Site icon Vistara News

Reservation demand | ಸಚಿವರ ಮಾತಿಗೆ ಒಪ್ಪದ ಹೋರಾಟಗಾರರು, ಮಾದಾರ ಚನ್ನಯ್ಯ ಶ್ರೀಗಳ ಮಾತಿನಿಂದ ಧರಣಿ ಅಂತ್ಯ

Madiagara prathibhatane

ಬೆಳಗಾವಿ: ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೆ (Reservation demand) ತರಬೇಕು, ಸೂಕ್ತ ರೀತಿಯಲ್ಲಿ ಒಳಮೀಸಲನ್ನು ನೀಡಬೇಕು ಎಂದು ಆಗ್ರಹಿಸಿ ಮಂಗಳವಾರ ಬೆಳಗಾವಿಯ ಸುವರ್ಣ ಸೌಧದ ಮುಂಭಾಗದಲ್ಲಿ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಬೃಹತ್‌ ಹೋರಾಟ ನಡೆಯಿತು. ರಾಜ್ಯದ ಇಬ್ಬರು ಸಚಿವರು ಬಂದು ಮನವೊಲಿಸಿದರೂ ಪ್ರತಿಭಟನೆಯಿಂದ ಹಿಂದೆ ಸರಿಯದ ಹೋರಾಟಗಾರರು, ಮಾದಾರ ಚನ್ನಯ್ಯ ಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರ ಮಾತಿಗೆ ಒಪ್ಪಿ ಧರಣಿಯನ್ನು ಮುಕ್ತಾಯಗೊಳಿಸಿದರು.

ಸದಾಶಿವ ಆಯೋಗದ ವರದಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಮಾದಿಗ ಸಂಬಂಧಿತ ಜಾತಿಗಳಿಗೆ ಶೇಕಡಾ ಏಳರಷ್ಟು ಆದ್ಯತಾ ಒಳಮೀಸಲಾತಿ ಕೊಡಬೇಕು, ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಜಾರಿ ಮತ್ತು ಮೌಲ್ಯಮಾಪನ ವಿಭಾಗ ತೆರೆಯಬೇಕೆಂದು ಒತ್ತಾಯಿಸಿ ರಾಜ್ಯದ ನಾನಾ ಕಡೆಯಿಂದ ಆಗಮಿಸಿದ ಮಾದಿಗ ಸಮಾಜದ ಸಾವಿರಾರು ಜನರು ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಸಚಿವ ಗೋವಿಂದ ಕಾರಜೋಳ ಅವರು, ʻʻಎಸ್‌ಸಿಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿದ್ದಕ್ಕೆ ಕಾಂಗ್ರೆಸ್ ಪಕ್ಷ ಸರ್ಕಾರಕ್ಕೆ ನೋಟಿಸ್ ಕೊಟ್ಟಿದೆ. ಕಾಂಗ್ರೆಸ್ ನಾಯಕರು ಮತ್ತವರ ಹಿಂದಿರುವ ಕುತಂತ್ರಿಗಳು ವಿರೋಧ ಮಾಡುತ್ತಿದ್ದಾರೆ. ಆದರೆ, ಎಸ್‌ಸಿಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಯಾರೇ ವಿರೋಧ ಮಾಡಿದ್ರೂ ಮೀಸಲಾತಿ ಹೆಚ್ಚಳ ಮಾಡೇ ಮಾಡುತ್ತೇವೆ. ಆದರೆ, ಒಳ ಮೀಸಲಾತಿಗೆ ಬಿಜೆಪಿ ಕಟಿಬದ್ಧವಾಗಿ ಕೆಲಸ ಮಾಡುತ್ತಿದೆʼʼ ಎಂದು ಹೇಳಿದರು.

ʻʻರಾಜ್ಯದ ಇತಿಹಾಸದಲ್ಲಿ ಬಸವರಾಜ ಬೊಮ್ಮಾಯಿಯವರಂತಹ ಸಿಎಮ್ ಇದುವರೆಗೆ ಬಂದಿಲ್ಲ. ಶೋಷಿತ ಸಮಾಜಗಳ ಪರವಾಗಿ ಬಸವರಾಜ ಬೊಮ್ಮಾಯಿ ಸದಾ ಇದ್ದಾರೆ. ಹೀಗಾಗಿ ಕಾಂಗ್ರೆಸ್ ಮಾತಿಗೆ ಯಾರೂ ಕಿವಿಗೊಡಬಾರದುʼʼ ಎಂದು ಹೇಳಿದರು. ಆದರೆ, ಗೋವಿಂದ ಕಾರಜೋಳ ನೀಡಿದ ಆಶ್ವಾಸನೆಯನ್ನು ಮಾದಿಗ ಸಮಾಜದ ಮುಖಂಡರು ಒಪ್ಪಲಿಲ್ಲ.
ʻʻಬೇಕೇ ಬೇಕು ನ್ಯಾಯ ಬೇಕುʼʼ ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು, ʻʻರಾಜ್ಯ ಸರ್ಕಾರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದೆ. ಮುಂದಿನ ಚುನಾವಣೆಯಲ್ಲಿ ಮತ ಪಡೆಯಲು ಬಿಜೆಪಿಯವರು ಹುನ್ನಾರ ನಡೆಸುತ್ತಿದ್ದಾರೆʼʼ ಎಂದು ಆಪಾದಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು, ʻʻನಮ್ಮ ಸರ್ಕಾರ ಸದಾಶಿವ ಆಯೋಗದ‌ವ ರದಿಯನ್ನ ಜಾರಿ ಮಾಡುತ್ತದೆ. ಈಗಾಗಲೇ ಒಂದು ಸಮಿತಿ ರಚನೆ ಮಾಡಿದ್ದೇವೆ. ವರದಿ ಬಂದನಂತರ ಖಂಡಿತವಾಗಿ ಕೊಟ್ಟ ಮಾತನ್ನು ನಮ್ಮ ಸರ್ಕಾರ ಉಳಿಸಿಕೊಳ್ಳುತ್ತದೆʼʼ ಎಂದರು.

ಆದರೆ, ಇಬ್ಬರೂ ಸಚಿವ ಮಾತನ್ನು ಪ್ರತಿಭಟನಾಕಾರರು ಕೇಳಿಸಿಕೊಳ್ಳಲಿಲ್ಲ. ಆಗ ಇಬ್ಬರೂ ಸಚಿವರು ಅಲ್ಲಿಂದ ಹೊರಟರು.

ಬಳಿಕ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಒಳಮೀಸಲಾತಿಗೆ ಉಪಸಮಿತಿ ರಚನೆ ಮಾಡಿದ್ದಾರೆ. ಈಗ ಒಂದು ಸಭೆ ನಡೆದಿದ್ದು ಇನ್ನೆರಡು ಸಭೆಗಳು ನಡೆಯಲಿ. 31 ವರ್ಷಗಳಿಂದ ಸಹಿಸಿಕೊಂಡಿದ್ದೀರಿ, ಇನ್ನೂ ಸ್ವಲ್ಪ ದಿವಸ ತಡೀರಿʼʼ ಎಂದು ಹೇಳಿದರು.

ʻʻಬಿಜೆಪಿ ಸರ್ಕಾರ ನಮ್ಮ ಬಹುತೇಕ ಬೇಡಿಕೆಗಳನ್ನು ಈಡೇರಿಸಿದೆ. ಭರವಸೆ ಈಡೇರದಿದ್ದರೆ ನಾನೇ ನಿಮ್ಮ ಜೊತೆ ಕುಳಿತು ಹೋರಾಟ ಮಾಡುವೆʼʼ ಎಂದರು. ಶ್ರೀಗಳ ಹೇಳಿಕೆ ಬಳಿ ಹೋರಾಟಗಾರರು ಪ್ರತಿಭಟನೆ ನಿಲ್ಲಿಸಿದರು.

Exit mobile version