Site icon Vistara News

Harish Hande: ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು ದೀರ್ಘ ಕಾಲದ ಸಹಯೋಗಗಳು ಅಗತ್ಯ: ಹರೀಶ್ ಹಂದೆ

Harish Hande

ಬೆಂಗಳೂರು: 2030ರ ಹೊತ್ತಿಗೆ ಸಾಧಿಸಬೇಕಾದ ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ)ಗಳನ್ನು ಮುಟ್ಟಲು ಎಲ್ಲ ಸ್ತರಗಳಲ್ಲೂ ದೀರ್ಘಕಾಲದ ದೊಡ್ಡ ಮಟ್ಟದ ಸಂಘಟನಾತ್ಮಕ ಸಹಯೋಗಗಳು ಅಗತ್ಯವಾಗಿದೆ ಎಂದು ಸೆಲ್ಕೋ ಫೌಂಡೇಷನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಹರೀಶ್ ಹಂದೆ (Dr Harish Hande) ಅಭಿಪ್ರಾಯಪಟ್ಟರು.

ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಜಯನಗರದ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಸೌರಶಕ್ತಿಯ ಅನ್ವಯಿಕಗಳ ಕುರಿತ ಒಂದು ದಿನದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸುಸ್ಥಿರ ಅಭಿವೃದ್ಧಿ ಗುರಿ ತಲುಪಲು ಜೀವನೋಪಾಯ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಬೇಕೆಂದರೆ ಅದು ಕುಕ್ಕುಟ ಉದ್ಯಮವೇ ಇರಲಿ, ಗಿರಣಿ, ಗಾಣ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ಸೌರಶಕ್ತಿ ಬಳಕೆ ಅನಿವಾರ್ಯ ಎಂದರು.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಸೂಕ್ತ ಕಾಲದಲ್ಲಿ ಕೋವಿಡ್‌ ಮುನ್ನೆಚ್ಚರಿಕೆ ವಹಿಸಿ

ಉದ್ಘಾಟನಾ ಭಾಷಣ ಮಾಡಿದ ಕೇಂದ್ರದ ಗ್ರಾಮೀಣ ವಿದ್ಯುದೀಕರಣ ನಿಗಮದ (ಆರ್‌ಇಸಿ) ಕಾರ್ಯಕ್ರಮಗಳ ಹಿರಿಯ ವ್ಯವಸ್ಥಾಪಕರಾದ ಸೌಮ್ಯಕಾಂತ್ ಅವರು, ಪಳೆಯುಳಿಕೆಗಳ ಮೇಲೆ ಅವಲಂಬಿತವಾಗಿರುವ ಈಗಿನ ಇಂಧನ ಮೂಲಗಳನ್ನು ಭವಿಷ್ಯದಲ್ಲಿ ಹಸಿರು ಮತ್ತು ಶುದ್ಧ ಇಂಧನ ಮೂಲಗಳಾದ ಗಾಳಿ, ನೀರು ಮತ್ತು ಸೌರಶಕ್ತಿ ಆಧಾರಿತವಾಗಿ ರೂಪಿಸಲು ಆರ್‌ಇಸಿ ಬದ್ಧವಾಗಿದೆ. ಗ್ರಾಮೀಣ ಜನರಿಗೆ ಆಧುನಿಕ ತಂತ್ರಜ್ಞಾನದೊಂದಿಗೆ ಪರಿಸರಕ್ಕೆ ಪೂರಕವಾದ ವಿಶ್ವಾಸಾರ್ಹ ಮತ್ತು ಕೈಗೆಟಕುವ ಇಂಧನವನ್ನು ಒದಗಿಸುವ ಮೂಲಕ ಅವರ ಆರ್ಥಿಕ, ಸಾಮಾಜಿಕ ಬದಲಾವಣೆಗಾಗಿ ಆರ್‌ಇಸಿ ಫೌಂಡೇಷನ್ ಆರಂಭಿಸಲಾಗಿದ್ದು, ಇದಕ್ಕೆ ಸುಸ್ಥಿರ ಅಭಿವೃದ್ಧಿಯೇ ಮೂಲ ಮಂತ್ರವಾಗಿದೆ ಎಂದರು.

ಮುಖ್ಯ ಅತಿಥಿಯಾದ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಪ್ರಿಯಾ ಖಾನ್ ಅವರು, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಸೆಲ್ಲೋ ಸಂಸ್ಥೆ ಜತೆ ಕೈ ಜೋಡಿಸಲು ಮಹಾರಾಷ್ಟ್ರ ಸರ್ಕಾರ ಹೆಚ್ಚು ಉತ್ಸುಕವಾಗಿದೆ ಎಂದರು.

ಸುಸ್ಥಿರ ಇಂಧನವನ್ನು ಆಧಾರವಾಗಿಟ್ಟುಕೊಂಡು ಮಹಿಳಾ ಬಲವರ್ಧನೆಯಲ್ಲಿ ತೊಡಗಿರುವ ಬಿಹಾರದ ಜೆ. ವೈರ್ಸ್ ನಿರ್ದೇಶಕರಾದ ಸಂಜುದೇವಿ, ತಮ್ಮ ಸಂಸ್ಥೆಯ ಯಶೋಗಾಥೆಯನ್ನು ಹಂಚಿಕೊಂಡರು.

ಸೆಲ್ಕೋ ಸಂಸ್ಥೆಯ ಸಿಇಒ ಮೋಹನ್ ಭಾಸ್ಕರ ಹೆಗಡೆ ಅವರು, ಕಳೆದ 75 ವರ್ಷಗಳಲ್ಲಿ ಇಂಧನ ಕ್ಷೇತ್ರದಲ್ಲಿ ಸೌರಶಕ್ತಿ ವಲಯವು ಬಹಳ ಮಹತ್ವದ್ದಾಗಿ ಬೆಳೆದಿದೆ. ಸೌರಶಕ್ತಿಯನ್ನು ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಕವಾಗಿ ಬಳಕೆ ಮಾಡುವ ಮೂಲಕ ವಿವಿಧ ರೀತಿಯ ಉದ್ಯಮಗಳನ್ನು ಹೇಗೆ ಕಟ್ಟಬಹುದು ಎಂಬುದಕ್ಕೆ ಅನೇಕ ಉದಾಹರಣೆಗಳು ಸಿಗುತ್ತಿವೆ ಎಂದರು.

ಸೆಲ್ಕೋ ಇಂಡಿಯಾದ ನಿರ್ದೇಶಕ ಥಾಮಸ್ ಪುಲ್ಲೆಂಕೇವ್ ಮಾತನಾಡಿ, ಸೌರಶಕ್ತಿ ಕ್ಷೇತ್ರವೂ ಸೇರಿದಂತೆ ಯಾವುದೇ ಕ್ಷೇತ್ರದ ಬೆಳವಣಿಗೆಗೆ ಸಹಭಾಗಿತ್ವದ ಮಹತ್ವವನ್ನು ಒತ್ತಿ ಹೇಳಿದರು. ಇದೇ ಸಂದರ್ಭದಲ್ಲಿ, ಸೆಲ್ಕೋ ಫೌಂಡೇಶನ್‌ನ ನಿರ್ದೇಶಕರಾದ ಹುದಾ ಜಾಫರ್ ಅವರು ಕಾಪ್ -28 ರ ಕುರಿತ ತಮ್ಮ ಅನುಭವಗಳನ್ನು ಹಂಚಿಕೊಂಡರು.

ದಿನವಿಡೀ ನಡೆದ ವಿಚಾರ ಸಂಕಿರಣದಲ್ಲಿ, ವೈವಿಧ್ಯಮಯ ಜೀವನೋಪಾಯ ಕ್ಷೇತ್ರದಲ್ಲಿ ಸೌರಶಕ್ತಿಯ ಬಳಕೆಯಲ್ಲಿ ಹಣಕಾಸು ಸಂಸ್ಥೆಗಳು ಮತ್ತು ಸಂಘಟಿತ ಬ್ಯಾಂಕಿಂಗ್/ಹಣಕಾಸು ವಲಯದ ಪಾತ್ರ, ಇಂಗಾಲದ ಡಯಾಕ್ಸೈಡ್ ಹೊರಸೂಸುವಿಕೆ ಪ್ರಮಾಣವನ್ನು ಕಡಿತಗೊಳಿಸುವಲ್ಲಿ ಹವಾಮಾನ ಕ್ರಿಯೆಯ ಮಾರ್ಗಗಳ ಮುಂತಾದ ವಿಯಗಳ ಕುರಿತು ಗುಂಪು ಚರ್ಚೆಗಳು ನಡೆದವು.

ಇದನ್ನೂ ಓದಿ | Aviation Ministry: ಈ ವಿಮಾನದಲ್ಲಿ ಪ್ರಯಾಣಿಸಿದರೆ ಹೇಳಿದ ಸಮಯಕ್ಕೆ ತಲುಪಬಹುದು

ವಿವಿಧ ಭಾಗಗಳಲ್ಲಿ ಅನುಷ್ಠಾನಗೊಂಡಿರುವ ಯಶಸ್ವೀ ಉದ್ಯಮದ ಮಾದರಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಸೌರ ಇಂದನವನ್ನು ಬಳಕೆ ಮಾಡಿಕೊಂಡು ತಯಾರಿಸಲಾದ ತಿನಿಸುಗಳ ಮಳಿಗೆಗಳೂ ಇದ್ದವು. ನವೀಕರಿಸಬಹುದಾದ ಇಂಧನ ಬಳಕೆದಾರರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕೆಲವು ಸೌರ ಉದ್ಯಮಿಗಳನ್ನು ಗೌರವಿಸಲಾಯಿತು.

Exit mobile version