Site icon Vistara News

MAHE Manipal | ತರಗತಿಯಲ್ಲಿ ಮುಸ್ಲಿಮರು ಟೆರರಿಸ್ಟ್‌ ಎಂದ ಉಪನ್ಯಾಸಕ: ವಿದ್ಯಾರ್ಥಿಯಿಂದ ತರಾಟೆ; ವಿಡಿಯೊ ವೈರಲ್

mnipal-collage-issue terror talk

ಉಡುಪಿ: ಮಾಹೆ ವಿಶ್ವವಿದ್ಯಾಲಯದ (MAHE Manipal) ಎಂಐಟಿ ಕಾಲೇಜಿನಲ್ಲಿ ಪಾಠ ಮಾಡುವ ವೇಳೆ ಉಪನ್ಯಾಸಕರೊಬ್ಬರು ಮುಸ್ಲಿಂ ಸಮುದಾಯದವರು ಉಗ್ರರು ಎಂಬರ್ಥದಲ್ಲಿ ಹೇಳಿಕೆ ನೀಡಿದ್ದು, ಇದನ್ನು ತರಗತಿಯೊಳಗಿದ್ದ ಅದೇ ಸಮುದಾಯದ ಯುವಕನೊಬ್ಬ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಈ ವೃತ್ತಾಂತದ ವಿಡಿಯೊ ವೈರಲ್‌ ಆಗಿದ್ದು, ಉಪನ್ಯಾಸಕನನ್ನು ಅಮಾನತು ಮಾಡಿ, ಆಂತರಿಕ ತನಿಖೆಗೆ ಆದೇಶಿಸಲಾಗಿದೆ.

ಉಪನ್ಯಾಸಕ ನೀಡಿದ್ದ ಹೇಳಿಕೆಯಿಂದ ಆಕ್ರೋಶಗೊಂಡಿದ್ದ ಯುವ ವಿದ್ಯಾರ್ಥಿಯೊಬ್ಬ ತರಗತಿಯಲ್ಲಿಯೇ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಈ ದೃಶ್ಯವನ್ನು ಕ್ಲಾಸ್‌ನಲ್ಲಿರುವ ಇತರೆ ವಿದ್ಯಾರ್ಥಿಗಳು ವಿಡಿಯೊ ಮಾಡಿಕೊಂಡಿದ್ದು, ಟ್ವಿಟರ್‌, ಇನ್ಸ್ಟಾಗ್ರಾಂ ಮುಖಾಂತರ ಹರಿಬಿಟ್ಟಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಏನಿದು ಪ್ರಕರಣ?
ನವೆಂಬರ್‌ ೨೬ರಂದು ತರಗತಿಯೊಳಗೆ ಪಾಠ ಮಾಡುವಾಗ ಉಪನ್ಯಾಸಕರೊಬ್ಬರು, ಮುಸ್ಲಿಮರು ಟೆರರಿಸ್ಟ್‌ಗಳು ಎಂಬ ಅರ್ಥದಲ್ಲಿ ಮಾತನಾಡಿದ್ದಾರೆನ್ನಲಾಗಿದೆ. ಇದರಿಂದ ತೀವ್ರ ಆಕ್ರೋಶಗೊಂಡ ವಿದ್ಯಾರ್ಥಿಯು ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಮುಸ್ಲಿಂ ಕಮ್ಯುನಿಟಿಯನ್ನು ಟೆರರಿಸ್ಟ್ ಎಂದು ಕರೆಯಬೇಡಿ ಎಂದು ಹೇಳಿದ ವಿದ್ಯಾರ್ಥಿಯು ಧರ್ಮದ ಆಧಾರದಲ್ಲಿ ಮಾತನಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾನೆ. ಅನಗತ್ಯ ತಮಾಷೆಯಾಗಿ ಈ ರೀತಿ ಮಾತನಾಡಬೇಡಿ ಎಂದು ಹೇಳಿದ್ದಾನೆ. ಆಗ ತಕ್ಷಣವೇ ಆ ಉಪನ್ಯಾಸಕ ಕ್ಷಮೆ ಕೋರಿದ್ದಾರೆ.

ಇದನ್ನೂ ಓದಿ | ಮಂಗಳೂರು ಸ್ಫೋಟ | ಏಳು ಕಡೆಗಳಲ್ಲಿ ಭಯೋತ್ಪಾದನೆ ವಿರುದ್ಧ ಜಾಗೃತಿ ಅಭಿಯಾನ, ಶಾರಿಕ್‌ ಪರ ವಕಾಲತ್ತು ಮಾಡದಂತೆ ಮನವಿ

ಆದರೆ, ತೀವ್ರ ಕುಪಿತಗೊಂಡಿದ್ದ ವಿದ್ಯಾರ್ಥಿಯು, ನೀವು ಕ್ಷಮೆ ಕೇಳಿದ ತಕ್ಷಣ ಮಾಡಿರುವ ಆರೋಪವು ಬದಲಾಗುವುದಿಲ್ಲ. ಎಲ್ಲ ವಿದ್ಯಾರ್ಥಿಗಳ ಸಮ್ಮುಖದಲ್ಲಿ ನೀವು ಮುಸ್ಲಿಂರು ಉಗ್ರರು ಎಂದು ಹೇಗೆ ಕರೆಯುತ್ತೀರಿ? ನೀವು ವೃತ್ತಿಪರರು, ಪಾಠ ಮಾಡುತ್ತಿದ್ದೀರಿ ಎಂಬುದರ ಅರಿವು ಇರಲಿ ಎಂದು ಹೇಳಿದ್ದಾನೆ.

ವಿಡಿಯೊ ವೈರಲ್ ಆಗುತ್ತಿದ್ದಂತೆ ಉಪನ್ಯಾಸಕನ ವಿರುದ್ಧ ಕ್ರಮ ಕೈಗೊಂಡಿರುವ ಮಾಹೆ ವಿವಿ, ಉಪನ್ಯಾಸಕನನ್ನು ಅಮಾನತುಗೊಳಿಸಿ ಆಂತರಿಕ ತನಿಖೆಗೆ ನಿರ್ಧರಿಸಿದೆ. ಅಲ್ಲದೆ, ವಿದ್ಯಾರ್ಥಿಗೆ ಕೌನ್ಸೆಲಿಂಗ್ ಮೂಲಕ ಸಾಂತ್ವನ ಹೇಳಿದ್ದಾಗಿ ಹೇಳಿಕೊಂಡಿದೆ.

ವಿವಿ ಪ್ರಕಟಣೆ
ವಿಡಿಯೊ ವೈರಲ್‌ ಆಗಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತಿರುವ ವಿವಿಯು ಪ್ರಕಟಣೆ ಹೊರಡಿಸಿದೆ. “ಘಟನೆ ಬಗ್ಗೆ ಸಂಸ್ಥೆ ಈಗಾಗಲೇ ತನಿಖೆಯನ್ನು ಪ್ರಾರಂಭಿಸಿದೆ. ಅಲ್ಲದೆ, ವಿಚಾರಣೆ ಮುಗಿಯುವವರೆಗೆ ಸಂಬಂಧಪಟ್ಟ ಸಿಬ್ಬಂದಿಯನ್ನು ತರಗತಿಗಳಿಂದ ನಿರ್ಬಂಧ ವಿಧಿಸಲಾಗಿದೆ. ಸಂಸ್ಥೆಯು ಈ ರೀತಿಯ ನಡವಳಿಕೆಯನ್ನು ಸಹಿಸುವುದಿಲ್ಲ ಎಂಬುದನ್ನು ಪ್ರತಿಯೊಬ್ಬರಿಗೂ ತಿಳಿಸಲು ನಾವು ಬಯಸುತ್ತೇವೆ. ಇದೊಂದು ವಿಶೇಷ ಘಟನೆ ಎಂದು ಪರಿಗಣಿಸಲಾಗಿದ್ದು, ನಮ್ಮ ನಿಯಮಾನುಸಾರ ನಿರ್ವಹಿಸಲಿದ್ದೇವೆ. ಈ ಸಂಸ್ಥೆಯು ಕ್ಯಾಂಪಸ್ ವೈವಿಧ್ಯತೆಗೆ ಹೆಚ್ಚಿನ ಒತ್ತು ನೀಡುತ್ತದೆ. ಎಲ್ಲ ಜಾತಿ, ಧರ್ಮ, ಪ್ರದೇಶ, ಲಿಂಗ ಇತ್ಯಾದಿಗಳನ್ನು ಲೆಕ್ಕಿಸದೆ ಎಲ್ಲರನ್ನೂ ಸಮಾನವಾಗಿ ಕಾಣುವ ನಮ್ಮ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಬದ್ಧವಾಗಿದೆ ಎಂದು ವಿವಿ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ಬರೆದುಕೊಂಡಿದೆ.

ಇದನ್ನೂ ಓದಿ | ಮಂಗಳೂರು ಸ್ಫೋಟ | ಯಕ್ಷಗಾನ, ಕಂಬಳ, ಜಾತ್ರೆಗೆ ಹಿಂದುಗಳ ಸೋಗಿನಲ್ಲಿ ಉಗ್ರರು ಬಂದಾರು, ಹುಷಾರು: ಪೇಜಾವರ ಶ್ರೀ

Exit mobile version