ಶಿರಸಿ: ಜೀವನದಲ್ಲಿ ಆಸೆ ಇರಬೇಕು. ಆದರೆ ದುರಾಸೆ ಇರಬಾರದು. ಗುರಿ ಇಟ್ಟುಕೊಂಡು ಅರ್ಥಪೂರ್ಣವಾದ ಜೀವನವನ್ನು ನಡೆಸಬೇಕು ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹೇಳಿದರು.
ನಗರದ ನೆಮ್ಮದಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ʼರಂಗಧಾಮʼ ಊರಿಗೆ ಹಸ್ತಾಂತರ (Sirsi Rangadhama) ಹಾಗೂ ʼಧನ್ಯವಾದ ದಿನʼ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಯಾವುದೇ ಕೆಲಸ ಮಾಡುವಾಗಲೂ ಒಂದು ನಿರ್ದಿಷ್ಟ ಗುರಿ ಇಟ್ಟುಕೊಳ್ಳಬೇಕು. ಕೊನೆಯುಸಿರಿರುವವರೆಗೂ ಕಾಯಕದಲ್ಲಿ ತೊಡಗಿಕೊಂಡಿರಬೇಕು. ಜನರ ಸೇವೆಯನ್ನು ಮಾಡುತ್ತೇನೆ ಎಂಬ ಛಲವಿರಬೇಕು. ಕಡಿಮೆ ಆಹಾರ, ಒಳ್ಳೆಯ ಕಾರ್ಯಗಳನ್ನು ಮಾಡುವುದರಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು.
ನಾನು ಸಂಸದನಾಗಿದ್ದ ಸಮಯದಲ್ಲಿ ಅನೇಕ ಮುಕ್ತಿಧಾಮಗಳಿಗೆ ಅನುದಾನವನ್ನು ನೀಡುವ ಸೌಭಾಗ್ಯ ಸಿಕ್ಕಿತ್ತು. ನಮ್ಮ ವಿಆರ್‌ಎಲ್ ಕಂಪನಿ ವತಿಯಿಂದ ವಿದ್ಯಾನಗರ ರುದ್ರ ಭೂಮಿ ಅಭಿವೃದ್ಧಿ ಸಮಿತಿಗೆ ಹಣ ಬಿಡುಗಡೆ ಅವಕಾಶ ಸಿಕ್ಕಿದೆ. ಇಂತಹ ಪುಣ್ಯ ಕೆಲಸಕ್ಕೆ ಅವಕಾಶ ಸಿಕ್ಕಿರುವುದಕ್ಕೆ ನಮ್ಮ ಸಂಸ್ಥೆಯ ಪರವಾಗಿ ಧನ್ಯವಾದಗಳು ಎಂದು ಹೇಳಿದರು.
ಇದನ್ನೂ ಓದಿ | ಧವಳ ಧಾರಿಣಿ ಅಂಕಣ: ಮಾಗಿ ಮುಸುಕಿದ ಇಳೆಯ ಬೆಳಗುವ ನೀರಾಜನ: ದೀಪಾವಳಿ
ಈ ಪ್ರದೇಶದ ಹೆಸರು ಬಹಳ ಸುಂದರವಾಗಿದೆ ʼನೆಮ್ಮದಿʼ ಎಂದು. ಹುಟ್ಟು ಆಕಸ್ಮಿಕ, ಸಾವು ಖಚಿತ. ನಾವು ಬದುಕಿದ್ದಾಗ ದಿನವೂ ಸಾವನ್ನು ಕಾಣುತ್ತಿದ್ದೇವೆ. ಕಾಶಿನಾಥ್ ಮೂಡಿಯವರು ಹಾಗೂ ವಿ.ಪಿ. ಹೆಗಡೆ ಅವರು ಒಂದು ಗುರಿಯನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಅವರು ನಮಗೆ ಆದರ್ಶ ವ್ಯಕ್ತಿಗಳು. ಅವರು ಜೀವನವನ್ನೇ ಸೇವೆಗೆ ಮುಡಿಪಾಗಿಟ್ಟಿರುವುದು ಅವರ ನೆಮ್ಮದಿಗೆ ಕಾರಣವಾಗಿದೆ. ನೆಮ್ಮದಿಯ ಜೀವನವನ್ನು ಅವರು ಸಾಧಿಸಿರುವುದರಿಂದಲೇ ಕಾಶಿನಾಥ ಮೂಡಿ ಅವರು 94ನೇ ವರ್ಷದಲ್ಲೂ ಇಷ್ಟು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.
ಶಿರಸಿ, ಯಲ್ಲಾಪುರ, ಸಾಗರದ ಭಾಗದ ಜನರು ಬಹಳ ಪ್ರಾಮಾಣಿಕ, ಬುದ್ಧಿವಂತ ಹಾಗೂ ಪರಿಶ್ರಮಿಗಳು. ಆದರೆ ಈಗೀಗ ಜನರು ಇಲ್ಲಿನ ಆಸ್ತಿಗಳನ್ನು ಮಾರಿ, ಹೊರ ದೇಶಗಳಿಗೆ ಹೋಗುತ್ತಿರುವುದು ನೋಡಿದರೆ ಬೇಸರವಾಗುತ್ತದೆ. ಮುಂದಿನ ಭವಿಷ್ಯ ಕತ್ತಲಿನಲ್ಲಿದೆ. ನಮ್ಮ ದೇಶಕ್ಕಾಗಿ ನಾವು ದುಡಿಯಬೇಕು, ನಮ್ಮ ಶ್ರಮ, ನಮ್ಮ ಬುದ್ಧಿಯನ್ನು ಬೇರೆ ದೇಶಕ್ಕೆ ಸಮರ್ಪಣೆ ಮಾಡಬಾರದು. ಮುಂದಿನ ಪೀಳಿಗೆ ಉಜ್ವಲವಾಗಲು ನಮ್ಮ ಶ್ರಮ ದೇಶಕ್ಕೆ ಅವಶ್ಯಕ ಎಂದು ವಿಜಯ ಸಂಕೇಶ್ವರ ಸಲಹೆ ನೀಡಿದರು.
ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಮತ್ತು ಸಿಇಒ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಡಾ. ವಿಜಯ ಸಂಕೇಶ್ವರ ಅವರು ನನ್ನ ಪಾಲಿಗೆ ಪ್ರಾತಃಸ್ಮರಣೀಯರು. ಒಳ್ಳೆಯ ಮನಸ್ಸುಗಳು ಬೆಂಬಲವಾಗಿ ನಿಂತರೆ ಯಶಸ್ಸು ಸಿಗುತ್ತದೆ ಎಂಬುದಕ್ಕೆ ಶಿರಸಿಯ ವಿದ್ಯಾ ನಗರ ರುದ್ರ ಭೂಮಿ ಟ್ರಸ್ಟ್ ಉದಾಹರಣೆಯಾಗಿದೆ. ವೈಶಾಲಿ ಅವರ ಸರ್ವಸ್ವವೇ ವಿದ್ಯಾ ನಗರ ರುದ್ರಭೂಮಿಯಾಗಿದೆ. ನನ್ನ ಇಡೀ ಜೀವನಕ್ಕೆ ದಿಕ್ಕು ದೆಸೆ ತೋರಿಸಿದ್ದು ಶಿರಸಿ. ಜನ್ಮ ಭೂಮಿ ಯಲ್ಲಾಪುರ ಆದರೆ, ಕರ್ಮ ಭೂಮಿ ಶಿರಸಿಯಾಗಿದೆ. ನನ್ನ ಬಾಲ್ಯ ಶಿಕ್ಷಣದಲ್ಲಿ ಸಾಕಷ್ಟು ಕಷ್ಟಗಳನ್ನ ನೋಡಿದ್ದೇನೆ. ಕಿರಾಣಿ ಅಂಗಡಿಯಲ್ಲಿ ಪೊಟ್ಟಣ ಕಟ್ಟಿ ವಿದ್ಯಾಭ್ಯಾಸ ಮಾಡಿದ್ದೇನೆ. ನನ್ನ ಪ್ರೌಢ ಶಿಕ್ಷಣದ ಸಂದರ್ಭದಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಕಾರ್ಯನಿರ್ವಹಿಸಿದ್ದೆ. ಯಲ್ಲಾಪುರ ಬಿಟ್ಟು ಬಂದಿದ್ದು ಶಿರಸಿಗೆ. ಸಂಘಧಾಮದಿಂದ ರಂಗಧಾಮದವರೆಗೆ ಶಿರಸಿ ನನ್ನನ್ನು ಬೆಳೆಸಿದೆ. ಇದೀಗ ನಿರ್ಮಾಣಗೊಂಡ ರಂಗಧಾಮಕ್ಕೆ ಪ್ರತಿಯೊಬ್ಬರ ಶ್ರಮಧಾನವಿದೆ ಎಂದು ತಿಳಿಸಿದರು.
ವಿಜಯವಾಣಿ ಪತ್ರಿಕೆಯ ಯಶಸ್ಸಿನ ಮೊದಲ ಬೀಜ ಬಿತ್ತಿದ್ದು ಇದೇ ನೆಮ್ಮದಿ ಕುಟೀರದಲ್ಲಿ. ವಿಜಯ ಸಂಕೇಶ್ವರ ಅವರ ಹೊಸತನ, ಸತತ ಪರಿಶ್ರಮದ ಫಲವಾಗಿ ಕೇವಲ 24 ತಿಂಗಳಲ್ಲಿ ರಾಜ್ಯದ ನಂ.1 ಪತ್ರಿಕೆಯಾಗಿ ವಿಜಯವಾಣಿ ಪತ್ರಿಕೆ ಬೆಳೆಯಿತು. ನೆಮ್ಮದಿ ಕುಟೀರದ ವಿಷಯವಾಗಿ ವಿಜಯವಾಣಿ ಪತ್ರಿಕೆಯ ಮುಖಪುಟದಲ್ಲಿ ಒಂದು ಬರಹ ಪ್ರಕಟಿಸಲಾಗಿತ್ತು. ಅದರ ಫಲವಾಗಿ 60 ಲಕ್ಷ ರೂಪಾಯಿ ಅನುದಾನ ನೆಮ್ಮದಿ ಕುಟೀರಕ್ಕೆ ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ಬಿಡುಗಡೆ ಮಾಡಿದ್ದರು. ಆದರೆ, ಆ ಅನುದಾನವು ಕೈ ಸೇರಲು ಸಾಕಷ್ಟು ಶ್ರಮ ಪಡಬೇಕಾಯಿತು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಹಾಗೂ ವಿಸ್ತಾರ ನ್ಯೂಸ್ ನಿರ್ದೇಶಕ ಶ್ರೀನಿವಾಸ್ ಹೆಬ್ಬಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಹುಬ್ಬಳ್ಳಿ ಅವರು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರನ್ನು ಪರಿಚಯಿಸಿದರು. ಯಲ್ಲಾಪುರದ ಡಾ. ವಿಜಯ ಸಂಕೇಶ್ವರ ಮಿಡಿಯಾ ಸ್ಕೂಲ್‌ನ ಪ್ರಾಂಶುಪಾಲ ನಾಗರಾಜ ಇಳೆಗುಂಡಿ ಅವರು ಹರಿಪ್ರಕಾಶ ಕೋಣೆಮನೆಯವರನ್ನು ಪರಿಚಯಿಸಿದರು. ವಿದ್ಯಾನಗರ ರುದ್ರಭೂಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಾಶಿನಾಥ್ ಮೂಡಿ ಅವರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ವಿ. ಪಿ. ಹೆಗಡೆ ವೈಶಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದನ್ನೂ ಓದಿ | ವಿಸ್ತಾರ ಅಂಕಣ: ಸಮಾಜವಾಗಿ ಭಾರತ ಸೋಲುತ್ತಿರುವುದೇತಕ್ಕೆ?