Site icon Vistara News

Lokayukta Raid : ಮಾಡಾಳ್‌ ಪುತ್ರ ಪ್ರಶಾಂತ್‌ ಲಂಚಾವತಾರ ಇದೇ ಮೊದಲಲ್ಲ, ಹಿಂದೆಯೂ ಸಿಕ್ಕಿಬಿದ್ದು ಸಸ್ಪೆಂಡ್‌ ಆಗಿದ್ದ!

Madalu prashant money

#image_title

ಬೆಂಗಳೂರು: ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್‌ ಮಾಡಾಳು 40 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ (Lokayukta Raid) ಸಿಕ್ಕಿಬಿದ್ದು ರಾಷ್ಟ್ರಾದ್ಯಂತ ಸುದ್ದಿಯಾಗಿದ್ದಾರೆ. ಇದೀಗ ಅವರ ಮನೆ ಮತ್ತು ಕಚೇರಿಯಿಂದ ಒಟ್ಟು 8 ಕೋಟಿ ರೂ. ನಗದು ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ. ಇಷ್ಟೊಂದು ಹಣ ಎಲ್ಲಿಂದ ಬಂತು? ಎಲ್ಲವೂ ಲಂಚದ ಹಣವೇ? ಯಾವ್ಯಾವ ಮೂಲಗಳಿಂದ ಹಣ ಸಂಗ್ರಹಿಸಲಾಗುತ್ತಿದೆ ಎಂಬೆಲ್ಲ ವಿಚಾರಗಳ ಬಗ್ಗೆ ಲೋಕಾಯುಕ್ತರು ತನಿಖೆ ನಡೆಸಲಿದ್ದಾರೆ.

ಅದರ ನಡುವೆ ಈಗ ಬಂಧನದಲ್ಲಿರುವ ಪ್ರಶಾಂತ್‌ ಮಾಡಾಳು ಇಂಥ ಕೃತ್ಯಗಳಿಗೆ ಇಳಿದು ಸಿಕ್ಕಿಬೀಳುತ್ತಿರುವುದು ಇದೇ ಮೊದಲಲ್ಲ ಎಂಬ ಅಂಶವೂ ಬಯಲಾಗಿದೆ.

ಜಲ ಮಂಡಳಿ ಮುಖ್ಯಾಧಿಕಾರಿಯಾಗಿರುವ ಪ್ರಶಾಂತ್‌ ತನ್ನ ತಂದೆ ವಿರೂಪಾಕ್ಷಪ್ಪ ಮಾಡಾಳು ಅವರ ಕಚೇರಿಯಲ್ಲಿ ಕುಳಿತು 40 ಲಕ್ಷ ರೂ. ಲಂಚ ಸ್ವೀಕರಿಸಿದ್ದಾರೆ. ಇದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಕಚ್ಚಾ ವಸ್ತುಗಳ ಟೆಂಡರ್‌ಗೆ ಸಂಬಂಧಿಸಿ ಕೇಳಿದ 80 ಲಕ್ಷ ರೂ. ಬೇಡಿಕೆಗೆ ಪ್ರತಿಯಾಗಿ ನೀಡಲಾದ ಮೊದಲ ಕಂತು ಎಂದು ಹೇಳಲಾಗಿದೆ. ಇದು ನಿಗಮದ ಅಧ್ಯಕ್ಷರಾಗಿರುವ ಶಾಸಕ ವಿರೂಪಾಕ್ಷಪ್ಪ ಅವರಿಗೆ ಸಲ್ಲಬೇಕಾಗಿರುವ ಮೊತ್ತ ಎನ್ನುವುದು ಪ್ರಾಥಮಿಕವಾಗಿ ಬೆಳಕಿಗೆ ಬಂದಿದೆ.

ನಿಜವೆಂದರೆ, ಪ್ರಶಾಂತ್‌ ಈ ಥರ ಲಂಚಾವತಾರದಲ್ಲಿ ಸಿಕ್ಕಿಬೀಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಸಿದ್ದರಾಮಯ್ಯ ಅವಧಿಯಲ್ಲಿ ಸಚಿವ ವಿನಯ್ ಕುಲಕರ್ಣಿಗೆ ಸ್ಪೆಷಲ್ ಆಫೀಸರ್ ಆಗಿದ್ದ ಪ್ರಶಾಂತ್ ಮಾಡಾಳ್ ಆಗಲೂ ಲಂಚ ಸ್ವೀಕರಿಸಿ ಸಿಕ್ಕಬಿದ್ದು ಅಮಾನತಾಗಿದ್ದರು.

ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿದ್ದ ವಿನಯ್ ಕುಲಕರ್ಣಿಗೆ ಸ್ಪೆಷಲ್ ಆಫೀಸರ್ ಆಗಿದ್ದ ವೇಳೆ ಲಂಚ ಸ್ವೀಕರಿಸಿದ್ದು ಬೆಳಕಿಗೆ ಬರುತ್ತಿದ್ದಂತೆಯೇ ಅವರನ್ನು ಹೊರಗಟ್ಟಲಾಗಿತ್ತು. ಹುದ್ದೆಯಿಂದ ಅಮಾನತು ಕೂಡಾ ಮಾಡಲಾಗಿತ್ತು. ಆದರೆ, ಪ್ರಶಾಂತ್‌ ತನ್ನ ಹಳೆ ಚಾಳಿಯನ್ನು ಮತ್ತೆ ಮುಂದುವರಿಸಿದ್ದಾರೆ.

ಇದನ್ನೂ ಓದಿ : Lokayukta Raid: ಚುನಾವಣಾ ಆಯೋಗ ಈಗಲೆ ಕರ್ನಾಟಕದಲ್ಲಿ ಚುನಾವಣೆ ಘೋಷಣೆ ಮಾಡಬೇಕು: ಸಿದ್ದರಾಮಯ್ಯ ಆಗ್ರಹ

Exit mobile version