ಬೆಂಗಳೂರು: ನಗರದ ಆಗ್ನೇಯ ವಿಭಾಗದಲ್ಲಿ ಪೊಲೀಸ್ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿ ಮಾಡಲು ಡಿಸಿಪಿ ಸಿ.ಕೆ. ಬಾಬಾ ವಿನೂತನ ಪ್ರಯೋಗ ಮಾಡಿದ್ದಾರೆ. ಸಾರ್ವಜನಿಕರಿಗೆ ದೂರುಗಳನ್ನು ನೀಡಲು ಅನುಕೂಲವಾಗುವಂತೆ ʼಲೋಕಸ್ಪಂದನʼ ಕ್ಯೂ ಆರ್ ಕೋಡ್ (Loka Spandana) ಅನ್ನು ಪರಿಚಯಿಸಿದ್ದು, ಪೊಲೀಸ್ ಸಿಬ್ಬಂದಿ ಅಥವಾ ಅಧಿಕಾರಿಗಳು ಫೋನ್ ಕಾಲ್ ರೀಸಿವ್ ಮಾಡಲಿಲ್ಲವೆಂದರೆ, ಈ ಕ್ಯೂ ಆರ್ ಕೋಡ್ ಬಳಸಿ ಸಂದೇಶ ರವಾನಿಸಬಹುದಾಗಿದೆ.
ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಫೋನ್ ಕಾಲ್ ರೀಸಿವ್ ಮಾಡದಿದ್ದಾಗ ಸಾರ್ವಜನಿಕರು ʼಲೋಕಸ್ಪಂದನʼ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಸಂದೇಶ ರವಾನಿಸಿದರೆ ಅದು ನೇರವಾಗಿ ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ಅವರಿಗೆ ತಲುಪಲಿದೆ. ಇದರಿಂದ ಯಾವ ಅಧಿಕಾರಿ ಜನರಿಗೆ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಿ, ಅವರ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ.
ಇದನ್ನೂ ಓದಿ | Grama One: ತಂತ್ರಜ್ಞಾನ, ಸೇವಾ ಮನೋಭಾವವಿದ್ದರೆ ಸಾಮಾನ್ಯರಿಗೆ ಸರ್ಕಾರಿ ಸೌಲಭ್ಯ ತಲುಪುತ್ತದೆ: ಸಿಎಂ ಬೊಮ್ಮಾಯಿ
ಕರ್ತವ್ಯದಲ್ಲಿ ದಕ್ಷತೆ ಹೆಚ್ಚಿಸಲು ಈ ವಿನೂತನ ಕ್ಯೂ ಆರ್ ಕೋಡ್ ಅನ್ನು ಪರಿಚಯಿಸಲಾಗಿದ್ದು, ಇನ್ಮುಂದೆ ಆಗ್ನೇಯ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ಗೋಡೆ ಮೇಲೆ ಲೋಕಸ್ಪಂದನ ಎಂಬ ಕ್ಯೂ ಆರ್ ಸಿಗಲಿದೆ. ಸಾರ್ವಜನಿಕರು ಈ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಮೆಸೇಜ್ ಮಾಡಬಹುದಾಗಿದ್ದು, ಇದಕ್ಕೆ ಉತ್ತಮ ಸ್ಪಂದನೆಯೂ ಲಭಿಸಿದೆ.
ಕ್ಯೂ ಆರ್ ಕೋಡ್‌ಗೆ 14 ಠಾಣೆಗಳಲ್ಲಿ 8,662 ಸಂದರ್ಶಕರು ಭೇಟಿ ನೀಡಿದ್ದು, 6,812 ಜನ ನೂತನ ವ್ಯವಸ್ಥೆ ಬಗ್ಗೆ ಫೀಡ್ ಬ್ಯಾಕ್ ನೀಡಿದ್ದಾರೆ. 5832 ಜನ ಫೈ ಸ್ಟಾರ್ ರೇಟಿಂಗ್ ನೀಡಿದ್ದರೆ, 766 ಜನ 4 ಸ್ಟಾರ್, ಇನ್ನುಳಿದಂತೆ 3 ಸ್ಟಾರ್, ಟೂ ಸ್ಟಾರ್ ರೇಟಿಂಗ್ ನೀಡಿದ್ದಾರೆ. ಪೊಲೀಸ್ ಇಲಾಖೆ ಜನಸ್ನೇಹಿಯಾಗಲು ಲೋಕಸ್ಪಂದನ ಕ್ಯೂ ಆರ್ ಕೋಡ್ ಪರಿಚಯಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.