ಬೆಂಗಳೂರು: ಚೆನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ಶೋಧ ಕಾರ್ಯ ಮುಕ್ತಾಯಗೊಂಡಿದೆ. ಈಗಾಗಲೇ ಪ್ರಶಾಂತ್ ಮಾಡಾಳ್, ಸಿದ್ದೇಶ್ (ಸಂಬಂಧಿ), ಸುರೇಂದ್ರ (ಆಕೌಂಟೆಂಟ್), ನಿಕೋಲಸ್ (ಹಣ ಕೊಡಲು ಬಂದವನು), ಗಂಗಾಧರ್ (ದುಡ್ಡುಕೊಡಲು ಬಂದಾತ) ಬಂಧನವಾಗಿದೆ. ಬುಧವಾರ ಸಂಜೆ 6.30ರಿಂದ ಇಂದು ಮುಂಜಾನೆ 4ಗಂಟೆವರೆಗೆ ನಿರಂತರವಾಗಿ ಅಂದರೆ 9 ತಾಸು 30 ನಿಮಿಷಗಳ ಕಾಲ ಪ್ರಶಾಂತ್ ಮಾಡಾಳ್ಗೆ ಸೇರಿದ ಎಂ ಸ್ಟುಡಿಯೋದಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.
ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ ಕರೆದುಕೊಂಡು ಹೋಗಿದ್ದು, ಒಟ್ಟು ಒಂದೂಮುಕ್ಕಾಲು ಕೋಟಿ ರೂಪಾಯಿ ನಗದು ವಶಕ್ಕೆ ಪಡೆದಿದ್ದಾರೆ. ಇಂದು ಆರೋಪಿಗಳನ್ನು ಲೋಕಾಯುಕ್ತ ಕೋರ್ಟ್ ಎದುರು ಹಾಜರುಪಡಿಸಿ, ಮತ್ತೆ ವಶಕ್ಕೆ ಪಡೆಯಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Lokayukta Raid: ಬಿಜೆಪಿ ಶಾಸಕನ ಪುತ್ರ ಲೋಕಾಯುಕ್ತ ಬಲೆಗೆ, ಬೊಮ್ಮಾಯಿಗೆ ಟೆನ್ಶನ್, ಎಡಿಜಿಪಿಯಿಂದ ಮಾಹಿತಿ ಪಡೆದ ಸಿಎಂ
ಇನ್ನು ಸಂಜಯನಗರದಲ್ಲಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆ ಮತ್ತು ಅವರ ಒಡೆತನದ ಕೆಎಂವಿ ಮಾನ್ಷಿಯಲ್ನಲ್ಲಿ ಇನ್ನೂ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ಮುಂದುವರಿದಿದೆ. ಡಿವೈಎಸ್ಪಿ ನೇತೃತ್ವದಲ್ಲಿ ಪರಿಶೀಲನೆ ಮುಂದುವರಿದಿದೆ.