ರಾಯಚೂರು: ಚುನಾವಣೆ ನೀತಿ ಸಂಹಿತೆ (Lok Sabha Election 2024) ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ರಾಯಚೂರು ತಾಲೂಕಿನ ಉಡಮಗಲ್ ಖಾನಾಪುರ ಶಾಲೆ ಸಹ ಶಿಕ್ಷಕ ಕೆ.ರಾಮು ಅಮಾನತುಗೊಂಡಿದ್ದಾರೆ. ಚುನಾವಣೆ ನೀತಿ ಸಂಹಿತೆ ಪ್ರಕಾರ ಸರ್ಕಾರಿ ನೌಕರರು, ರಾಜಕೀಯ ವ್ಯಕ್ತಿಗಳೊಂದಿಗೆ ಗುರುತಿಸಿಕೊಳ್ಳಬಾರದು. ಆದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಜತೆ ಕಾಣಿಸಿಕೊಂಡು ನಿಯಮ ಉಲ್ಲಂಘಿಸಿದ್ದರಿಂದ ಕೆ.ರಾಮು ಅವರನ್ನು ಅಮಾನತು ಮಾಡಲಾಗಿದೆ.
ಏಪ್ರಿಲ್ 7ರಂದು ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್‌ಸಿ ಕೆ.ಪಿ.ನಂಜುಂಡಿ ಅವರ ಮನೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿ ಪ್ರತ್ಯಕ್ಷವಾಗಿದ್ದ ಸಹ ಶಿಕ್ಷಕ ಕೆ.ರಾಮು ಅವರು, ಡಿ.ಕೆ.ಶಿವಕುಮಾರ್, ಕೆ.ಪಿ. ನಂಜುಂಡಿ ಸೇರಿ ವಿವಿಧ ರಾಜಕೀಯ ನಾಯಕರಿಗೆ ಉಪಹಾರ ಬಡಿಸಿದ್ದರು. ಶಿಕ್ಷಕ ಉಪಹಾರ ಬಡಿಸುವ ವಿಡಿಯೊ ಮತ್ತು ಫೋಟೊಗಳು ವೈರಲ್ ಆಗಿದ್ದವು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಇಒ ಕಾರಣ ಕೇಳಿ ನೋಟಿಸ್ ನೀಡಿದ್ದರು. ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿದ ಜಿಲ್ಲಾ ಚುನಾವಣಾ ಅಧಿಕಾರಿ ಎಲ್. ಚಂದ್ರಶೇಖರ್ ನಾಯಕ್ ಅವರು, ತನಿಖೆ ನಂತರ ಸಹ ಶಿಕ್ಷಕ ಕೆ ರಾಮು ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ | Neha Murder Case: ನೇಹಾ ಹತ್ಯೆ ಖಂಡಿಸಿದ ನಟರಾದ ದರ್ಶನ್, ರಿಷಬ್, ಶಿವಣ್ಣ
ವರದಿ ಪ್ರಸಾರ ಮಾಡಿದ್ದ ವಿಸ್ತಾರ
ಸಹ ಶಿಕ್ಷಕ ರಾಮು ಅವರು ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಬಗ್ಗೆ ವಿಸ್ತಾರ ನ್ಯೂಸ್ ವಿಶೇಷ ವರದಿ ಪ್ರಸಾರ ಮಾಡಿತ್ತು. ಇದಕ್ಕೆ ಜಿಲ್ಲಾ ಚುನಾವಣಾ ಅಧಿಕಾರಿ ಸ್ಪಂದಿಸಿ ಕ್ರಮ ಕೈಗೊಂಡಿದ್ದಾರೆ.
ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಸಹ ಶಿಕ್ಷಕ ರಾಮು ಅವರ ವಿರುದ್ಧ ಬಿಜೆಪಿಯ ವಸಂತಕುಮಾರ್ ಹಾಗೂ ಇತರರು ಚುನಾವಣಾಧಿಕಾರಿಗೆ ದೂರು ನೀಡಿದ್ದರು. ಎಂಎಲ್‌ಸಿ ಕೆ.ಪಿ. ನಂಜುಂಡಿ ಅವರ ನಿವಾಸಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭೇಟಿ ನೀಡಿದಾಗ ಅವರಿಗೆ ಶಿಕ್ಷಕ ರಾಮು ಅವರು ಊಟ ಬಡಿಸುತ್ತಿರುವ ಬಗ್ಗೆ ವಿಸ್ತಾರ ವಾಹಿನಿಯಲ್ಲಿ ವರದಿ ಪ್ರಸಾರವಾಗಿರುವುದನ್ನು ಉಲ್ಲೇಖಿಸಿ, ದೂರು ಸಲ್ಲಿಸಿದ್ದರು. ಹೀಗಾಗಿ ಅನುಮತಿ ಪಡೆಯದೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದ ಸಮಯದಲ್ಲಿ ಸಚಿವರ ಹಾಗೂ ರಾಜಕೀಯ ವ್ಯಕ್ತಿಗಳ ಜೊತೆಯಲ್ಲಿ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಕೆ.ರಾಮು ಅವರನ್ನು ಅಮಾನತು ಮಾಡಿ ಜಿಲ್ಲಾ ಚುನಾವಣಾ ಅಧಿಕಾರಿ ಆದೇಶ ಹೊರಡಿಸಿದ್ದಾರೆ.