ಬೀದರ್: ಜಿಲ್ಲೆಯ ಹುಲಸೂರ ತಾಲೂಕಿನ ಬೇಲೂರು ಗ್ರಾಮದಲ್ಲಿ ಕಳೆದೊಂದು ವಾರದಿಂದ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿ ಕಚ್ಚಿ ಹಲ್ಲೆ ಮಾಡುತ್ತಿದ್ದ ಹುಚ್ಚು ಮಂಗನನ್ನು ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಕ್ಕಿ ಹತ್ಯೆ (Monkey shot dead) ಮಾಡಿದ್ದಾರೆ.
ಬೇಲೂರು ಗ್ರಾಮದಲ್ಲಿ ಕಳೆದ ಒಂದು ವಾರದ ಹಿಂದೆ ಹುಚ್ಚು ಮಂಗವೊಂದು ಕಾಣಿಸಿಕೊಂಡಿದೆ. ಅದು ದಾರಿ ಮೇಲೆ ಹೋಗುತ್ತಿದ್ದವರ ಮೇಲೆ ದಾಳಿ ನಡೆಸಿ ಕಚ್ಚಿ ಗಾಯಗೊಳಿಸುತ್ತಿತ್ತು. ಒಂದು ವಾರದಿಂದ ಸುಮಾರು ೧೮ ಮಂದಿ ಮೇಲೆ ಎರಗಿರುವ ಈ ಕೋತಿಯು ಗಾಯಗೊಳಿಸಿತ್ತು. ಈ ಸಂಬಂಧ ಗ್ರಾಮಸ್ಥರು ಮನೆಯಿಂದ ಹೊರಗೆ ಬರಲೂ ಭಯಪಡುತ್ತಿದ್ದರು.
ಗ್ರಾಮದಲ್ಲಿ ಕೋತಿ ಕಾಟ ವಿಪರೀತವಾಗಿದ್ದು, ಅದನ್ನು ಸೆರೆಹಿಡಿಯಬೇಕು ಎಂದು ಅರಣ್ಯಾಧಿಕಾರಿಗಳ ಬಳಿ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದರು. ಅಲ್ಲದೆ, ತಮ್ಮನ್ನು ರಕ್ಷಣೆ ಮಾಡುವಂತೆಯೂ ಮನವಿ ಮಾಡಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳೂ ಸಹ ಸ್ಥಳಕ್ಕೆ ಬಂದು ಆ ಹುಚ್ಚು ಕೋತಿಯನ್ನು ಸೆರೆಹಿಡಿಯಲು ಪ್ರಯತ್ನಪಟ್ಟರಾದರೂ ಸಫಲವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅದನ್ನು ಕೊಲ್ಲುವ ತೀರ್ಮಾನಕ್ಕೆ ಬಂದಿದ್ದಾರೆ.
ಕೊಲ್ಲಲು ಮೇಲಧಿಕಾರಿಗಳಿಂದ ಅನುಮತಿ
ಹುಚ್ಚು ಕೋತಿಯಿಂದ ನಾಗರಿಕರ ಮೇಲೆ ನಿರಂತರ ದಾಳಿಯಾಗುತ್ತಿದ್ದು, ಅದನ್ನು ಕೊಲ್ಲದೆ ಬೇರೆ ದಾರಿ ಇಲ್ಲ ಎಂದು ಮೇಲಧಿಕಾರಿಗಳಿಗೆ ಮನವರಿಕೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ, ಅವರಿಂದ ಅನುಮತಿ ಪಡೆದು ಗುಂಡಿಕ್ಕಿ ಕೋತಿಯನ್ನು ಹತ್ಯೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದವರು ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ | Sexual Assault | ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ್ದ ನೇಪಾಳ ಕ್ರಿಕೆಟಿಗನಿಗೆ ಬೇಲ್; ನಾನು ಅಮಾಯಕ ಎಂದ ಆಟಗಾರ