Site icon Vistara News

Karnataka Election 2023: ನಾನು, ನನ್ನ ತಂದೆ ಎಂದೂ ಜಾತಿ, ಧರ್ಮದ ಮೇಲೆ ರಾಜಕಾರಣ ಮಾಡಿಲ್ಲ: ಮಧು ಬಂಗಾರಪ್ಪ

ಬನವಾಸಿಯಲ್ಲಿ ಮಧು ಬಂಗಾರಪ್ಪ ಅವರಿಂದ ಪ್ರಚಾರ

ಬನವಾಸಿ: “ನಾನು ಹಾಗೂ ನನ್ನ ತಂದೆ ಎಂದೂ ಜಾತಿ, ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡಿಲ್ಲ. ಎಲ್ಲ ಸಮುದಾಯದವರನ್ನು ಗೌರವಿಸಿದ್ದೇವೆ. ಜನರ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯ ಆಧಾರದ ಮೇಲೆ ರಾಜಕಾರಣ ಮಾಡಿದ್ದೇವೆ” ಎಂದು ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು.

ಅವರು ಪಟ್ಟಣದಲ್ಲಿ ಸೋಮವಾರ ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್ ಪರ ಮತಯಾಚನೆ ಹಾಗೂ ಪ್ರಚಾರ ಸಭೆಯಲ್ಲಿ ಮಾತನಾಡಿ, “ನನ್ನ ತಂದೆಯವರಾದ ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಭಾಗಕ್ಕೆ ಹಲವಾರು ಕೊಡುಗೆಯನ್ನು ನೀಡಿದ್ದಾರೆ. ರೈತರಿಗೆ ಸಾಕಷ್ಟು ಅನುಕೂಲ ಮಾಡಿದ್ದಾರೆ. ಇವೆಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿ ವಿನಂತಿ ಮಾಡುತ್ತೇನೆ. ಬಿಜೆಪಿ ಪಕ್ಷದ ದುರಾಡಳಿತದಿಂದ ಜನ ಬೇಸತ್ತು ಹೋಗಿದ್ದು ಬದಲಾವಣೆ ಬಯಸುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತವಾಗಿದೆ” ಎಂದರು.

ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಪಾಟೀಲ್ ಮಾತನಾಡಿ, “ಈ ಹಿಂದೆ ಶಾಸಕನಾಗಿದ್ದಾಗ ಕ್ಷೇತ್ರದಲ್ಲಿ ಮಾಡಿದ ಕೆಲಸಗಳನ್ನು ಜನ ಇನ್ನೂ ಮರೆತಿಲ್ಲ. ಹೀಗಾಗಿ ನನಗೆ ಬೆಂಬಲ ಸೂಚಿಸಿದ್ದಾರೆ. ಜನ ಈಗ ದಬ್ಬಾಳಿಕೆಯ ಆಳ್ವಿಕೆಯಿಂದ ಬೇಸತ್ತಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಬದಲಾವಣೆ ಅಲೆ ಎದ್ದಿದೆ. ಬಹಳಷ್ಟು ಮತದಾರರು ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವೆಲ್ಲವುಗಳು ಬಿಜೆಪಿಯ ದುರಾಡಳಿತಕ್ಕೆ ಸಾಕ್ಷಿಯಾಗಿದೆ” ಎಂದರು.

ಇದನ್ನೂ ಓದಿ: Karnataka Election 2023: ಬಹಿರಂಗ ಪ್ರಚಾರ ಅಂತ್ಯ; ಕಣ ರಂಗೇರಿಸಿದ ಅತಿರಥ, ಮಹಾರಥರ ಕ್ಯಾಂಪೇನ್!

“ಆಡಳಿತದಲ್ಲಿ ಬಿಜೆಪಿ ವಿರುದ್ಧದ ಅಲೆ ಒಂದೆಡೆಯಾದರೆ, ಶಾಸಕನಾಗಿದ್ದಾಗ ನಾನು ಮಾಡಿದಂತಹ ಕಾರ್ಯಗಳು ನನ್ನ ಗೆಲುವಿಗೆ ಪ್ರಮುಖ ಕಾರಣವಾಗಲಿದೆ. ಸಂಪೂರ್ಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪರವಾದ ವಾತಾವರಣ ಸೃಷ್ಟಿಯಾಗಿದೆ” ಎಂದರು. ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀನಿವಾಸ ಭಟ್‌ ಧಾತ್ರಿ, ಸಿ.ಎಫ್ ನಾಯ್ಕ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಸಾವಿರಾರು ಕಾರ್ಯಕರ್ತರು ಇದ್ದರು.

Exit mobile version