ದಾವಣಗೆರೆ: ಹರಿಹರ ಪಟ್ಟಣದ ಸಬ್ ರಿಜಿಸ್ಟ್ರಾರ್ ಕಚೇರಿಯ ದಸ್ತು ಬರಹಗಾರ ಎಂ.ಬಿ. ಪರಮೇಶ್ವರ್ ಲಂಚಾವತಾರ ಬೆಳಕಿಗೆ ಬಂದಿದ್ದು, ಅವರು ಹಣ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ (Lokayukta Raid) ಬಿದ್ದಿದ್ದಾರೆ. ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೆ, ಇನ್ಸ್ಪೆಕ್ಟರ್ ರಾಷ್ಟ್ರಪತಿ ಎಚ್.ಎಸ್. ಆಂಜನೇಯ ನೇತೃತ್ವದಲ್ಲಿ ದಾಳಿ ನಡೆದಿತ್ತು. ಆರೋಪಿ ಎಂ.ಬಿ.ಪರಮೇಶ್ವರ್ನಿಂದ 40 ಸಾವಿರ ರೂಪಾಯಿ ನಗದು ಮತ್ತು ವಿವಿಧ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಹರಿಹರದ ನಿವಾಸಿಯಾದ ಮಂಜುನಾಥ್ ಎಂಬುವರು ಮನೆ ಖರೀದಿ ಮಾಡಿದ ಸೇಲ್ ಡೀಡ್ ನೋಂದಣಿ ಪತ್ರ ಪಡೆಯಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ, ದಸ್ತು ಬರಹಗಾರ ಪರಮೇಶ್ವರ್ರನ್ನು ಸಂಪರ್ಕಿಸಿದ್ದರು. ಆದರೆ ಪರಮೇಶ್ವರ್ ಪುಕ್ಕಟೆ ಕೆಲಸ ಮಾಡಲು ನಿರಾಕರಿಸಿ, 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಮಂಜುನಾಥ್ ಲೋಕಾಯುಕ್ತರಿಗೆ ದೂರು ನೀಡಿದ್ದರು. ಪರಮೇಶ್ವರ್ ಬಂಧನಕ್ಕೆ ಬಲೆ ಬೀಸಲಾಗಿತ್ತು. ಶನಿವಾರ ರಾತ್ರಿ ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ, ಪರಮೇಶ್ವರ್ ಅವರು ಮಂಜುನಾಥ್ರಿಂದ 13 ಸಾವಿರ ರೂಪಾಯಿ ಹಣ ಪಡೆಯುವಾಗಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಇದನ್ನೂ ಓದಿ: Bhatkala News : ಸರ್ಕಾರದ ದುಡ್ಡಿನಲ್ಲಿ ತಮ್ಮ ಫಾರ್ಮ್‌ಗೆ ರಸ್ತೆ ಮಾಡಿಕೊಂಡ ಸುನೀಲ್ ನಾಯ್ಕ; ಲೋಕಾಯುಕ್ತಕ್ಕೆ ದೂರು
ಇಷ್ಟು ವರ್ಷ ಆಡಳಿತದಲ್ಲಿ ಇದ್ದ ಬಿಜೆಪಿ ಸರ್ಕಾರ ಕಳೆದ ವರ್ಷ ಲೋಕಾಯುಕ್ತಕ್ಕೆ ಬಲ ನೀಡಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ, 2016ರಲ್ಲಿ ಲೋಕಾಯುಕ್ತವನ್ನು ರದ್ದು ಮಾಡಿ ಅದರ ಬದಲಿಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ವನ್ನು ರಚನೆ ಮಾಡಲಾಗಿತ್ತು. 2022ರಲ್ಲಿ ಬಿಜೆಪಿ ಸರ್ಕಾರ ಮತ್ತೆ ಈ ಎಸಿಬಿಯನ್ನು ರದ್ದು ಮಾಡಿ, ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಅಧಿಕಾರ ನೀಡಿತ್ತು. ಆಗಿನಿಂದಲೂ ಲೋಕಾಯುಕ್ತ ಮತ್ತೆ ಚುರುಕಾಗಿ ಕಾರ್ಯನಿವರ್ಹಿಸುತ್ತಿದೆ.