃಷ್ಟಿಯಾಗಿದೆ. ಅಂಗನವಾಡಿ ಟೆಂಟ್‌ಗಳು ಗಾಳಿ ಮಳೆಗೆ ಬಿದ್ದು ಹೋಗಿವೆ. ಶಿವಮೊಗ್ಗದ ಶ್ರೀರಾಂಪುರ ಹಕ್ಕಿಪಿಕ್ಕಿ ಕ್ಯಾಂಪಿನಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: LPG Price Cut: 19ಕೆಜಿ ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆ; ಈಗೆಷ್ಟಿದೆ ದರ?
ಹುಬ್ಬಳ್ಳಿಯಲ್ಲಿ ಮುಂಗಾರು ಮಳೆಯ ಸಿಂಚನ
ಹುಬ್ಬಳ್ಳಿಯಲ್ಲಿ ಗುರುವಾರ ಬೆಳಗ್ಗೆಯೇ ಮಳೆಯಾಗಿದೆ. ಮೋಡ ಕವಿದ ವಾತಾವರಣದೊಂದಿಗೆ ಮಳೆ ಸುರಿದಿದ್ದು, ಶೀತಗಾಳಿ, ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಳಗ್ಗೆಯಿಂದ ಎಡೆಬಿಡದೆ ವರ್ಷಧಾರೆಯಾಗಿದೆ. ಮಳೆಯಲ್ಲಿ ಕೆಲಸಕ್ಕೆ ತೆರಳಲು ವಾಹನ ಸವಾರರು, ಸಾರ್ವಜನಿಕರ ಪರದಾಡಿದರು.