ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯದ 28 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಈಗಾಗಲೇ ಘೋಷಿಸಿದೆ. ಆದರೆ, ಟಿಕೆಟ್ ಕೈ ತಪ್ಪಿರುವ ಪ್ರಬಲ ಆಕಾಂಕ್ಷಿಗಳು ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ರಾಜ್ಯ ಕಾಂಗ್ರೆಸ್‌ಗೆ ಒಳಪೆಟ್ಟಿನ ಆತಂಕ ಸೃಷ್ಟಿಯಾಗಿದೆ. ಕೋಲಾರ, ಬಾಗಲಕೋಟೆ, ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಒಳಗೊಳಗೆ ಭಿನ್ನಮತ ಸ್ಫೋಟಗೊಂಡಿದ್ದು, ನಾಯಕರ ಅಸಮಾಧಾನ ಶಮನಗೊಳಿಸುವುದು ಕಾಂಗ್ರೆಸ್ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ.
ಕೋಲಾರದಲ್ಲಿ ಹೊರಗಿನ ಅಭ್ಯರ್ಥಿಗೆ ಟಿಕೆಟ್; ಗೋ ಬ್ಯಾಕ್ ಅಭಿಯಾನ
ಕೋಲಾರದಲ್ಲಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಬಣಗಳ ನಡುವೆ ಟಿಕೆಟ್‌ಗಾಗಿ ಪೈಪೋಟಿ ನಡೆದಿದ್ದರಿಂದ ಹೊರಗಿನ ಅಭ್ಯರ್ಥಿಗೆ ಪಕ್ಷ ಮಣೆ ಹಾಕಿದೆ. ಕೆ.ಎಚ್.ಮುನಿಯಪ್ಪ ಕುಟುಂಬಸ್ಥರಿಗೆ ಟಿಕೆಟ್ ನೀಡಬಾರದು ಎಂದು ಜಿಲ್ಲೆಯ ಶಾಸಕರು ಬಹಿರಂಗವಾಗಿ ಅಸಮಾಧಾನ ಹೊರಹಾಕಿ, ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದರಿಂದ ಕೆ.ವಿ. ಗೌತಮ್ ಅವರನ್ನು ಕೋಲಾರ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ | Lok Sabha Election 2024: ಯಾರೂ ಗೆರೆ ದಾಟುವಂತಿಲ್ಲ: ಕೈ ಒಳಜಗಳಕ್ಕೆ ಡಿಕೆಶಿ ವಾರ್ನಿಂಗ್; ಮೋದಿ ಬಂದರೂ ಹೆದರಲ್ಲ!
ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ಕೊಡಬೇಕು ಎಂದು ಕೆ.ಎಚ್.ಮುನಿಯಪ್ಪ ಪಟ್ಟು ಹಿಡಿದಿದ್ದರು. ಆದರೆ, ಅವರಿಗೆ ಟಿಕೆಟ್ ನೀಡದಂತೆ ರಮೇಶ್ ಕುಮಾರ್ ಬಣ ಆಗ್ರಹಿಸಿತ್ತು. ಆದರೆ, ಎರಡು ಬಣ ಬಡಿದಾಡದ ನಡುವೆ ಬೆಂಗಳೂರು ಕೇಂದ್ರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ವಿ. ಗೌತಮ್, ಕೋಲಾರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಇದರಿಂದ ಎರಡೂ ಬಣಗಳು ಸೋತು ಗೆದ್ದಂತಾಗಿದೆ.
ಎಸ್‌ಸಿ ಎಡಗೈ ಸಮುದಾಯದ ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ತಪ್ಪಿಸುವಲ್ಲಿ ರಮೇಶ್ ಕುಮಾರ್ ಟೀಂ ಯಶಸ್ವಿಯಾಗಿದೆ. ಆದರೆ, ಮುನಿಯಪ್ಪ ಅಳಿಯನ ಬದಲಿಗೆ ಎಡಗೈ ಸಮುದಾಯದವರೇ ಆದ ಕೆ.ವಿ.ಗೌತಮ್ ಅವರಿಗೆ ಟಿಕೆಟ್ ಸಿಕ್ಕಿದೆ. ಇನ್ನು ಜಿಲ್ಲೆಯಲ್ಲಿ ಮೂರನೇಯವರು ಬಂದರೆ ಸಂಕಷ್ಟಕ್ಕೆ ಸಿಲುಕಬಹುದು ಎಂದು ಮುನಿಯಪ್ಪ ಹೇಳಿದ್ದರು. ಆದ್ದರಿಂದ ಮುನಿಯಪ್ಪ ಮುನಿಸು ತಣಿಸಲು ಹೈಕಮಾಂಡ್ ಮುಂದಾಗಿದೆ.
ಮತ್ತೊಂದೆಡೆ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡದೆ ಹೊರಗಿನ ಅಭ್ಯರ್ಥಿಗೆ ಟಿಕೆಟ್ ನೀಡಿರುವುದಕ್ಕೆ ಕಾರ್ಯಕರ್ತರು, ಕೆ.ವಿ. ಗೌತಮ್ ವಿರುದ್ಧ ಗೋ ಬ್ಯಾಕ್ ಅಭಿಯಾನದ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಕಳೆದ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಅವರಿಗೆ ಟಿಕೆಟ್ ನೀಡಿದ್ದರಿಂದ ಕ್ಷೇತ್ರದಲ್ಲಿ ರಮೇಶ್ ಕುಮಾರ್ ಬಣ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಎಸ್. ಮುನಿಸ್ವಾಮಿಗೆ ಬೆಂಬಲ ನೀಡಿದ್ದರಿಂದ ಗೆಲುವು ಕಂಡಿದ್ದರು.
ಬಾಗಲಕೋಟೆಯಲ್ಲಿ ವೀಣಾ ಕಾಶಪ್ಪನವರ್ ಅಸಮಾಧಾನ
ಬಾಗಲಕೋಟೆಯಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ್‌ಗೆ ಟಿಕೆಟ್ ಕೈತಪ್ಪಿರುವುದರಿಂದ ಅವರ ಬೆಂಬಲಿಗರು ಪಕ್ಷದ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ಪಕ್ಷೇತರವಾಗಿ ಸ್ಪರ್ಧಿಸುವಂತೆ ವೀಣಾ ಕಾಶಪ್ಪನವರ್‌ಗೆ ಒತ್ತಾಯ ಮಾಡುತ್ತಿದ್ದಾರೆ.
ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್‌ಗೆ ಟಿಕೆಟ್ ನೀಡಿರುವುದರಿಂದ ನೊಂದಿರರುವ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಪತ್ನಿ ವೀಣಾ ಕಾಶಪ್ಪನವರ್, ನನಗೆ ಅನ್ಯಾಯ ಆಗಿದೆ, ಬೇಸರ ಆಗಿದೆ. ಹೀಗಾಗಿ ನಾನು ತಟ್ಟಸ್ಥವಾಗಿರುತ್ತೇನೆ ಎಂದು ಹೇಳಿದ್ದಾರೆ. ಹೀಗಾಗಿ ವೀಣಾ ಕಾಶಪ್ಪನವರ್ ಬೆಂಬಲಿಗರ ಅಸಮಾಧಾನ ಮುಂದುವರಿದರೆ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲೆ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ.
ಬೆಂಗಳೂರು ಕೇಂದ್ರದಲ್ಲಿ ಟಿಕೆಟ್ ಮಿಸ್; ನಲಪಾಡ್ ಬೆಂಬಲಿಗರ ಬೇಸರ
ಇದನ್ನೂ ಓದಿ | Lok Sabha Election 2024: ದೇವೇಗೌಡರಿಂದ ಕನ್ನಡಿಗರಿಗೆ ದ್ರೋಹ; ನನ್ನದು ಕನ್ನಡಿಗನ ಸ್ವಾಭಿಮಾನ: ಸಿದ್ದರಾಮಯ್ಯ
ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿನ ಒಳಬೇಗುದಿ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ. ಕ್ಷೇತ್ರದಲ್ಲಿ ಮನ್ಸೂರ್ ಅಲಿಖಾನ್‌ಗೆ ಟಿಕೆಟ್ ನೀಡಿದ್ದರಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮೊಹಮ್ಮದ್ ನಲಪಾಡ್ ಬೆಂಬಲಿಗರು ಅಸಮಾಧಾನ ಹೊರಹಾಕಿದ್ದಾರೆ. ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಪರ ಕೆಲಸ ಮಾಡಲು ಇಲ್ಲಿ ಕೈ ಶಾಸಕರು ಹಿಂದೇಟು ಹಾಕುತ್ತಿದ್ದಾರೆ. ಇತ್ತೀಚೆಗೆ ನಡೆದ ಸಿದ್ದತಾ ಸಭೆಗೂ ಅಲ್ಪಸಂಖ್ಯಾತ ಸಮುದಾಯದ ಶಾಸಕರು ಗೈರಾಗಿದ್ದರು. ಹೀಗಾಗಿ ಇಲ್ಲೂ ಒಳಪೆಟ್ಟಿನ ಆತಂಕವಿದೆ.